ಅಧಿಕಾರಿಗಳು ದರಕಾಸ್ತು ಹಾಗೂ ಪೋಡಿ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕು: ಶಾಸಕ ಕೆ.ಆರ್.ರಮೇಶ್ ಕುಮಾರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಅಧಿಕಾರಿಗಳು ದರಕಾಸ್ತು ಹಾಗೂ ಪೋಡಿ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ದರಕಾಸ್ತು ಜಮೀನು ಮಂಜೂರು ಮಾಡುವ ಮುನ್ನ ಸಂಬಂಧಪಟ್ಟ ಅಧಿಕರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ಕ್ರಮಬದ್ಧವಾಗಿ ಇದ್ದರೆ ಮಾತ್ರ ಅರ್ಜಿ ಇತ್ಯರ್ಥಪಡಿಸಬೇಕು ಎಂದು ಸೂಚಿಸಿದರು.
ಸ್ಮಶಾನ, ಕೆರೆ ಹಾಗೂ ಕಾಲುವೆಗಳ ಒತ್ತುವರಿ ತೆರವುಗೊಳಿಸಲು ಆದ್ಯತೆ ನೀಡಬೇಕು. ಸಾರ್ವಜನಿಕ ಆಸ್ತಿಗಳ ಒತ್ತುವರಿಯನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.
ಸ್ಮಶಾನ ರಹಿತ ಗ್ರಾಮ ಇರಬಾರದು. ಯಾವುದೇ ಗ್ರಾಮಕ್ಕೆ ಸ್ಮಶಾನ ಇಲ್ಲದಿದ್ದರೆ, ಜಾಗ ಗುರುತಿಸಿ ಮಂಜೂರು ಮಾಡಬೇಕು. ಮೂಲ ಸೌಕರ್ಯದ ಸಾಲಿನಲ್ಲಿ ಸ್ಮಶಾನಕ್ಕೂ ಮಾನ್ಯತೆ ಇದೆ. ಗೌರವಯುತವಾಗಿ ಅಂತ್ಯ ಸಂಸ್ಕಾರ ನೆರವೇರಿಸಲು ಸ್ಮಶಾನದ ಅಗತ್ಯವಿದೆ ಎಂದು ಹೇಳಿದರು.
ಬೆಸ್ಕಾಂ ಅಧಿಕಾರಿಗಳು ಸಮರ್ಪಕ ವಿದ್ಯುತ್ ಪೂರೈಕೆಗೆ ಅಗತ್ಯವಾದ ಕ್ರಮ ಕೈಗೊಳ್ಳಬೇಕು. ಗ್ರಾಮೀನ ಪ್ರದೇಶದಲ್ಲಿ ಕೃಷಿ ಹಾಗೂ ಕುಡಿಯುವ ನೀರು ಪೂರೈಕೆಗಾಗಿ ನಿರ್ಮಿಸಲಾಗಿರುವ ಕೊಳವೆ ಬಾವಿಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ಸರ್ಕಾರದ ಮಟ್ಟದಲ್ಲಿ ಏನಾದರೂ ಸೌಲಭ್ಯ ಬೇಕಾಗಿದ್ದಲ್ಲಿ ತಿಳಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್, ಉಪ ತಹಶೀಲ್ದಾರ್ ಬಲರಾಮೇಗೌಡ, ಶಿರಸ್ತೇದಾರ್ ಮನೋಹರ ಮಾನೆ, ಕಂದಾಯ ನಿರೀಕ್ಷರಾದ ಬಿ.ವಿ.ಮುನಿರೆಡ್ಡಿ, ಗುರುರಾಜರಾವ್, ಜನಾರ್ಧನ್, ವಿನೋದ್, ಹರಿ, ಜಿಲ್ಲಾ ಪಂಚಾಯಿತಿ ಮಾತಿ ಅಧ್ಯಕ್ಷ ಎಂ.ಶ್ರೀನಿವಾಸನ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಮುಖಂಡ ವೆಂಕಟಾದ್ರಿ ಇದ್ದರು.