ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ಪರೀಕ್ಷೆ ಕುರಿತು ಭಯ ಬೇಡ, ಮಾಸ್ಕ್,ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಪಾಲಿಸಿ ಆತ್ಮಸ್ಥೈರ್ಯದಿಂದ ಅಭ್ಯಾಸ ಮುಂದುವರೆಸಿ, ನಿಮ್ಮ ಸುರಕ್ಷತೆಗೆ ನಿಮ್ಮ ಪೋಷಕರು,ಶಿಕ್ಷಕರು ಮಾತ್ರವಲ್ಲ ಇಡೀ ಸರ್ಕಾರವೇ ಇದೆ ಎಂದು ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ಕುಮಾರ್ ಮಕ್ಕಳಿಗೆ ಧೈರ್ಯ ತುಂಬಿದರು.
ಮುಳಬಾಗಿಲಿಗೆ ಭೇಟಿ ನೀಡಿದ ನಂತರ ಕೋಲಾರ ತಾಲ್ಲೂಕಿನ ಹುತ್ತೂರು ಸರ್ಕಾರಿ ಪ್ರೌಢಶಾಲೆಗೆ ಆಗಮಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ಮಕ್ಕಳನ್ನು ಕೇಳಿದ ಮೊದಲ ಪ್ರಶ್ನೆ ನಿಮಗೆ ಪರೀಕ್ಷೆ ಬೇಕೋ,ಬೇಡವೋ' ಎಂದು. ಆದರೆ ಮಕ್ಕಳು ಮುಗಿಲು ಮುಟ್ಟುವಂತೆ ನಮಗೆ ಪರೀಕ್ಷೆ ನಡೆಸಿ ಎಂದು ಕೂಗುವ ಮೂಲಕ ಕೋವಿಡ್ ಭಯ ನಮಗಿಲ್ಲ, ನಾವು ಎಸ್ಎಂಎಸ್ ಪಾಲಿಸಿ ಸುರಕ್ಷಿತರಾಗಿದ್ದೇವೆ ಎಂಬ ಸಂದೇಶವನ್ನು ಸಚಿವರಿಗೆ ತಲುಪಿಸಿದರು. ಮಕ್ಕಳ ಸಮೀಪಕ್ಕೆ ಹೋಗಿ ಪ್ರತಿ ವಿದ್ಯಾರ್ಥಿಯೊಂದಿಗೆ ಮಾತನಾಡಿದ ಸಚಿವರು, ಪರೀಕ್ಷೆ ಎದುರಿಸಲು ಆತ್ಮಸ್ಥೈರ್ಯ ತುಂಬಿ, ಕೋವಿಡ್ ಭಯ ಅಗತ್ಯವಿಲ್ಲ ಎಂದು ತಿಳಿಸಿದರು. ಶೇ.30 ಪಠ್ಯದ ಕಡಿತ ಸರಿಯೇ? ಸಚಿವರು ಮಕ್ಕಳನ್ನುದ್ದೇಶಿಸಿ ಶೇ.30 ರಷ್ಟು ಪಠ್ಯ ಕಡಿತಗೊಳಿಸಲಾಗಿದೆ, ನೀವು ಶೇ.70 ರಷ್ಟು ಓದಿದರೆ ಸಾಕು ಇದು ಸರಿಯೇ ಎಂದಾಗ ಮಕ್ಕಳು
ಸಾರ್ ನಮಗೆ ಸಮಯ ಕಡಿಮೆ ಇದೆ ಸಾಕು ಎಂದು ಉತ್ತರಿಸಿದರು.
ನಿಮ್ಮ ಆರೋಗ್ಯದ ಕುರಿತು ಎಚ್ಚರಿಕೆ ವಹಿಸಿ, ಯಾರು ಏನೇ ಹೇಳಿದರೂ ಮಾಸ್ಕ್ ಹಾಕುವುದನ್ನು ಮರೆಯದಿರಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದ ಸಚಿವರು ಯಾರೂ ಅನುತ್ತೀರ್ಣರಾಗಬಾರದು ಎಂದು ಹಾರೈಸಿದರು.
ಈಗಾಗಲೇ ಶಿಕ್ಷಕರು ಪಾಠಗಳನ್ನು ಮುಗಿಸಿದ್ದಾರೆ, ಪುನರಾವರ್ತನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಮಕ್ಕಳಿಂದ ಪಡೆದ ಸಚಿವರು, ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಸುಂದರ
ಪರಿಸರಕ್ಕೆ ಮೆಚ್ಚುಗೆ
ಶಾಲೆಯ ಸುಂದರ ಪರಿಸರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಶಾಲೆಗಳ ಸಮಗ್ರ ಅಭಿವೃದ್ದಿಗೆ ಗ್ರಾಮ ಪಂಚಾಯಿತಿಗಳ ಮೂಲಕ ನರೇಗಾ ಯೋಜನೆ ಬಳಸಿಕೊಳ್ಳಲು ಸೂಚಿಸಿ, ಶಾಲೆ ಸುಂದರ ತಾಣದಲ್ಲಿದೆ, ಇಲ್ಲಿನ ಪರಿಸರ ಮತ್ತಷ್ಟು ಉತ್ತಮ ಪಡಿಸಿ ಎಂದರು.
ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು,ಸದಸ್ಯರನ್ನುದ್ದೇಶಿಸಿ ಮಾತನಾಡಿದ ಸಚಿವರು, ನಿಮ್ಮ ಸಹಕಾರ ಅಗತ್ಯವಾಗಿದೆ, ನೀವು ಮಕ್ಕಳನ್ನು ಶಾಲೆಗೆ ಕಳುಹಿಸುವುದರ ಜತೆಗೆ ಕೋವಿಡ್ ಆತಂಕದ ಪರಿಸ್ಥಿತಿಯಲ್ಲಿ ಮಕ್ಕಳ ಸುರಕ್ಷತೆಗೂ ಗಮನ ಹರಿಸಿಬೇಕು ಎಂದು ಮನವಿ ಮಾಡಿದರು.
ಡಿಡಿಪಿಐ ಕೃಷ್ಣಮೂರ್ತಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನಲೆಯಲ್ಲಿ ಈಗಾಗಲೇ ಪ್ರೌಢಶಾಲೆಗಳಲ್ಲಿ ಪಠ್ಯ ಮುಗಿಸಿ,ಪುನರಾವರ್ತನೆಗಾಗಿ ವಿಶೇಷ ತರಗತಿಗಳನ್ನು ನಡೆಸುತ್ತಿರುವುದಾಗಿ ಸಚಿವರ ಗಮನಕ್ಕೆ ತಂದರು.
ಬಿಇಒ ಕೆ.ಎಸ್.ನಾಗರಾಜಗೌಡ, ಶಾಲೆಯ ಆವರಣದಲ್ಲಿ ನೇಚರ್ ಕ್ಲಾಸ್ ನಿರ್ಮಾಣಕ್ಕೆ ಮುಂದಾಗಿರುವ ಕುರಿತು ಮಾಹಿತಿ ನೀಡಿ, ಶಾಲೆಯ ಸಮಗ್ರ ಅಭಿವೃದ್ದಿಗೆ ಗ್ರಾಮ ಪಂಚಾಯಿತಿ ಮೂಲಕ ಕ್ರಮವಹಿಸಲಾಗಿದೆ ಎಂದು ಸಚಿವರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಸಚಿವರಿಗೆ ಶಾಲೆಗೆ ಬಂದ ನೆನಪಿಗಾಗಿ ಒಂದು ಪುಸ್ತಕವನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಯಾಸೀನ್ ಖಾನ್, ಶಾಲೆಯ ಮುಖ್ಯ ಶಿಕ್ಷಕಿ ಎನ್.ಮಂಜುಳಾ, ಶಿಕ್ಷಕರಾದ ಕೆ.ವಿ.ವಿಜಯ, ಎಂ.ನಾಗರತ್ನಮ್ಮ, ವಿ.ಸುಷ್ಮಾ, ಸಣ್ಣರಂಗಪ್ಪ, ಸಿ.ಸುಚಿತ್ರಾ, ನಾಗಮುನೇಂದ್ರ, ಜಯಮ್ಮ, ಸಿಬ್ಬಂದಿ ಸುರೇಶ್ಕುಮಾರ್ ಮತ್ತು ಗ್ರಾಮಸ್ಥರು ಹಾಜರಿದ್ದರು.