ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಬಂಗಾರು ತಿರುಪತಿ ಎಂದೇ ಖ್ಯಾತವಾಗಿರುವ ಗುಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲೇ ಹೊಸ ಪದವಿ ಪೂರ್ವ ಕಾಲೇಜು ಮಂಜೂರು ಮಾಡಿಸಿರುವ ಶಾಸಕಿ ರೂಪಕಲಾ ಶಶಿಧರ್ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಕೊಠಡಿಗಳ ಲಭ್ಯತೆ ಹಾಗೂ ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಬಂಗಾರು ತಿರುಪತಿ (ಗುಟ್ಟಹಳ್ಳಿ) ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಯ ನಿರ್ವಹಿಸುತ್ತಿದ್ದು ಇಲ್ಲಿ ಪದವಿ ಪೂರ್ವ ಕಾಲೇಜು (ಪಿ.ಯು.ಸಿ.) ಪ್ರಾರಂಭಿಸುವ ಬಗ್ಗೆ ಸುತ್ತಮುತ್ತಲಿನ ಸಾರ್ವಜನಿಕರ ಬಹುದಿನಗಳ ಬೇಡಿಕೆ ಇತ್ತು ಎಂದರು.
ಇದೇ ಪ್ರೌಢಶಾಲೆಯಲ್ಲಿ 10ನೇ ತರಗತಿ ಮುಗಿಸಿದ ವಿದ್ಯಾರ್ಥಿಗಳು ವಿಶೇಷವಾಗಿ ಹೆಣ್ಣು ಮಕ್ಕಳು ದೂರದ ಊರುಗಳಿಗೆ ಪಿಯುಸಿ. ಶಿಕ್ಷಣಕ್ಕೆ ಹೋಗಲು ಆಗದೆ ಉನ್ನತ ವ್ಯಾಸಂಗದ ಭವಿಷ್ಯ ಕತ್ತಲಲ್ಲಿ ಮುಳುಗುವಂತಾಗಿದ್ದು, ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸ್ಥಳೀಯವಾಗಿಯೂ ಜನತೆಯಿಂದ ಬೇಡಿಕೆ ಇತ್ತು ಎಂದರು.
ಸ್ಥಳೀಯ ಪೋಷಕರ ಮನವಿ ಹಾಗೂ ಪರಿಸ್ಥಿತಿಯನ್ನು ಮನಗಂಡು ರಾಜ್ಯ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಬಂಗಾರುತಿರುಪತಿ ಗ್ರಾಮದಲ್ಲಿ ಪಿಯುಸಿ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಪದವಿ ಪೂರ್ವ ಕಾಲೇಜು ಮಂಜೂರು ಮಾಡಲು ತಾವು ಮಾಡಿದ ಮನವಿಗೆ ಸಚಿವರು ಸ್ಪಂದಿಸಿ ಮಂಜೂರಾತಿ ನೀಡಿದ್ದಾರೆ ಎಂದು ತಿಳಿಸಿದರು.
ತಮ್ಮ ಮನವಿಗೆ ಸ್ಪಂದಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಧಾಣ ಕಾರ್ಯದರ್ಶಿ ಸೆಲ್ವಕುಮಾರ್ ಅವರನ್ನು ತಾವು ಕಳೆದ ಮಾರ್ಚ್ 9 ರಂದು ಭೇಟಿ ಮಾಡಿ, ಗುಟ್ಟಹಳ್ಳಿಯಲ್ಲಿ ಪಿಯುಸಿ ಆರಂಭಿಸುವ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಟ್ಟು ಮನವಿ ಸಲ್ಲಿಸಿದ್ದಾಗಿ ತಿಳಿಸಿದರು.
ಈ ಶೈಕ್ಷಣಿಕ ಸಾಲಿನಿಂದಲೆ ಬಂಗಾರು ತಿರುಪತಿಯಲ್ಲಿ (ಗುಟ್ಟಹಳ್ಳಿ) ಪಿ.ಯು. ಕಾಲೇಜು ಮಂಜೂರು ಕೋರಿದ ತಮ್ಮ ಮನವಿ ಸಂಬಂಧ ನಂತರದ ದಿನಗಳಲ್ಲಿ ಪ್ರತಿ ಹಂತದಲ್ಲೂ ಎಲ್ಲಾ ಸಂಬಂಧಪಟ್ಟ ಅಧಿಕಾರಗಳನ್ನು ಭೇಟಿ ಮಾಡಿ ಕಾಲೇಜು ಮಂಜೂರು ಮಾಡಿಸಲು ಯಶಸ್ವಿಯಾಗಿದ್ದಾಗಿ ತಿಳಿಸಿದರು.
ತಮ್ಮ ಮನವಿಗೆ ಸ್ಪಂದಿಸಿ ಸರ್ಕಾರ ಇದೇ ಜೂ.9 ರಂದು ಬಂಗಾರು ತಿರುಪತಿಯಲ್ಲಿನ ಸರ್ಕಾರಿ ಪ್ರೌಢ ಶಾಲೆಯನ್ನು ಮೇಲ್ದರ್ಜೆಗೇರಿಸಿ ಪದವಿ ಪೂರ್ವ ಕಾಲೇಜು ಮಂಜೂರು ಮಾಡಿ ಆದೇಶ ಹೊರಡಿಸಿದೆ ಎಂದು ಹರ್ಷ ವ್ಯಕ್ತಪಡಿಡಿದರು.
