ಕೆಜಿಎಫ್ ನಗರ ವ್ಯಾಪ್ತಿಯಲ್ಲಿ ಕಾಮಗಾರಿಗಳು ಪೂರ್ಣಗೊಂಡಿಲ್ಲ, ಕಾಮಗಾರಿ ಕಳೆಪೆ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮಜರುಗಿಸಿ: ರೂಪಕಲಾ ಶಶಿಧರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ: ಜಿಲ್ಲೆಯ ಕೆಜಿಎಫ್ ನಗರ ವ್ಯಾಪ್ತಿಯಲ್ಲಿ ನಗರೋತ್ಥೋನಾ ಹಾಗೂ ಅಮೃತ ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿಗಳು ಸಕಾಲಕ್ಕೆ ಪೂರ್ಣಗೊಂಡಿಲ್ಲ. ಜೊತೆಗೆ ಕಾಮಗಾರಿ ಕಳೆಪೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಿ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮಜರುಗಿಸಬೇಕು ಎಂದು ಶಾಸಕ ರೂಪಕಲಾ ಶಶಿಧರ್ ಒತ್ತಾಯಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಕೆಜಿಎಫ್ ಕ್ಷೇತ್ರದ ಅಭಿವೃದ್ಧಿ ಕುರಿತು ಮಂಗಳವಾರ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು, ನಗರಸಭೆ ವ್ಯಾಪ್ತಿಯಲ್ಲಿನ ಟೆಂಡರ್‍ಗಳನ್ನು ಹೊರ ರಾಜ್ಯದ ಗುತ್ತಿಗೆದಾರರು ಟೆಂಡರ್ ಪಡೆದುಕೊಂಡಿದ್ದಾರೆ. ಅವರು ಮಾಡಿರುವ ಕಳಪೆ ಕೆಲಸಕ್ಕೆ ಸಾರ್ವಜನಿಕರಿಗೆ ನಾವು ಉತ್ತರ ಕೊಡಲಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಗಂಭೀರತೆಯಿಲ್ಲವಾಗಿದೆ ಎಂದು ಅಸಮಾಧಾನವ್ಯಕ್ತಪಡಿಸಿದರು.
ನಗರದಲ್ಲಿ 75 ಕಿಮಿ ಯುಜಿಡಿ ಕಾಮಗಾರಿ ನಡೆಸಲಾಗಿದೆ. ನಗರದಲ್ಲಿ ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. 150 ಕೋಟಿ ವೆಚ್ಚದಲ್ಲಿ ನೀರಾವರಿ ಕಾಮಗಾರಿಗಳನ್ನು ಕೈಗೊಳ್ಳಾಗಿದೆ. ಆದರೆ ಇದುವರೆಗೂ ಕೆಲಸಗಳನ್ನು ಮುಗಿಸಲು ಸಾಧ್ಯವಾಗಿಲ್ಲ. ಕಾಲಮಿತಿಯೊಳಗೆ ಕಾಮಗಾರಿ ಮುಗಿಸದ ಹಿನ್ನಲೆಯಲ್ಲಿ ರಿವೈಜ್ ಹಣಕ್ಕೆ ಬೇಡಿಕೆ ಇಡುತ್ತಾರೆ. ಇದರ ಕಡೆ ಗಮನಹರಿಸಬೇಕು ಎಂದರು.
