ಕುಂದಾಪುರ: “ವಿದ್ಯಾರ್ಥಿಗಳು ಅದಮ್ಯ ಉತ್ಸಾಹದಿಂದ ಕ್ರಿಯಾಶೀಲರಾದರೆ ತಮ್ಮ ವ್ಯಕ್ತಿತ್ವವನ್ನು ವಿವಿಧ ಆಯಾಮಗಳಲ್ಲಿ ಬೆಳೆಸಿಕೊಳ್ಳಬಹುದು. ಕಲೆಗೆ ಸಂಬಂಧಿಸಿದ ಯಾವುದೇ ಒಂದು ಕ್ಷೇತ್ರದಲ್ಲಿ ಈ ಪ್ಯಾಶನ್ ಇದ್ದರೂ ಅದರಲ್ಲಿ ಆಳವಾಗಿ ತೊಡಗಿಸಿಕೊಂಡು ಹಂತ ಹಂತವಾಗಿ ಸಮಾಜದಲ್ಲಿ ಮಹತ್ವದ ಸ್ಥಾನವನ್ನು ತಲುಪಬಹುದು ಎಂದು ನವಸಂಕೇತ್ – ಫ್ರೆಷರ್ಸ್ ಫಿಯೆಸ್ಟಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ
ಕಾಲೇಜಿನ ಹಳೆ ವಿದ್ಯಾರ್ಥಿನಿ ಹೆಸರಾಂತ ನಿರೂಪಕಿ, 92.7 ಬಿಗ್ ಎಫ್.ಎಮ್ ನ ಆರ್.ಜೆ, ಸ್ಪೂರ್ತಿ ತೇಜ್ ಇವರು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ನವ ಸಂಕೇತ್ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ಪೋಸ್ಟರ್ ಸ್ಪರ್ಧೆಯಲ್ಲಿ ಬಹುಮಾನ ವಿಜೇತ ಪೋಸ್ಟರ್ ನ್ನು ಕೊಳಲು ವಾದನ ಮತ್ತು ಶಂಖನಾದದ ಹಿನ್ನೆಲೆಯಲ್ಲಿ ಅನಾವರಣ ಮಾಡುವ ಮೂಲಕ ಫ್ರೆಷರ್ಸ್ ಫಿಯೆಸ್ಟಾ-24 ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಇನ್ನೋರ್ವ ಮುಖ್ಯ ಅತಿಥಿ, ಕಾಲೇಜಿನ ಹಳೆ ವಿದ್ಯಾರ್ಥಿ, ಕುಂದಾಪುರದ ಯುವ ಉದ್ಯಮಿ, ಉದಯ ಜ್ಯುವೆಲರ್ಸ್ ನ ಮಾಲೀಕರಾದ ಶ್ರೀ ಅಕ್ಷಯ್ ಶೇಟ್ ಇವರು ತಮ್ಮ ಕಾಲೇಜಿನ ದಿನಗಳ ರಸಗಳಿಗೆಗಳನ್ನು ಸ್ಮರಿಸಿಕೊಂಡು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಇನ್ನೋರ್ವ ಹಳೆ ವಿದ್ಯಾರ್ಥಿನಿ ಯುಕ್ತಿ ಉಡುಪ ಇವರು ಭರತನಾಟ್ಯ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ರಚಿಸಿದ ಅತ್ಯುತ್ತಮ ಪೋಸ್ಟರ್ ಗಳ ಪ್ರದರ್ಶನ ನಡೆಸಲಾಯಿತು. ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿದ ಕಾಲೇಜಿನ ಸಾಧಕ ಹಳೆ ವಿದ್ಯಾರ್ಥಿತ್ರಯರನ್ನು ಸನ್ಮಾನಿಸಲಾಯಿತು. ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕಿ ಸುಮತಿ ಶೆಣೈ ಯವರು ಫ್ರೆಷರ್ಸ್ ಡೇ ಯ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಿರ್ವಹಿಸಿದರು. ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಮತ್ತು ಕೌಶಲ್ಯಾಧಾರಿತ ಆಟಗಳನ್ನು ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಯಿತು. ದ್ವಿತೀಯ ಪಿ.ಯು.ಸಿ ಯ ತವಾಬ್ ಇವರು ಅತಿಥಿಗಳನ್ನು ಸ್ವಾಗತಿಸಿದರು. ದ್ವಿತೀಯ ಪಿ.ಯು.ಸಿಯ ಕ್ಷಮಾ, ಸುನೀತಾ ಹಾಗೂ ರಕ್ಷಿತಾ ಆಚಾರ್ ಅತಿಥಿ ಪರಿಚಯ ನೀಡಿದರು. ದ್ವಿತೀಯ ಪಿ.ಯು.ಸಿ ಯ ಪ್ರಾರ್ಥನಾ ಇವರು ಧನ್ಯವಾದ ಸಲ್ಲಿಸಿದರು. ದ್ವಿತೀಯ ಪಿ.ಯು.ಸಿ ಯ ಭುವನ್ ಎಸ್ ಇವರು ಕಾರ್ಯಕ್ರಮ ನಿರೂಪಿಸಿದರು.