ಶ್ರೀನಿವಾಸಪುರ ತಾಲ್ಲೂಕಿನ ಹೊದಲಿ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭದಲ್ಲಿ ತಾಲ್ಲೂಕು ಗ್ರಾಮ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಕುಮಾರಿ ಮಾತನಾಡಿದರು.
ಮತದಾನ ಮಾಡುವುದು ಮತದಾರನ ಹಕ್ಕು
ಶ್ರೀನಿವಾಸಪುರ: ಎಲ್ಲ ಅರ್ಹ ಮತದಾರರು ಮತದಾನ ಮಾಡುವುದರ ಮೂಲಕ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಯಾವುದೇ ಕಾರಣಕ್ಕೂ ಮತದಾನ ಮಾಡುವುದರಿಂದ ದೂರ ಉಳಿಯಬಾರದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಿಕುಕುಮಾರಿ ಹೇಳಿದರು.
ತಾಲ್ಲೂಕಿನ ಹೊದಲಿ ಗ್ರಾಮದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕಂದಾಯ ಇಲಾಖೆ, ತಾಲ್ಲೂಕು ಪಂಚಾಯಿತಿ ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, 18 ವರ್ಷ ತುಂಬಿದ ಎಲ್ಲ ಅರ್ಹ ವ್ಯಕ್ತಿಗಳೂ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಬೇಕು ಎಂದು ಹೇಳಿದರು.
ಮತದಾನ ಮಾಡುವುದು ಮತದಾರರ ಹಕ್ಕು. ಅದನ್ನು ಚಲಾಯಿಸುವುದರ ಮೂಲಕ ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು. ಮತದಾರರು ಮತದಾನದಿಂದ ದೂರ ಉಳಿದಲ್ಲಿ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡುವುದರಿಂದ ವಂಚಿತರಾಗುತ್ತಾರೆ. ಮುಂದೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಮತದಾನ ಕಡ್ಡಾಯ ಎಂಬುದನ್ನು ಮರೆಯಬಾರದು. ಸಂಬಂಧಪಟ್ಟ ಇಲಾಖೆಗಳ ಸಿಬ್ಬಂದಿ ಮತ್ತು ವಿದ್ಯಾವಂತ ಸಮುದಾಯ ಮತಾದನದ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎನ್.ವಿ.ಜಯರಾಮೇಗೌಡ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಹೆಚ್ಚಿನ ಮಾನ್ಯತೆ ಇದೆ. ಮತದಾನದ ಹಕ್ಕು ಸಂವಿಧಾನದಿಂದ ಪ್ರಾಪ್ತವಾಗಿದೆ. ