ಅಂಗನವಾಡಿ ಮಕ್ಕಳ, ಗರ್ಭಿಣಿ ಬಾಣಂತಿಯರ ಪುಷ್ಠಿ ಆಹಾರ ಕಾಳ ಸಂತೆಯಲ್ಲಿ ಮಾರಾಟ ; ಕ್ರಮಕ್ಕೆ ಪ್ರೋ.ಎಂ.ಡಿ.ಎನ್. ರೈತ ಸಂಘ ಒತ್ತಾಯ

ಕೋಲಾರ 27 ಫೆಬ್ರವರಿ : ಕೋಲಾರ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳ ಪೌಷ್ಠಿಕ ಆಹಾರ, ಬೇತಮಂಗಲ ಕಾಳಸಂತೆಯಲ್ಲಿ ಮಾರಾಟ ಮಾಡಿರುವುದನ್ನು ತನಿಖೆ ಮಾಡಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್ ರವರಿಗೆ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ಒತ್ತಾಯಿಸಿದ್ದಾರೆ.
ಕೋಲಾರ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಪುಟ್ಟ ಮಕ್ಕಳಿಗೆ, ಗರ್ಭಿಣಿ ಬಾಣಂತಿಯರಿಗೆ ಪೌಷ್ಠಿಕಾಂಶಗಳುಳ್ಳ ಪುಷ್ಠಿ ಎಂಬ ಹೆಸರಿನ ಆಹಾರ ಪಾಕೆಟ್‍ಗಳನ್ನು ಸರಬರಾಜು ಮಾಡುತ್ತಿದ್ದಾರೆ. ಮಕ್ಕಳಿಗೆ ಗರ್ಭಿಣಿಯರಿಗೆ, ಬಾಣಂತಿಯರಿಗೆ ಪೌಷ್ಠಿಕಾಂಶದ ಕೊರತೆ ಉಂಟಾಗದ ರೀತಿ ಫಲಾನುಭವಿಗಳಿಗೆ ವಿತರಣೆ ಮಾಡಲು ತಾಲ್ಲೂಕಿನ ಸಿಡಿಪಿಒ, ಸೂಪರ್‍ವೈಜರ್, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಆಹಾರ ಸರಬರಾಜುದಾರರಿಗೆ (ಎಂಎಸ್‍ಪಿಟಿ) ಆಹಾರ ತಯಾರಿಕಾ ಘಟಕದವರಿಗೆ ಜವಾಬ್ದಾರಿ ಇರುತ್ತದೆ.
ಆದರೆ ಕೋಲಾರ ತಾಲ್ಲೂಕಿನ ಎಂ.ಎಸ್.ಪಿ.ಟಿ. ಪೌಷ್ಠಿಕಾಂಶವುಳ್ಳ ಆಹಾರ ಪಾಕೆಟ್‍ಗಳ ಮೇಲೆ ಮಹಿಳಾ ಪೂರಕ ಪೌಷ್ಠಿಕ ಆಹಾರ ತಯಾರಿಕಾ ಘಟಕ, ವಿದ್ಯಾಜ್ಯೋತಿ ಶಾಲೆ ಹಿಂಭಾಗ, ಕಳ್ಳೀಪುರ, ಹೊನ್ನೇನಹಳ್ಳಿ ಕೋಲಾರ ತಾಲ್ಲೂಕು ಎಂದು ಮುದ್ರಿಸಲಾಗಿದೆ. ಈ ಆಹಾರ ಪಟ್ಟಣಗಳು ಬೇತಮಂಗಲದ ಸಣ್ಣ ಸಣ್ಣ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ ಇದರ ಹಿಂದೆ ಬಲಾಡ್ಯರು, ಅಧಿಕಾರಿಗಳ ಹಸ್ತವಿದ್ದು, ಇದರ ಬಗ್ಗೆ ಸೂಕ್ತ ತನಿಖೆ ನಡೆಸಲು ಒತ್ತಾಯಿಸಿದ್ದಾರೆ. ಈ ಒಂದು ಕಾಳಸಂತೆ ದಂದೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಆಹಾರ ಸರಬರಾಜುದಾರರು ಆಹಾರ ತಯಾರಿಕಾ ಘಟಕದವರು ಶಾಮೀಲಾಗಿದ್ದಾರೆ ಎಂಬ ಸಾರ್ವಜನಿಕ ವಲಯದಲ್ಲಿ ಅನುಮಾನ ವ್ಯಕ್ತವಾಗಿದ್ದು, ಕೋಲಾರ ನಗರದ ಅಂಗನವಾಡಿ ಕೇಂದ್ರಗಳನ್ನು ಖುದ್ದು ಪರಿಶೀಲಿಸಬೇಕೆಂದು ಮತ್ತು ನಕಲಿ ಫಲಾನುಭವಿಗಳ ದಾಖಲಾತಿಗಳನ್ನು ಅಂಗನವಾಡಿ ಕೇಂದ್ರಗಳಲ್ಲಿ ಇರುವುದಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಇವರ ವಿರುದ್ಧ ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್ ಮಾತನಾಡಿ ಕಾಳ ಸಂತೆಯಲ್ಲಿ ಮಾರಾಟವಾದ ಪುಷ್ಟಿ ಪಾಕೆಟ್ ವಿಚಾರವಾಗಿ ಈಗಾಗಲೇ ಸಂಬಂಧಪಟ್ಟವರ ಮೇಲೆ ಕೇಸು ದಾಖಲು ಮಾಡಿದ್ದು, ತನಿಖೆ ಮಾಡುತ್ತಿದ್ದೇವೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹಾಗೂ ಮಕ್ಕಳ, ಗರ್ಭಿಣಿ ಭಾಣಂತಿಯರ ಪುಷ್ಟಿ ಪೌಷ್ಠಿಕಾಂಶದ ಆಹಾರ ಪಾಕೆಟ್‍ಗಳನ್ನು ಸರಬರಾಜು ಮಾಡುತ್ತಿರುವವರ ವಿರುದ್ಧ ಹಾಗೂ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಯುವ ಘಕದ ರಾಜ್ಯಾಧ್ಯಕ್ಷ ಕಲ್ವಮಂಜಲಿ ರಾಮು ಶಿವಣ್ಣ, ಜಿಲ್ಲಾ ಗೌರವಾಧ್ಯಕ್ಷ ಕೊತ್ತಮಿರಿ ಜಿ. ಮಂಜುನಾಥ್, ಜಿಲ್ಲಾಧ್ಯಕ್ಷ ಕೊಲದೇವಿ ಗೋಪಾಲಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ಕೋಲಾರ ತಾಲ್ಲೂಕು ಅಧ್ಯಕ್ಷ ಜಗನ್ನಾಥರೆಡ್ಡಿ, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ದೊಡ್ಡಕುರುಬರಹಳ್ಳಿ ಶಂಕರೇಗೌಡ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಎಲ್.ಎನ್.ಬಾಬು, ತೇರಹಳ್ಳಿ ಚಂದ್ರಪ್ಪ ಮುಂತಾದವರು ದೂರು ಸಲ್ಲಿಸಿದರು.