ಹೊಸ ಕಂದಾಯ ಗ್ರಾಮಗಳ ಹೆಸರು ಬದಲಾಯಿಸಿ ಸರ್ಕಾರಿ ದಾಖಲೆಗೆ ಸೇರಿಸಲಾಗುತ್ತಿದೆ:ಶಾಸಕ ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ಹೊಸ ಕಂದಾಯ ಗ್ರಾಮಗಳ ಹೆಸರು ಬದಲಾಯಿಸಿ ಸರ್ಕಾರಿ ದಾಖಲೆಗೆ ಸೇರಿಸಲಾಗುತ್ತಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹೊಸ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಹಿಂದೆ ಜನಸಾಮಾನ್ಯರಿಗೆ ಜಮೀನು ಇರಲಿಲ್ಲ. ಅದು ರಾಜ, ಮಹಾರಾಜರ ಅಧೀನದಲ್ಲಿತ್ತು. ಮತ್ತೆ ಜೋಡಿದಾರರ ಅಧೀನಕ್ಕೆ ಬಂತು. ಮತ್ತೆ ಜಮೀನುದಾರಿಕೆ ಬಂತು ಎಂದು ಹೇಳಿದರು.
ಹಿಂದೆ ಕೆಲವರನ್ನು ಗ್ರಾಮಗಳಿಂದ ಹೊರಗೆ ಇಡಲಾಗಿತ್ತು. ಅಂಥ ಜನವಸತಿ ಪ್ರದೇಶಗಳಿಗೆ ಹೆಸರು ಇರಲಿಲ್ಲ. ಆ ಗ್ರಾಮಗಳನ್ನು ಗುರುತಿಸಿ, ಹೊಸ ಹೆಸರು ನೀಡಿ ಸರ್ಕಾರಿ ದಾಖಲೆಯಲ್ಲಿ ಸೇರಿಸಿದ ಬಳಿಕ, ಹಕ್ಕುಪತ್ರ ನೀಡಲಾಗುತ್ತಿದೆ. ಇದರಿಂದ ಆ ಗ್ರಾಮಗಳಿಗೆ ತಮ್ಮದೇ ಆದ ಮಹತ್ವ ಬಂದಂತಾಗಿದೆ ಎಂದು ಹೇಳಿದರು.
ಕೆಲವು ಕಡೆ ಸ್ಮಶಾನಗಳ ಒತ್ತುವರಿಯಿಂದಾಗಿ, ಕೆರೆ ಅಂಗಳದಲ್ಲಿ ಶವ ಸಂಸ್ಕಾರ ಮಾಡಲಾಗುತ್ತಿದೆ. ಪ್ರತಿ ಗ್ರಾಮಕ್ಕೂ ಸ್ಮಶಾನ ಅತ್ಯಗತ್ಯವಾದ ಸೌಲಭ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಸ್ಮಶಾನ ಒತ್ತುವರಿ ತೆರವುಗೊಳಿಸಿ, ಅಭಿವೃದ್ಧಿ ಗೊಳಿಸಬೇಕು ಎಂದು ಹೇಳಿದರು.
ಸಧ್ಯಕ್ಕೆ ಗುರುತಿಸಲಾಗಿರುವ 1514 ಫಲಾನುಭವಿಗಳ ಪೈಕಿ, ಸಮಾರಂಭದಲ್ಲಿ 891 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.
ತಹಶೀಲ್ದಾರ್ ಶಿರಿನ್ ತಾಜ್ ಮಾತನಾಡಿ, ಇದು ಸರ್ಕಾರದ ವಿಶಿಷ್ಟ ಯೋಜನೆಯಾಗಿದ್ದು, ಹೆಚ್ಚಿನ ಫಲಾನುಭವಿಗಳಿಗೆ ಅನುಕೂಲವಾಗುತ್ತದೆ. ಅರ್ಹ ಫಲಾನುಭವಿಗಳು ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಗ್ರೇಡ್2 ತಹಶೀಲ್ದಾರ್ ಕೆ.ಎಲ್.ಜಯರಾಮ್, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಮಂಜುನಾಥ್, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಜನಾರ್ಧನ್, ವಿನೋದ್ ಇದ್ದರು.