ವರದಿ: ಸ್ಟೀವನ್ ಕುಲಾಸೊ, ಉದ್ಯಾವರ

ಉಡುಪಿ : ಕಲೆ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆರಂಭವಾಗಿರುವ ನಿರಂತರ್ ಉದ್ಯಾವರ ಸಂಘಟನೆಯ ಮೂರನೇ ವರ್ಷದ ಮೂರು ದಿನಗಳ ನಿರಂತರ್ ನಾಟಕೋತ್ಸವವನ್ನು ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಮತ್ತು ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರುಗಳಾದ ಅ. ವಂ. ಫಾ. ಸ್ಟ್ಯಾನಿ ಬಿ ಲೋಬೊ ನಗಾರಿ ಬಾರಿಸುವುದರೊಂದಿಗೆ ಉದ್ಘಾಟಿಸಿದರು.
ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ರಂಗ ಮಂದಿರದ ವೇದಿಕೆಯಲ್ಲಿ ಉದ್ಘಾಟಿಸಿ, ಮಾತನಾಡಿದ ಅವರು, ನಾಟಕ ಒಂದು ಅತ್ಯುತ್ತಮ ಮಾಧ್ಯಮ. ಸಮಾಜದಲ್ಲಿ ಆಗುವಂತಹ ಕೆಲವೊಂದು ಘಟನೆಗಳನ್ನು ನಾಟಕಕಾರ ತನ್ನ ನಟನೆಯಲ್ಲಿ ತೋರಿಸುವಾಗ ನಮ್ಮ ಕಣ್ಣ ಮುಂದೆ ಆ ಘಟನೆಗಳು ಬರುತ್ತವೆ. ಸಮಾಜದಲ್ಲಿ ನಡೆಯುವ ಕೆಲವೊಂದು ಘಟನೆಗಳು ತಪ್ಪು ದಾರಿಯಲ್ಲಿ ನಡೆಯುತ್ತಿರುವಾಗ ನಾಟಕಕಾರನ ನಟನೆಗಳು ಸಮಾಜವನ್ನು ಒಳ್ಳೆಯ ಹಂತಕ್ಕೆ ತಲುಪಿಸಲು ಕಾರಣವಾಗುತ್ತದೆ ಎಂದರು.
ಖ್ಯಾತ ಸಾಹಿತಿ, ಲೇಖಕ ಕಿಶೋರ್ ಗೊನ್ಸಾಲ್ವಿಸ್ ಶುಭಹಾರೈಸಿದರು. ವೇದಿಕೆಯಲ್ಲಿ ಉದ್ಯಮಿಗಳಾದ ಎರಿಕ್ ಡಿಸೋಜಾ ಪೆರಂಪಳ್ಳಿ, ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಸಹಾಯಕ ಧರ್ಮಗುರುಗಳಾದ ವಂ. ಫಾ ರೊಲ್ವಿನ್ ಅರಾನ್ನಾ, 20 ಆಯೋಗಗಳ ಸಂಚಾಲಕರಾದ ಗೋಡ್ಫ್ರಿ ಡಿಸೋಜಾ, ನಾಟಕೋತ್ಸವದ ಸಂಚಾಲಕರಾದ ರೊನಾಲ್ಡ್ ಡಿಸೋಜಾ ಉಪಸ್ಥಿತರಿದ್ದರು.
ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಆಯ್ಕೆಯಾದ ನಿರಂತರ ಉದ್ಯಾವರ ಸಂಘಟನೆಯ ಜುಡಿತ್ ಪಿರೇರಾ ಇವರನ್ನು ಸನ್ಮಾನಿಸಲಾಯಿತು.
ನಿರಂತರ ಉದ್ಯಾವರ ಸಂಘಟನೆಯ ಅಧ್ಯಕ್ಷ ಸ್ಟೀವನ್ ಕುಲಾಸೊ ಸ್ವಾಗತಿಸಿದರೆ, ನಿರ್ದೇಶಕ ರೋಶನ್ ಡಿಸೋಜಾ ಧನ್ಯವಾದ ಸಮರ್ಪಿಸಿದರು. ಕಾರ್ಯದರ್ಶಿ ಒಲಿವೀರಾ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು.
3 ದಿನದ ನಾಟಕೋತ್ಸವದಲ್ಲಿ ಮಂಗಳೂರಿನ ಅಸ್ತಿತ್ವ ತಂಡದ ಏಕ್ ಪಯ್ಣಾರಿ ಮತ್ತು ಗೀತ್ ಹಾಗೂ ಶಂಕರಪುರದ ಕಲಾರಾಧನ ತಂಡದ ಲಿಗೋರಿ ಮಾಸ್ಟರ್ ನಾಟಕಗಳು ಪ್ರದರ್ಶನಗೊಳ್ಳಲಿವೆ.