ಕೇಂದ್ರ ಸರ್ಕಾರದ ಅಧೀನದಲ್ಲಿರುವ 2,000 ಎಕರೆ ಬಿಇಎಂಎಲ್ ಜಾಗ ಖಾಲಿಯಾಗಿದೆ. ಆಜಾಗದಲ್ಲಿ ಕೈಗಾರಿಕ ಪ್ರದೇಶ ಸ್ಥಾಪನೆ ಮಾಡಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸಚಿವರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಜಾಗದಲ್ಲಿ ಗಣಿ ಸ್ಥಗಿತಗೊಂಡ ಮೇಲೆ ಸಾವಿರಾರು ಕುಟುಂಬಗಳು ಬೀದಿಪಾಲಾಗಿವೆ. ನಿರುದ್ಯೋಗಸ್ಥರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಸರ್ಕಾರಕ್ಕೆ ಕೂಡಲೇ ಪ್ರಸ್ತಾವ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ವಸತಿ ರಹಿತರಿಗೆ ಸೂರು ಕಲ್ಪಿಸಲು 15 ಎಕರೆ ಜಾಗ ಗುರುತಿಸಲಾಗಿದೆ. ಸದರಿ ಜಾಗವು ಉಪ ವಿಭಾಗಾಧಿಕಾರಿಗಳ ಹೆಸರಿನಲ್ಲಿ ಇದೆ. ಕೂಡಲೇ ನಗರಸಭೆಗೆ ಹಸ್ತಾಂತರ ಮಾಡಲು ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ತಮ್ಮ ಕಚೇರಿಗೆ ಕಡತ ಬಂದ ತಕ್ಷಣ ಕೂಡಲೇ ಮಂಜೂರು ಮಾಡಿಕೊಡಲಾಗುವುದು ಎಂದು ಡಿಸಿ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಪರಿಶಿಷ್ಟ ಪಂಗಡ ಕಾಲೋನಿ ಅಭಿವೃದ್ಧಿಗೆ ಸರ್ಕಾರ 3 ಕೋಟಿ ಸಮಾನ್ಯ ಅನುದಾನ ಬಿಡುಗಡೆ ಮಾಡಿದೆ. ಆದರೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಕ್ಷೇತ್ರದ ಶಾಸಕರ ಗಮನಕ್ಕೆ ತರಾದೆ ಕ್ರಿಯಾಯೋಜನೆ ತಯಾರಿಸಿದ್ದಾರೆ. ಹೊರಗಿನ ವ್ಯಕ್ತಿಗಳ ಒತ್ತಡಗಳಿಗೆ ಮಣಿದು ಅವರು ನೀಡಿರುವ ಕ್ರಿಯಾಯೋಜನೆಗೆ ಅನುಮೋದನೆ ನೀಡಲು ಮುಂದಾಗಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ಸದರಿ ಅನುಮೋದನೆಯನ್ನು ರದ್ದುಗೊಳಿಸಿ ನಾನು ತಯಾರಿಸಿಕೊಡುವ ಕ್ರಿಯಾಯೋಜನೆಗೆ ಅನುಮೋದನೆ ನೀಡಬೇಕು. ಈ ವಿಚಾರದಲ್ಲಿ ನಿರ್ಲಕ್ಷ ತೋರಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಜರುಗಿಸಬೇಕು ಎಂದು ಕೋರಿದರು.
ಕೆಜಿಎಫ್ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮುಂಡಾಲ ಜಾತಿಗೆ ಸೇರಿದವರಿಗೆ ಜಾತಿ ಪ್ರಮಾಣ ಪತ್ರ ವನನ್ನು ತಹಶೀಲ್ದಾರ್ ನೀಡುತ್ತಿಲ್ಲ. ಇದರಿಂದಾಗಿ ಆ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ, ಉದ್ಯೋಗ ಪಡೆದುಕೊಲ್ಲು ತೊಂದರೆಯಾಗುತ್ತಿದೆ. ರಾಜ್ಯದ ಬೇರೆ ಬೇರೆ ತಾಲ್ಲೂಕುಗಳಲ್ಲಿ ಇರುವ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಹಿಂದಿನ ತಹಶೀಲ್ದಾರ್‍ಗಳು ಸಹ ವಿತರಣೆ ಮಾಡುತ್ತಿದ್ದರು. ಸಮುದಾಯದವ ಮುಖಂಡರು ತಹಶೀಲ್ದಾರ್ ಕಚೇರಿಗೆ ಹೋಗಿ ಜಾತಿ ಪ್ರಮಾಣ ಪತ್ರ ವಿತರಣೆ ಮಾಡುವಂತೆ ತಹಶೀಲ್ದಾರ್‍ರವರಿಗೆ ಮನವಿ ಮಾಡಿದೆರ ಕೊಡಲು ಅವಕಾಶ ಇಲ್ಲ ಎಂದು ಸಬೂಬು ಹೇಳಿ ಕಳುಹಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ವೆಂಕಟರಾಜ, ಕೂಡಲೇ ಕೆಜಿಎಫ್ ತಹಶೀಲ್ದಾರ್‍ರವರನ್ನು ಕರೆಯಿಸಿ ಮುಂಡಾಲ ಸಮುದಾಯವರಿಗೆ ಜಾತಿ ಪ್ರಮಾಣ ಪತ್ರ ಕಲ್ಪಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಗರಸಭೆ ಅಧ್ಯಕ್ಷ ವಿ.ಮುನಿಸ್ವಾಮಿ, ಪೌರಾಯುಕ್ತ ನವೀನ್ ಚಂದ್ರ ಹಾಜರಿದ್ದರು.