ಉಡುಪಿ: ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ನೆಜಾರಿನ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಯನ್ನು ಉಡುಪಿ ಡಿವೈಎಸ್ಪಿ ದಿನಕರ್ ಪಿ. ನೇತೃತ್ವದ ತಂಡ ಕೇರಳದ ಕೊಟ್ಟಾಯಂನಲ್ಲಿ ವಶಕ್ಕೆ ಪಡೆಯುವ ಸಾಧ್ಯತೆ ಇದೆಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಸೇಜಾರು ತೃಪ್ತಿ ಲೇಔಟ್ನಲ್ಲಿ ರವಿವಾರ ನಡೆದ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸಿಸಿಟಿವಿ ಜಾಡು ಹಿಡಿದು ತನಿಖೆಯನ್ನು ಚುರುಕುಗೊಳಿಸಿದ್ದರು.
ಕೊಲೆಗೈದ ಬಳಿಕ ಹಂತಕ ಸಾಗಿರುವ ವಿವಿಧ ಪ್ರದೇಶಗಳ ಸಿಸಿಟಿವಿ ಫುಟೇಜ್ ಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದರು. ಸಂತೆಕಟ್ಟೆಯಿಂದ ಉಡುಪಿ ಕರಾವಳಿ ಬೈಪಾಸ್, ಅಲ್ಲಿಂದ ಅಂಬಲಪಾಡಿ, ಕಿನ್ನಿಮುಲ್ಕಿ, ಬಲಾಯಿಪಾದೆ ಹಾಗೂ ಉದ್ಯಾವರ, ಅಲ್ಲಿಂದ ಕಟಪಾಡಿವರೆಗೆ ಸಾಗಿರುವ ಸಿಸಿಟಿವಿ ಪುಟೇಜ್ಗಳ ಜಾಡು ಹಿಡಿದ ಪೊಲೀಸರ ತಂಡವು ಕಾಸರಗೋಡು, ಕೇರಳ ಕಡೆ ತೆರಳಿ ವ್ಯಾಪಕ ಶೋಧ ನಡೆಸಿವೆ.
ಹತ್ಯಾ ಆರೋಪಿ ಕೊಲೆಗೈದ ಬಳಿಕ ಬೇರೆ ಬೇರೆ ಬೈಕಿನಲ್ಲಿ ಪ್ರಯಾಣಿಸಿರುವುದು ಸಿಟಿಟಿವಿ ದೃಶ್ಯಾವಳಿಯ ಪತ್ತೆ ಹಚ್ಚಿದ ಪೊಲೀಸರ ತಂಡವು ಮಂಗಳೂರು, ತಲಪಾಡಿ, ಕಾಸರಗೋಡು, ಕೇರಳ ರಾಜ್ಯಕ್ಕೆ ಹೋಗಿ ವ್ಯಾಪಕ ಶೋಧ ನಡೆಸಿದ್ದು ಕೊಟ್ಟಾಯಂನಲ್ಲಿ ಇರುವ ಮಾಹಿತಿ ಲಭ್ಯವಾಗಿದ್ದು, ಆತನ ಬಂಧಿಸಲು ಪೊಲೀಸರ ತಂಡ ಬಲೆ ಬೀಸಿದೆ ಎಂದು ತಿಳಿದು ಬಂದಿದೆ.
ಸಂತೆಕಟ್ಟೆಯಿಂದ ಉಡುಪಿ ಕರಾವಳಿ ಬೈಪಾಸ್ನ ವರೆಗೆ ರಿಕ್ಷಾದಿಂದ ಬಂದು ಇಳಿದ ಹಂತಕ, ಅಲ್ಲೇ ಸಮೀಪದ ಜೆಪಿ ಲೈಟ್ನ ಹಿಂಬದಿಗೆ ತೆರಳಿ ಕೂಡಲೇ ವಾಪಾಸ್ಸು ಬಂದಿದ್ದಾನೆ. ಬಳಿಕ ಅಲ್ಲಿಂದ ಮತ್ತೊಂದು ಬೈಕಿನ ಸಹಾಯದಿಂದ ಕಿನ್ನಿಮೂಲ್ಕಿ ತನಕ ಸಾಗಿ ಅಲ್ಲಿಂದ ಮಂಗಳೂರು ಬಸ್ ಮೂಲಕ ಕೇರಳ ಹೋಗಿರುವ ಸಾಧ್ಯತೆ ಬಲವಾಗಿದೆ.