ಕೋಲಾರ:- ಗುರುಭವನ ನಿರ್ಮಾಣಕ್ಕೆ ಅಗತ್ಯವಾದ ಆರ್ಥಿಕ ನೆರವನ್ನುಸಂಸದರು,ಶಾಸಕರು,ವಿಧಾನಪರಿಷತ್ ಸದಸ್ಯರ ನಿಧಿ ಸೇರಿದಂತೆ ಸರ್ಕಾರದಿಂದಲೂ ಅಗತ್ಯ ಅನುದಾನ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಸಂಸದ ಎಸ್.ಮುನಿಸ್ವಾಮಿ ಭರವಸೆ ನೀಡಿದರು.
ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಆಹ್ವಾನಪತ್ರಿಕೆ ನೀಡಲು ಆಗಮಿಸಿದ್ದ ಶಿಕ್ಷಕರ ಸಂಘಟನೆಗಳ ಮುಖಂಡರಿಗೆ ಈ ಭರವಸೆ ನೀಡಿದ ಅವರು, ಗುರುಭವನಕ್ಕೆ ಸೂಚಿಸಿರುವ ಜಾಗದಲ್ಲೇ ಶಿಕ್ಷಕರ ದಿನಾಚರಣೆ ಆಚರಿಸುವುದು ಮತ್ತು ಅಂದೇ ಗುರುಭವನಕ್ಕೆ ಶಿಲಾನ್ಯಾಸ ಮಾಡಲು ತಿಳಿಸಿದ್ದೆ ಎಂದರು.
ನಿರಂತರ ಮಳೆ ಹಾಗೂ ಸಿದ್ದತೆಗಳ ಕೊರತೆಯಿಂದಾಗಿ ಸೆ.5 ರಂದು ಶಿಲಾನ್ಯಾಸ ಕಾರ್ಯಕ್ರಮ ಕೈಬಿಟ್ಟಿದ್ದು, ಮುಂದಿನ ದಿನಗಳಲ್ಲಿ ಶಿಲಾನ್ಯಾಸಕ್ಕೆ ಸಿದ್ದತೆ ಮಾಡುವುದಾಗಿ ಶಿಕ್ಷಕರ ಸಂಘದ ಮುಖಂಡರು ತಿಳಿಸಿದರು.
ಸಂಸದ ಮುನಿಸ್ವಾಮಿ ಮಾತನಾಡಿ, ಗುರುಭವನ ಕಾಮಗಾರಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಇದು ಸರಿಯಲ್ಲ ಎಂದ ಅವರು, ಅನುದಾನದ ಕೊರತೆ ಇದ್ದರೆ ನನ್ನ ಗಮನಕ್ಕೆ ತನ್ನಿ ನನ್ನ ಸಂಸದರ ಅನುದಾನ, ಶಾಸಕರ,ವಿಧಾನಪರಿಷತ್ ಸದಸ್ಯರ ಅನುದಾನ ಕ್ರೋಢೀಕರಿಸಿ ಗುರುಭವನ ನಿರ್ಮಿಸೋಣ ಎಂದರು.
ಗುರುಭವನವನ್ನು ರಾಜ್ಯದಲ್ಲೇ ಮಾದರಿಯಾಗಿ ನಿರ್ಮಿಸಲು ಯೋಜನೆ ರೂಪಿಸಿ ಎಂದ ಅವರು, ಸರ್ಕಾರದಿಂದಲೂ ಅಗತ್ಯ ಅನುದಾನ ಕೊಡಿಸಲು ತಾವು ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್, ತಾಲ್ಲೂಕು ಗೌರವಾಧ್ಯಕ್ಷ ಎಂ.ಎನ್.ಶ್ರೀನಿವಾಸಮೂರ್ತಿ,ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಮುರಳಿಮೋಹನ್,ಮುಖ್ಯಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಶ್ರೀನಿವಾಸ್, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಕೆಂಬೋಡಿ ರವಿ ಮತ್ತಿತರರಿದ್ದರು.