ಶ್ರೀನಿವಾಸಪುರ: ಮಾವು ಬೆಳೆಗಾರರಿಗೆ, ಸರ್ಕಾರ ಹಾಗೂ ಫಸಲ್ ಬಿಮಾ ಯೋಜನೆ ಅನುಷ್ಠಾನ ಕಂಪನಿಯಿಂದ ಪರಿಹಾರ ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಆಡಳಿತ ರೈತರ ಹಿತರಕ್ಷಣೆಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಆದರೆ ಮಾಹಿತಿ ಕೊರತೆ ಹಾಗೂ ತಪ್ಪು ಸಂವಹನದ ಪರಿಣಾಮವಾಗಿ ಅದು ರೈತರ ಗಮನಕ್ಕೆ ಬರುತ್ತಿಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಮಾವು ಬೆಳೆಗಾರರು ಹಾಗೂ ಇತರ ರೈತರಿಗೆ ಉಂಟಾಗಿರುವ ಬೆಳೆ ನಷ್ಟ ಹಾಗೂ ಪರಿಹಾರ ನೀಡುವ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗಿದೆ. ನಮ್ಮ ಪ್ರಯತ್ನದ ಅರಿವು ಅಧಿಕಾರಿಗಳಿಗಿದೆ. ಜಿಲ್ಲೆಯಲ್ಲಿ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ರಾಜ್ಯದಲ್ಲಿಯೇ ಮಾದರಿ ಪರಿಹಾರ ದೊರೆಯಲಿದೆ ಎಂದು ಹೇಳಿದರು.
ಜಿಲ್ಲಾ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿ ಪದಾಧಿಕಾರಿಗಳಾದ ಚಿನ್ನಪ್ಪರೆಡ್ಡಿ, ಫಾರುಕ್, ಪಿ.ಆರ್.ಸೂರ್ಯನಾರಾಯಣ, ಪಾತಕೋಟ ನವೀನ್ ಕುಮಾರ್, ಪ್ರಭಾಕರ್ ಗೌಡ, ಎನ್.ಶ್ರೀರಾಮರೆಡ್ಡಿ ಮಾವು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದರು.
ರಾಜ್ಯ ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಶಕೀಲ್ ಅಹ್ಮದ್, ತಹಶೀಲ್ದಾರ್ ಶಿರಿನ್ ತಾಜ್, ಹಿರಿಯ ತೊಟಗಾರಿಕೆ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸನ್, ಕೃಷಿ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್ ಮಾವು ಬೆಳೆಗಾರರಿಗೆ ಬೆಳೆ ನಷ್ಟ ಪರಿಹಾರ ನೀಡುವ ಕುರಿತು ಮಾಹಿತಿ ನೀಡಿದರು.
ಡಿವೈಎಸ್‍ಪಿ ಜಯಶಂಕರ್, ಪೊಲೀಸ್ ಇನ್ಸ್‍ಪೆಕ್ಟರ್ ಜೆ.ಸಿ.ನಾರಾಯಣಸ್ವಾಮಿ, ರೈತ ಮುಖಂಡರಾದ ಬೈಚೇಗೌಡ, ಬೈರಾರೆಡ್ಡಿ, ಶ್ರೀನಿವಾಸರೆಡ್ಡಿ, ಈರಪ್ಪರೆಡ್ಡಿ, ಅಬ್ದುಲ್, ನಳಿನಿ, ಶಾಗತ್ತೂರು ನಾಗರಾಜ್, ನಾಗರಾಜ್ ಇದ್ದರು.
ಧರಣಿ: ಜಿಲ್ಲಾಧಿಕಾರಿ ಸಭೆಗೆ ಮೊದಲು, ತಾಲ್ಲೂಕಿನ ಬೇರೆ ಬೇರೆ ಕಡೆಗಳಿಂದ ಆಗಮಿಸಿದ್ದ ಮಾವು ಬೆಳೆಗಾರರು ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಪಟ್ಟಣದ ಮುಳಬಾಗಿಲು ವೃತ್ತದಿಂದ ಎಂಜಿ ರಸ್ತೆಯಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದರು. ತಹಶೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿದರು. ಜಿಲ್ಲಾಧಿಕಾರಿ ಆಗಮನದೊಂದಿಗೆ ಧರಣಿ ಹಿಂಪಡೆದು, ಸಭೆಯಲ್ಲಿ ಭಾಗವಹಿಸಿದರು.