ಕಾಲೇಜು ಮಂಜೂರಿಯಾಗಲು ಸಹಕರಿಸಿದ ಮಾನ್ಯ ಶಿಕ್ಷಣ ಸಚಿವರಿಗೆ ಹಾಗೂ ಮಾನ್ಯ ಪ್ರಧಾನ ಕಾರ್ಯದರ್ಶಿಗಳಿಗೆ ಬಂಗಾರು ತಿರುಪತಿಯ ಸುತ್ತಮುತ್ತಲಿನ ಸಾರ್ವಜನಿಕರ ಪರವಾಗಿ ಶಾಸಕರು ಧನ್ಯವಾದ ಅರ್ಪಿಸಿದರು.
ವಿಶೇಷವಾಗಿ ಸರ್ಕಾರಿ ಪ್ರೌಢ ಶಾಲೆ ಕಟ್ಟಡ ನಿರ್ಮಾಣಕ್ಕಾಗಿ ಜಮೀನು ದಾನ ಮಾಡಿ ಪದವಿ ಪೂರ್ವ ಕಾಲೇಜು ಕಾಲೇಜು ಪ್ರಾರಂಭಿಸಲು ಕಾರಣೀಭೂತರಾದ ಕವರಗಾನಹಳ್ಳಿ ಗ್ರಾಮದ ಕೃಷ್ಣೇಗೌಡರಿಗೆ ಶಾಸಕರು ಧನ್ಯವಾದ ತಿಳಿಸಿದರು.
ಕೃಷ್ಣೇಗೌಡರ ಮನವಿಯಂತೆ ಸರ್ಕಾರಿ ಪ್ರೌಢಶಾಲೆಗೆ ನೀಡಿರುವ ಜಮೀನನ್ನು ಅಳತೆ ಮಾಡಿ ಗಡಿ ಗುರುತಿಸಲು ಸ್ಥಳದಲ್ಲಿ ಹಾಜರಿದ್ದ ರಾಜಸ್ವ ನಿರೀಕ್ಷಕರಿಗೆ ಸೂಚಿಸಿದರು ಹಾಗೂ ಪಂಚಾಯಿತಿ ವತಿಯಿಂದ ಕೂಡಲೆ ಕಾಂಪೌಂಡ್ ನಿರ್ಮಾಣ ಮಾಡಲು ಸ್ಥಳದಲ್ಲಿ ಹಾಜರಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಕ್ಯಾಸಂಬಳ್ಳಿ ಗ್ರಾಮದಲ್ಲಿ ಸಹಾ ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಜೂರು ಮಾಡಲು ಮನವಿ ಸಲ್ಲಿಸಲಾಗಿದ್ದು, ಕಟ್ಟಡ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಕೊರತೆ ಇದ್ದು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲು ಅನುವಾಗುವಂತೆ ಮಂಜೂರು ಮಾಡಿಸುವುದಾಗಿ ಶಾಸಕರು ತಿಳಿಸಿದರು.
ಉಪನ್ಯಾಸಕರ ನಿಯೋಜನೆ ಹಾಗೂ ವಿದ್ಯಾರ್ಥಿಗಳ ದಾಖಾಲಾತಿಗಳ ಬಗ್ಗೆ ಉಪ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಕೋಲಾರ ರವರ ಕಛೇರಿಯರ ಮಾಹಿತಿಯಂತೆ ಜುಲೈ ಮಾಹೆಯಿಂದ ಕಾಲೇಜು ಪ್ರಾರಂಭವಾಗುವಂತೆ ಮಾಡಲಾಗುವುದು ಹಾಗೂ ಈಗಾಗಲೆ ಈ ಭಾಗದ ವಿದ್ಯಾರ್ಥಿಗಳು ಬೇರೆ ಸರ್ಕಾರಿ ಕಾಲೇಜಿನಲ್ಲಿ ದಾಖಲಾಗಿದ್ದರೆ ಇಲ್ಲಿಗೆ ವರ್ಗಾವಣೆ ಮಾಡಲು ಕ್ರಮ ವಹಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಹುಲ್ಕೂರು ಗ್ರಾಮ ಪಂಚಾಯಿತಿ ಅದ್ಯಕ್ಷೆ ವೆಂಕಟಮ್ಮ ಮುನಿಯಪ್ಪ, ಉಪಾಧ್ಯಕ್ಷ ಸೋಮಶೇಖರ್ರೆಡ್ಡಿ, ಬೇತಮಂಗಲ ವಿಎಸ್‍ಎಸ್‍ಎನ್ ಅಧ್ಯಕ್ಷ ಪ್ರಸನ್ನ, ಮುಖಂಡರಾದ ಕೃಷ್ಣೇಗೌಡ, ಶಿವಣ್ಣ, ಕೃಷ್ಣಾರೆಡ್ಡಿ, ನಂಜಂಡಗೌಡ, ಶಂಕರಪ್ಪ, ಮಂಜುನಾಥ್, ಮಂಜುನಾಥ ರೆಡ್ಡಿ (ನಾಯನಹಳ್ಳಿ), ಸುಬ್ರಮಣಿ, ಸುರೇಂದ್ರ ಗೌಡ, ಶಂಕರ್,ಮಂಜುನಾಥರೆಡ್ಡಿ, ರಾಮಕೃಷ್ಣಪ್ಪ, ವೆಂಕಟೇಶ್, ಒಬಿಸಿ ಮುನಿಸ್ವಾಮಿ, ರಾಜಸ್ವ ನಿರೀಕ್ಷಕರಾದ ಮುನಿವೆಂಕಟಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಶ್ಮೀ ಹಾಗೂ ಪ್ರಮುಖ ಮುಖಂಡರು ಹಾಜರಿದದ್ದರು.