ಶ್ರೀನಿವಾಸಪುರ : ಜಿಲ್ಲೆಯಾದ್ಯಂತ ಶಾಲೆಗಳಿಗೆ ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ಲೋಕಸಸಭಾ ಸದಸ್ಯ ಎಸ್.ಮುನಿಸ್ವಾಮಿ ಹೇಳಿದರು . ಶ್ರೀನಿವಾಸಪುರದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ಸಂಘಗಳ ವತಿಯಿಂದ ಬುಧವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು , ಸೋರುವ ಶಾಲಾ ಕಟ್ಟಡಗಳ ಪಟ್ಟಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಕೇಳಲಾಗಿತ್ತು . ಅವರು ಒದಗಿಸಿರುವ ಪಟ್ಟಿಯಂತೆ ಜಿಲ್ಲೆಯಲ್ಲಿ ೫೦೦ ಸೋರುವ ಶಾಲಾ ಕಟ್ಟಡಗಳಿವೆ ಎಂದು ಹೇಳಿದರು . ತಾಲ್ಲೂಕು ಕೇಂದ್ರದಲ್ಲಿ ಗುರು ಭವನ ನಿರ್ಮಿಸಲು ಜಮೀನು ಮಂಜೂರು ಮಾಡುವಂತೆ ತಹಶೀಲ್ದಾರ್ಗೆ ಸೂಚಿಸಲಾಗಿತ್ತು ಎಪಿಎಂಸಿ ಮಾರುಕಟ್ಟೆ ಸಮೀಪ ಎರಡು ಎಕರೆ ಸರ್ಕಾರಿ ಜಮೀನಿದ್ದು , ಆ ಪೈಕಿ ಗುರುಭವನ ನಿರ್ಮಾಣಕ್ಕೆ ೧ ಎಕರೆ ಬಳಸಿಕೊಳ್ಳಬಹುದಾಗಿದೆ . ಜಮೀನು ಮಂಜೂರಾದ ತಕ್ಷಣ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು . ವಿಧಾನ ಪರಿಷತ್ತಿನ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ಮಾತನಾಡಿ , ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಹಿರಿದು , ಪ್ರತಿ ವ್ಯಕ್ತಿಯ ಜೀವನದಲ್ಲೂ ಗುರುಗಳ ಪ್ರಭಾವ ಇದ್ದೇ ಇರುತ್ತದೆ . ಆದ್ದರಿಂದಲೇ ಯಾರಿಗೂ ದೊರೆಯದಷ್ಟು ಗೌರವ ಶಿಕ್ಷಕ ಸಮುದಾಯಕ್ಕೆ ದೊರೆಯುತ್ತಿದೆ ಎಂದು ಹೇಳಿದರು .
ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ , ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಸಂಪನ್ಮೂಲ ವ್ಯಕ್ತಿ ಎ.ವೆಂಕಟರೆಡ್ಡಿ ಶಿಕ್ಷಕರ ದಿನಾಚರಣೆ ಮಹತ್ವ ಕುರಿತು ಮಾತನಾಡಿದರು . ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರು ಹಾಗೂ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು . ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ . ಕೆ.ಎನ್.ವೇಣುಗೋಪಾಲ್ , ಮುಖಂಡ ರೋಣೂರು ಚಂದ್ರಶೇಖರ್ , ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ , ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಬಿ.ಆರ್.ಮಂಜುನಾಥ್ , ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ , ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ರಮಣಿ , ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ , ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ್ , ಅಧಿಕಾರಿಗಳಾದ ಸುಲೋಚನ , ಕೆ.ಸಿ.ವಸಂತ , ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಜೆ.ಸಿ.ನಾರಾಯಣಸ್ವಾಮಿ ಇದ್ದರು .