ಸಂಕಷ್ಟದಲ್ಲಿರುವ ಜಿಲ್ಲೆಯ ಟೊಮೇಟೊ ಹಾಗೂ ರೇಷ್ಮೆ ಬೆಳೆಗಾರರ ರಕ್ಷಣೆಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ನೂತನ ಉಸ್ತುವಾರಿ ಸಚಿವ ಮುನಿರತ್ನರವರಿಗೆ ಮನವಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಸಂಕಷ್ಟದಲ್ಲಿರುವ ಜಿಲ್ಲೆಯ ಟೊಮೇಟೊ ಹಾಗೂ ರೇಷ್ಮೆ ಬೆಳೆಗಾರರ ರಕ್ಷಣೆಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಜಿಲ್ಲೆಗೆ ಆಗಮಿಸಿದ ನೂತನ ಉಸ್ತುವಾರಿ ಸಚಿವ ಮುನಿರತ್ನ ರವರಿಗೆ ಸಾಮೂಹಿಕ ನಾಯಕತ್ವದ ರೈತಸಂಘದಿಂದ ಮನವಿ ನೀಡಿ ಆಗ್ರಹಿಸಲಾಯಿತು.
ಕೋಟ್ಯಾಂತರ ಗ್ರಾಹಕರು, ರೈತರು, ನೌಕರರಿಗೆ ಮಾರಕವಾಗುವ ವಿದ್ಯುತ್ ಖಾಸಗೀಕರಣ ಕಾಯ್ದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಅಂಗೀಕಾರ ಮಾಡದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಹಾಗೂ ಕೆಸಿವ್ಯಾಲಿ ಮೂರನೇ ಹಂತದ ಶುದ್ಧೀಕರಣ ಮಾಡಿ ಮುಳಬಾಗಿಲು ಕೆರೆಗಳಿಗೂ ಹರಿಸಬೇಕು. ದಿವಂಗತ ಡಿ.ಕೆ.ರವಿ ಅವಧಿಯಲ್ಲಿ ಜಾರಿಗೆ ತಂದಿರುವ ಪೋಡಿ, ಕಂದಾಯ ಅದಾಲತ್ ನಡೆಸುವ ಮುಖಾಂತರ ಪಿ ನಂಬರ್‍ಗೆ ಮುಕ್ತಿ ಕೊಟ್ಟು ಪಿ ನಂಬರ್ ಹೆಸರಿನಲ್ಲಿ ಲಕ್ಷ ಲಕ್ಷ ಲಂಚ ಪಡೆಯುತ್ತಿರುವ ಅಧಿಕಾರಿಗಳ ಹಗಲು ದರೋಡೆಗೆ ಕಡಿವಾಣ ಹಾಕಬೇಕು, ಮತ್ತು ಸರ್ವೇ ಇಲಾಖೆಯಲ್ಲಿ ಸರ್ವೇಯರ್‍ಗಳ ಸಮಸ್ಯೆಯಿದ್ದು, ಬಗೆಹರಿಸಿ ರೈತರ ರಕ್ಷಣೆಗೆ ನಿಲ್ಲಬೇಕೆಂದು ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಒತ್ತಾಯಿಸಿದರು.
ಯುವ ರೈತ ಮುಖಂಡ ನಂಗಲಿ ಕಿಶೋರ್ ಮಾತನಾಡಿ ಕೊರೊನಾ 1, 2ನೇ ಅಲೆ ಸೃಷ್ಠಿಸಿರುವ ಸಾವು ನೋವುಗಳಿಂದ ಇನ್ನೂ ಜನಸಾಮಾನ್ಯರು ಚೇತರಿಸಿಕೊಂಡಿಲ್ಲ. ಆರ್ಥಿಕ ಹೊಡೆತ, ಬೆಳೆ ನಷ್ಟ ಕೆಲಸವಿಲ್ಲದೆ ಜೀವನ ನಿರ್ವಹಣೆಯೂ ಕಷ್ಟವೆನಿಸುವ ಸಮಯದಲ್ಲಿ ಮತ್ತೆ 3ನೇ ಅಲೆ ಡೆಲ್ಟಾ ರೂಪದಲ್ಲಿ ವಕ್ಕರಿಸುತ್ತಿದ್ದು, ಜಿಲ್ಲಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ಸರಿಪಡಿಸಿ ಔಷಧಿ, ಸಿಬ್ಬಂದಿ ಕೊರತೆ ಇಲ್ಲದಾಗೆ ಕ್ರಮವಹಿಸುವ ಜೊತೆಗೆ ಕೋಟ್ಯಾಂತರರೂಪಾಯಿ ಬಂಡವಾಳ ಹಾಕಿ ಮೂಲೆ ಗುಂಪಾಗಿರುವ ವೆಂಟಿಲೇಟರ್ ಬಳಸಿಕೊಳ್ಳಲು ನುರಿತ ತಜ್ಞರನ್ನು ನೇಮಕ ಮಾಡಿ 3ನೇ ಅಲೆಯನ್ನು ಸಮರ್ಪಕವಾಗಿ ನಿರ್ವಹಿಸಲು ಜಿಲ್ಲಾಡಳಿತಕ್ಕೆ ಸೂಚನೆ ಮಾಡಬೇಕೆಂದು ಒತ್ತಾಯಿಸಿದರು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಗಾಧೆಯಂತೆ ಸರ್ಕಾರ ಕೊರೊನಾ ಸಂಕಷ್ಟದಲ್ಲಿ ಘೋಷಣೆ ಮಾಡಿದ್ದ ಬೆಳೆ ಪರಿಹಾರ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರ ಖಾತೆಗೆ ಸೇರುತ್ತಿಲ್ಲ. ಜೊತೆಗೆ ರೈತರ ಜೀವನಾಡಿಯಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆಯ ಜಾಗಕ್ಕೆ 50 ಎಕರೆ ಜಮೀನು ನೀಡಿ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿದರು.
ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಟೊಮೇಟೊ ಸಮರ್ಪಕವಾದ ಬೆಲೆಯಿಲ್ಲದೆ ರಸ್ತೆಗಳಲ್ಲಿ ಸುರಿದಿದ್ದರೂ ಕನಿಷ್ಟಪಕ್ಷ ಸೌಜನ್ಯಕ್ಕಾದರೂ ಜನಪ್ರತಿನಿಧಿಗಳು, ಜಿಲ್ಲಾಡಳಿತ ರೈತರ ಕಷ್ಟ ಕೇಳಲಿಲ್ಲ. ಇನ್ನು ಇಂಡೋ ಅಮೇರಿಕನ್ ಕಂಪನಿಯು ನೀಡಿರುವ 1320 ಸಂಪೂರ್ಣ ಕಳಪೆಯಾಗಿದ್ದು, ಮಾರುಕಟ್ಟೆಯಲ್ಲಿ ಈ ತಳಿಯ ಟೊಮೇಟೊಗೆ ಬೇಡಿಕೆಯಿಲ್ಲ. ಇದರ ವಿರುದ್ಧ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಕಂಪನಿ ಪರ ಕೆಲಸ ಮಾಡುತ್ತಿದ್ದಾರೆಯೇ ಹೊರತು ರೈತರ ಪರ ನಿಲ್ಲುತ್ತಿಲ್ಲ ಎಂದು ದೂರಿದರು.
ಜಿಲ್ಲಾದ್ಯಂತ ಸಂಕಷ್ಟದಲ್ಲಿರುವ ಟೊಮೇಟೊ, ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಪ್ರತಿ ಕೆಜಿ ಟೊಮೇಟೊಗೆ 5 ರೂಪಾಯಿ, ರೇಷ್ಮೆಗೆ 40 ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಿ ಜಡಿ ಮಳೆ ಹಾಗೂ ನಕಲಿ ಬಿತ್ತನೆ ಬೀಜದಿಂದ ನಷ್ಟವಾಗಿರುವ ಬೆಳೆಗಳಿಗೆ ಪ್ರತಿ ಎಕರೆಗೆ 1 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ನೂತನ ಉಸ್ತುವಾರಿ ಸಚಿವ ಮುನಿರತ್ನರವರು ಜಿಲ್ಲೆಗೆ ನೂತನ ಸಚಿವರಾಗಿ ಆಯ್ಕೆಯಾಗಿದ್ದೇನೆ. ಮೊದಲು ಕೊರೊನಾ 3ನೇ ಅಲೆಯ ನಿಯಂತ್ರಣಕ್ಕೆ ಆದ್ಯತೆ ನೀಡಿ ಜನರ ರಕ್ಷಣೆ ಮಾಡಿ ಆನಂತರ ಜಿಲ್ಲೆಯ ಎಲ್ಲಾ ರೈತರ ಸಮಸ್ಯೆ ಆಲಿಸಲು ಸಭೆ ಕರೆದು ಸಮಸ್ಯೆ ಬಗೆಹರಿಸುವ ಜೊತೆಗೆ ಬೆಂಬಲ ಬೆಲೆ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುವ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವಕ್ಕಲೇರಿ ಹನುಮಯ್ಯ, ಪವನ್, ಚಂದು, ಅಶ್ವತ್ಥಪ್ಪ, ಕುವ್ವಣ್ಣ,ಮುಂತಾದವರಿದ್ದರು.