ಕಾಂಗ್ರೆಸ್‍ನ ತುಷ್ಠೀಕರಣದ ರೂಪವೇ ಹುಬ್ಬಳ್ಳಿ ಘಟನೆ-ಮೌಲ್ವಿಗಳ ಸರ್ವೆಗೆ ಆಗ್ರಹ – ದೇಶದ ಕಾನೂನಿಗೆ ಗೌರವ ನೀಡದವರನ್ನು ಒದ್ದು ಒಳಗೆ ಹಾಕಿ- ಡಾ.ವೈ.ಎ.ಎನ್.

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಕಾಂಗ್ರೆಸ್‍ನ ತುಷ್ಠೀಕರಣ ನೀತಿಯಿಂದ ಹುಬ್ಬಳ್ಳಿ ಘಟನೆಯಾಗಿದೆ, ಈ ದೇಶದ ಕಾನೂನಿಗೆ ಗೌರವ ನೀಡದವರನ್ನು ಒದ್ದು ಒಳಗಾಕಿ, ಮೌಲ್ವಿಗಳ ಮೂಲ ಹುಡುಕುವ ಕೆಲಸವಾಗಲಿ, ಈ ಕುರಿತು ಸರ್ಕಾರ ಕೂಡಲೇ ಸಮಗ್ರ ತನಿಖೆಗೆ ಸೂಚಿಸಬೇಕು ಎಂದು ವಿಧಾನಪರಿಷತ್ ಸರ್ಕಾರದ ಮುಖ್ಯ ಸಚೇತಕ ಡಾ.ವೈ.ಎ. ನಾರಾಯಣ ಸ್ವಾಮಿ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದ ಕಾನೂನು ಪ್ರತಿಯೊಬ್ಬರೂ ಪಾಲನೆ ಮಾಡಲೇಬೇಕು, ಯಾರದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದರೆ ದೂರು ನೀಡಲಿ, ಕಾನೂನು ತನ್ನ ಕೆಲಸ ಮಾಡುತ್ತದೆ, ಅದು ಬಿಟ್ಟು ಏಕಾಏಕಿ ದೋಂಬಿ,ಗಲಭೆ ನಡೆಸಿ, ಸಾರ್ವಜನಿಕ ಆಸ್ತಿ ನಾಶ ಮಾಡಿದರೆ ಸಹಿಸಲು ಸಾಧ್ಯವಿಲ್ಲ, ಇಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಮೌಲ್ವಿಯೊಬ್ಬ ಡಿಸಿಪಿ ಕಾರಿನ ಮೇಲೆ ನಿಂತು ಪ್ರಚೋದನಾಕಾರಿ ಭಾಷಣ ಮಾಡುತ್ತಾರೆ ಎಂದರೆ ಈ ಮೌಲ್ವಿಗಳು ಯಾವರಾಜ್ಯ,ದೇಶದಿಂದ ಬಂದವರು, ಅವರ ಸರ್ವೆ ನಡೆಸಬೇಕು, ಮದರಸ, ಮಸೀದಿಗಳಲ್ಲಿ ಇವರು ಏನು ಹೇಳಿಕೊಡುತ್ತಾರೆ ಎಂಬುದು ಪಾರದರ್ಶಕವಾಗಿರಬೇಕು ಎಂದು ತಾಕೀತು ಮಾಡಿದರು. ಮೌಲ್ವಿಗಳ ವ್ಯವಹಾರ ಬಯಲಿಗೆ ತನ್ನಿ, ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಅಧ್ಯಕ್ಷನ ಬಂಧನವಾಗಿದೆ, ಮುಸ್ಲೀಮರಲ್ಲಿ ಮುಗ್ದರಿದ್ದಾರೆ, ಆದರೆ ಕಾಂಗ್ರೆಸ್ ಅವರನ್ನು ದಾರಿತಪ್ಪಿಸುತ್ತಿದೆ ಎಂದು ಟೀಕಿಸಿದರು.


ಡಿಕೆ,ಕೆಜಿಹಳ್ಳಿ ಘಟನೆ -ಸ್ವರೂಪ ಹುಬ್ಬಳ್ಳಿ ಘಟನೆ


ಡಿಕೆಹಳ್ಳಿ ಹಾಗೂ ಕೆಜಿ ಹಳ್ಳಿ ಘಟನೆಯ ಸ್ವರೂಪವೇ ಹುಬ್ಬಳ್ಳಿ ಘಟನೆ ಎಂದು ಖಂಡಿಸಿದ ಅವರು, ಕಾಂಗ್ರೆಸ್ ನಾಯಕರು ತಮ್ಮ ಪರಿಶಿಷ್ಟ ಶಾಸಕರ ಮನೆಗೆ ಬೆಂಕಿ ಇಟ್ಟರೂ ಅವರಿಗೆ ಸಾಂತ್ವಾನ ಹೇಳಲ್ಲ, ಓಟಿಗಾಗಿ ತುಷ್ಟೀಕರಣ ಮಾಡುತ್ತಾರೆ, ಕಾಂಗ್ರೆಸ್ ಮಾತಾಡಿದರೆ ಜಾತ್ಯಾತೀತವಾದ, ಬಿಜೆಪಿ ಮಾತನಾಡಿದರೆ ಕೋಮುವಾದವೇ ಎಂದು ಪ್ರಶ್ನಿಸಿ, ಸಿದ್ದರಾಮಯ್ಯ ಕೇಸರಿ ಶಾಲು ಬಿಸಾಡಿದರೆ, ಮಾಂಸ ತಿಂದು ದೇವಾಲಯಕ್ಕೆ ಹೋದರೆ ಜಾತ್ಯಾತೀತವಾದವೇ ಎಂದು ಕಿಡಿಕಾರಿದರು.


