ಮುಸ್ಲಿಮೇತರ ನಿರಾಶ್ರಿತರಿಗೆ ಪೌರತ್ವ ಪಡೆಯಬಹುದು; ಅರ್ಜಿ ಆಹ್ವಾನಿಸಿದ ಕೇಂದ್ರ

JANANUDI.COM NETWORK


ನವದೆಹಲಿ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೆ ಸೇರಿದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯ ಪೌರತ್ವ ಪಡೆಯಲು ಕೇಂದ್ರವು ಶುಕ್ರವಾರ ಅರ್ಜಿಗಳನ್ನು ಆಹ್ವಾನಿಸಿದೆ. ಕಿರುಕುಳಕ್ಕೊಳಗಾದ ಗುಜರಾತ್, ರಾಜಸ್ಥಾನ, ಛತ್ತೀಸ್ಗಢ, ಹರಿಯಾಣ ಮತ್ತು ಪಂಜಾಬ್ನ 13 ಜಿಲ್ಲೆಗಳಲ್ಲಿ ನೆಲೆಸಿರುವ ಹಿಂದೂ, ಸಿಖ್, ಜೈನ್, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್, ಅಂದರೆ ಮುಸ್ಲಿಮರಲ್ಲದ ಅಲ್ಪಸಂಖ್ಯಾತರು ಭಾರತೀಯ ಪೌರತ್ವಕ್ಕೆ ಈಗ ಅರ್ಜಿ ಸಲ್ಲಿಸಬಹುದು.
ಪೌರತ್ವ ಕಾಯ್ದೆ 1955, ಮತ್ತು 2009 ರಲ್ಲಿ ರೂಪಿಸಲಾದ ನಿಯಮಗಳ ಅಡಿಯಲ್ಲಿ ನೀಡಲಾಗಿರುವ ಈ ಆದೇಶವನ್ನು ತಕ್ಷಣದಿಂದಲೇ ಅನುಷ್ಠಾನಗೊಳಿಸಲು ಕೇಂದ್ರ ಗೃಹ ಸಚಿವಾಲಯ ಈ ಅಧಿಸೂಚನೆಯನ್ನು ಹೊರಡಿಸಿದೆ.
ಇದೇ ಉದ್ದೇಶದಿಂದ 2019 ರಲ್ಲಿ ಜಾರಿಗೆ ತರಲಾದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ನಿಯಮಗಳನ್ನು ಇನ್ನೂ ರೂಪಿಸಬೇಕಾಗಿರುವುದರಿಂದ, ಈಗಾಗಲೇ ಜಾರಿಯಲ್ಲಿರುವ ಪೌರತ್ವ ಕಾಯ್ದೆ 1955 ಮತ್ತು 2009 ರಲ್ಲಿ ಚಾಲ್ತಿಯಲ್ಲಿರುವ ನಿಯಮಗಳನ್ನು ತಕ್ಷಣ ಜಾರಿಗೆ ತರಲು ಕೇಂದ್ರ ಗೃಹ ಸಚಿವಾಲಯ ಈ ಅಧಿಸೂಚನೆಯನ್ನು ಹೊರಡಿಸಿದೆಯೆಂದು ತಿಳಿಸಿದೆ.
2019 ರಲ್ಲಿ ಜಾರಿಗೆ ಬಂದ ಪೌರತ್ವ ತಿದ್ದುಪಡಿ ಕಾಯ್ದೆಗೂ ಈ ಆದೇಶಕ್ಕೂ ಯಾವುದೇ ರೀತಿಯಲ್ಲಿ ಸಂಬಂಧ ಇಲ್ಲ ಎಂದು ಕೇಂದ್ರ ಹೇಳಿದೆ. 2019 ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಾಗ ದೇಶದ ವಿವಿಧ ಕಡೆ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. 2014 ರ ಡಿಸೆಂಬರ್ 31 ರವರೆಗೆ ಭಾರತಕ್ಕೆ ಬಂದಿದ್ದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹಿಂದೂ, ಸಿಖ್, ಜೈನ್, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ಕಿರುಕುಳಕ್ಕೊಳಗಾದ ಮುಸ್ಲಿಮರಲ್ಲದ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡಲು ಈ ಪೌರತ್ವ ಆದೇಶದನ್ವಯ ಅವಕಾಶ ಕಲ್ಪಿಸಿದೆಯೆಂದು ತಿಳಿಸಿದೆ
.