

ಶ್ರೀನಿವಾಸಪುರ: ಕನ್ನಡ ಭಾಷೆ ಹಾಗೂ ಕನ್ನಡಿಗರ ಬದುಕು ಭದ್ರವಾಗಲು ಅಗತ್ಯವಾದ ಯೋಜನೆ ರೂಪಿಸಿ ಜಾರಿಗೆ ತರಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಬುಧವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬೇರೆ ಭಾಷೆಗಳ ಪ್ರಭಾವ ಹೆಚ್ಚಾಗಿರುವ ಗಡಿ ಭಾಗದಲ್ಲಿನ ಜನರು ತಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಕನ್ನಡ ಭಾಷೆ ಬಳಸಬೇಕು ಎಂದು ಹೇಳಿದರು.
ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದಲ್ಲಿ ಮೂರು ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಕ್ಷೇತ್ರ ನಿರ್ಮಿಸಲು ಉದ್ದೇಶಿಸಲಾಗಿದೆ. ಹಾಗೆ ಮಾಡುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯುತ್ತದೆ. ಗಡಿ ಕನ್ನಡಿಗರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್ ಮಾತನಾಡಿ, ನಾಡು ನುಡಿ ನಮ್ಮ ಹೆಮ್ಮೆ. ಕನ್ನಡ ರಾಜ್ಯೋತ್ಸವ ಕನ್ನಡ ಪ್ರೇಮದ ಸಂಭ್ರಮ ಸಂಕೇತ. ಮನೆ, ಮನಗಳಲ್ಲಿ ಕನ್ನಡ ನೆಲೆಗೊಳ್ಳಬೇಕು. ಏಕೀಕರಣದ ಉದ್ದೇಶ ಸಾಕಾರಗೊಳ್ಳಬೇಕು. ಗಡಿಯಾಚೆಗೂ ಕನ್ನಡ ಪಸರಿಸಬೇಕು. ಗಡಿ ಭಾಗದ ಜನರು ಕನ್ನಡ ಮಾತನಾಡಬೇಕು ಎಂದು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಜಿ.ಎನ್.ಕುಬೇರಗೌಡ, ಶಿಕ್ಷಕ ರಾಮಾಂಜನಪ್ಪ ನಾಡು ನುಡಿಯ ಬಗ್ಗೆ ಉಪನ್ಯಾಸ ನೀಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ನೂರಕ್ಕೆ ನೂರರಷ್ಟು ಅಂಕ ಗಳಿಸಿದ್ದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಸಾಮೂಹಿಕವಾಗಿ ಐದು ಕನ್ನಡ ಗೀತೆಗಳನ್ನು ಹಾಡಿದರು.
ಉಪ ತಹಶೀಲ್ದಾರ್ ಕೆ.ಸಿ.ಜಯರಾಂ, ಶಿರಸ್ತೆದಾರ್ ಬಲರಾಮಚಂದ್ರೇಗೌಡ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಬಿಇಒ ಭಾಗ್ಯಲಕ್ಷ್ಮಿ, ವಿವಿಧ ಇಲಾಖೆಗಳ ಸಹಾಯಕ ನಿರ್ದೇಶಕರಾದ ಕೆ.ಸಿ.ಮಂಜುನಾಥ್, ಕೃಷ್ಣಪ್ಪ, ಎ.ಬೈರೆಡ್ಡಿ, ಡಾ. ಮಂಜುನಾಥರೆಡ್ಡಿ, ಆರ್.ರವಿಕುಮಾರ್, ಜಯರಾಜ್, ಕೆ.ವಿ.ನಾಗರಾಜ್, ಡಾ. ವಿಶ್ವನಾಥ್, ವೆಂಕಟಸ್ವಾಮಿ, ಸುಬ್ರಮಣಿ, ಶ್ರೀಧರ್, ನರಸಿಂಹಮೂರ್ತಿ, ಶ್ರೀನಿವಾಸ್ ಇದ್ದರು.
ವಿವಿಧೆಡೆ ರಾಜ್ಯೋತ್ಸವ: ಪಟ್ಟಣದ ಭುವನೇಶ್ವರಿ ಗೆಳೆಯರ ಬಳಗದಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಕನ್ನಡಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದ ವಿದ್ಯಾರ್ಥಿಗಗಳನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ಹಾಗೂ ನಗದು ಬಹುಮಾನ ನೀಡಲಾಯಿತು.