ಹೆಚ್ಚುವರಿ ಶಿಕ್ಷಕರ – ಸಮಸ್ಯೆಗೆ ಪರಿಹಾರ


ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು,ಶಿಕ್ಷಕರು ಆತಂಕ ಪಡುವ ಅಗತ್ಯವಿಲ್ಲ, ಹೆಚ್ಚುವರಿ ಶಿಕ್ಷಕರ ಸಮಸ್ಯೆ ಕುರಿತು ಚರ್ಚಿಸಲು ಏ.26 ರಂದು ಪ್ರಾಥಮಿಕ ಶಿಕ್ಷಣ ಸಚಿವರೊಂದಿಗೆ ಸಭೆ ನಡೆಯಲಿದ್ದು, ಅಂದು ಸೂಕ್ತ ಪರಿಹಾರ ಸಿಗಲಿದೆ ಮತ್ತು ಯಾವೊಬ್ಬ ಶಿಕ್ಷಕರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿದೆ, ಇದಾದ ನಂತರ ಸಾಧಕಬಾಧಕಗಳನ್ನು ಪರಿಶೀಲಿಸಿದ ನಂತರ ಮುಂದಿನ ವರ್ಷ ಈ ಕುರಿತು ಪರಿಶೀಲಿಸಿ, ಈ ವರ್ಷ ಹೆಚ್ಚುವರಿ ಕೈಬಿಡಿ ಎಂದು ಕೋರಲಾಗಿದೆ ಎಂದರು.


ಕೇಂದ್ರ ಸಮಾನ ವೇತನ ಜಾರಿ


ಮುಖ್ಯಮಂತ್ರಿಗಳು ಡಿಸೆಂಬರ್ ಒಳಗೆ ಕೇಂದ್ರ ಸಮಾನವೇತನ ಜಾರಿಯ ಭರವಸೆ ನೀಡಿದ್ದಾರೆ, ಹಳೆ ಪಿಂಚಣಿ ವ್ಯವಸ್ಥೆಯೂ ಜಾರಿಯ ವಿಶ್ವಾಸವಿದೆ, ಈಗಾಗಲೇ 7 ರಾಜ್ಯಗಳಲ್ಲಿ ಒಪಿಎಸ್ ಬಂದಿದೆ, ನಮ್ಮ ರಾಜ್ಯದಲ್ಲೂ ಕ್ರಮವಾಗಲಿದೆ ಎಂದು ತಿಳಿಸಿದರು.
1994 ರಿಂದ 2005 ರವರೆಗಿನ ಕನ್ನಡ ಮಾಧ್ಯಮ ಖಾಸಗಿ ಶಾಲೆಗಳಿಗೆ ಅನುದಾನ ನೀಡುವ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ, ಅನುದಾನಿತ ಶಾಲೆಗಳಿಗೂ ಜ್ಯೋತಿ ಸಂಜೀವಿನಿ ಮುಂದುವರೆಸಲು ಕೋರಲಾಗಿದೆ, ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ಶಿಕ್ಷಕರ ಕಲ್ಯಾಣ ನಿಧಿಯಿಂದ ನೆರವು ನೀಡುವ ಕುರಿತು ಕೋರಲಾಗಿದೆ ಎಂದರು.
ಪಠ್ಯದಲ್ಲಿ ಭಗವದ್ಗೀತೆ ತರುವ ಶಿಕ್ಷಣ ಸಚಿವ ನಾಗೇಶ್ ಅವರ ಆಶಯ ಉತ್ತಮವಾಗಿದೆ, ಧರ್ಮ ಯಾವುದೇ ಇರಲಿ ಎಲ್ಲಾ ಧರ್ಮಗಳಲ್ಲಿನ ಮಾನವೀಯ ವಿಚಾರಗಳನ್ನು ಪಠ್ಯದಲ್ಲಿ ತರಲಿ ಎಂದರು.
ಇದೇ ಸಂದರ್ಭದಲ್ಲಿ ಅನುದಾನಿತ ಶಾಲೆಗಳ ಶಿಕ್ಷಕರ ವೇತನ ವಿಳಂಬದ ಸಂಬಂಧ ಅಗತ್ಯ ಕ್ರಮವಹಿಸಲು ಜಿಪಂ ಸಿಇಒ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಬಿಜೆಪಿ ಮುಖಂಡರಾದ ಮುರಳಿಗೌಡ, ವಿಜಯಕುಮಾರ್, ಶ್ರೀಧರಮೂರ್ತಿ,ಶ್ರೀಕೃಷ್ಣ, ಪಾಲ್ಗುಣ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣಪ್ಪ, ನಿವೃತ್ತ ಬಿಇಒ ನಾಗರಾಜಗೌಡ, ಸಹ್ಯಾದ್ರಿ ಉದಯಕುಮಾರ್, ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ, ದಾಸಪ್ಪ, ಶಿಕ್ಷಕರಾದ ಕವಿತಾ, ನಾರಾಯಣರೆಡ್ಡಿ, ಶಿವಕುಮಾರ್, ಮುಕುಂದ, ಶಂಕರೇಗೌಡ, ಚಂದ್ರಪ್ಪ, ದೇವಿರೆಡ್ಡಿ, ಚೆಂಗಲರಾಯಪ್ಪ, ವೆಂಕಟಪ್ಪ, ಅಶ್ವಥ್ಥನಾರಾಯಣಗೌಡ, ಪ್ರಭಾಕರ್, ನಾಗಾನಂದ್, ಬೈರೇಗೌಡ, ಮಲ್ಲಿಕಾರ್ಜುನ್, ಮೋಹನಾಚಾರಿ,ರಮೇಶ್‍ಗೌಡ ಮತ್ತಿತರರಿದ್ದರು.