

ಉದ್ಯಾವರ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ಲಯನ್ಸ್ ಜಿಲ್ಲೆ 317Cಯ ಲಯನ್ ದಂಪತಿಗಳಿಗೆ ವಿನೂತನ ರೀತಿಯ ಆದರ್ಶ ದಂಪತಿ ಸ್ಪರ್ಧೆ ಉದ್ಯಾವರ ಚರ್ಚ್ ವಠಾರದಲ್ಲಿ ನವಂಬರ್ 24 ಆದಿತ್ಯವಾರದಂದು ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ
ಎಚ್’ಪಿಆರ್ ಫಿಲಂಸ್ ಪ್ರಾಯೋಜಿತ ಆದರ್ಶ ದಂಪತಿ ಸ್ಪರ್ಧೆಯ ಪೋಸ್ಟರ್ ಅನ್ನು ಎಚ್’ಪಿಆರ್ ಫಿಲಂಸ್ ಮುಖ್ಯಸ್ಥ ಮತ್ತು ಎಲ್’ಸಿಯಫ್ ಕೋಆರ್ಡಿನೇಟರ್ ಲಯನ್ ಹರಿಪ್ರಸಾದ್ ರೈ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉದ್ಯಮಿ ಡಾ. ಶೇಕ್ ವಹಿದ್ ಉಡುಪಿ, ಕಾಪು ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷ ಮತ್ತು ಪತ್ರಕರ್ತ ರಾಕೇಶ್ ಕುಂಜೂರು, ಪ್ರಾಂತೀಯ ಅಧ್ಯಕ್ಷ ಲಯನ್ ಮೆಲ್ವಿನ್ ಆರನ್ನ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿ, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಕಂದಾಯ ಜಿಲ್ಲೆಗಳನ್ನೊಳಗೊಂಡ ಲಯನ್ ಜಿಲ್ಲೆ 317Cಯಲ್ಲಿ 115 ಕ್ಲಬ್ ಗಳಿದ್ದು, ಆದರ್ಶ ದಂಪತಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇದೆ. ವಾರ್ಷಿಕ ವಿವಿಧ ಸೇವಾ ಮತ್ತು ಸಾಮಾಜಿಕ ಚಟುವಟಿಕೆಗಳ ಸಹಾಯಾರ್ಥವಾಗಿ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಈ ಸ್ಪರ್ಧೆಯನ್ನು ವಿನೂತನ ರೀತಿಯಲ್ಲಿ ಹಮ್ಮಿಕೊಂಡಿದ್ದು, ಮೊದಲು ನೋಂದಾಯಿಸಿದ 25 ಲಯನ್ಸ್ ದಂಪತಿಗಳಿಗೆ ಮಾತ್ರ ಅವಕಾಶ ಇದೆ. ಮೂರು ಸುತ್ತುಗಳಲ್ಲಿ ನಡೆಯಲಿರುವ ಈ ಸ್ಪರ್ಧೆಯು ಕ್ಷಣ ಕ್ಷಣಕ್ಕೂ ಕುತೂಹಲದೊಂದಿಗೆ ಸಂಗೀತ ಸುದೆ, ಹಾಸ್ಯ ಲಹರಿ, ಸಾಂಸ್ಕೃತಿಕ ವೈಭವದೊoದಿಗೆ ನಡೆಯಲಿದೆ.
ಶಿಕ್ಷಕರು ಮತ್ತು ರಾಷ್ಟ್ರೀಯ ಜೆಸಿ ತರಬೇತುದರಾಗಿರುವ ಜೆ ಸಿ ರಾಜೇಂದ್ರ ಭಟ್ ಕಾರ್ಯಕ್ರಮದ ನಿರೂಪಣೆ ನಡೆಸಲಿದ್ದು, ವಿಶೇಷ ಆಕರ್ಷಣೆಯಾಗಿ ತುಳುರಂಗಭೂಮಿಯ ಪ್ರಭುದ್ಧ ಹಾಸ್ಯ ಮತ್ತು ಚಲನಚಿತ್ರ ನಟರಾದ ಅರವಿಂದ ಬೋಳಾರ್, ದಾಯ್ಜಿ ವರ್ಲ್ಡ್ ಸ್ಥಾಪಕ ವಾಲ್ಟರ್ ನಂದಳಿಕೆ, ಗಿನ್ನೆಸ್ ದಾಖಲೆ ಖ್ಯಾತಿಯ ಯೋಗರತ್ನ ತನುಶ್ರೀ ಪಿತ್ರೋಡಿ ಮತ್ತು ಮಿಡಲ್ ಕ್ಲಾಸ್ ಫ್ಯಾಮಿಲಿ ಚಲನಚಿತ್ರ ತಂಡ ಆಗಮಿಸಲಿದ್ದಾರೆ.
ಪ್ರತಿಷ್ಠಿತ ಎಚ್’ಪಿಆರ್ ಫಿಲಂಸ್ ಪ್ರಾಯೋಜಿತ ಆದರ್ಶ ದಂಪತಿ ಸ್ಪರ್ಧೆಯು ಉಚಿತ ಪ್ರವೇಶವಾಗಿದ್ದು, ಪ್ರಥಮ ಬಹುಮಾನ ರೂ. 15,000 ಮೌಲ್ಯದ ಗಿಫ್ಟ್ ವೋಚರ್ ಮತ್ತು ಟ್ರೋಫಿ, ದ್ವಿತೀಯ ಬಹುಮಾನ 10 ಸಾವಿರ ರೂ. ಮೌಲ್ಯದ ಗಿಫ್ಟ್ ವೋಚರ್ ಮತ್ತು ಟ್ರೋಫಿ, ತೃತೀಯ ಬಹುಮಾನ 7.5 ರೂ. ವೆಚ್ಚದ ಗಿಫ್ಟ್ ವೋಚರ್ ಮತ್ತು ಟ್ರೋಫಿ, ಫೈನಲ್ ಸ್ಪರ್ಧಿಗಳಿಗೆ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರತಿಷ್ಠಿತ ಕಂಪನಿಗಳ ಗಿಫ್ಟ್ ವೋಚರ್ ಲಭಿಸಲಿದೆ.
ಒಂದು ಕ್ಲಬ್ ನಿಂದ ಒಂದು ದಂಪತಿಗೆ ಮಾತ್ರ ಅವಕಾಶವಿದ್ದು, ನವೆಂಬರ್ 10 ಹೆಸರು ನೋಂದಾಯಿಸಲು ಕೊನೆಯ ದಿನಾಂಕ. ಕಾರ್ಯಕ್ರಮದ ಸಂಚಾಲಕ ಲಯನ್ ಸ್ಟೀವನ್ ಕುಲಾಸೊ ಇವರ ಮೊಬೈಲ್ ಸಂಖ್ಯೆ 9901701381 ಗೆ ಹೆಚ್ಚಿನ ಮಾಹಿತಿ ಮತ್ತು ಹೆಸರು ನೋಂದಾಯಿಸಲು ಸಂಪರ್ಕಿಸಬಹುದಾಗಿದೆ.

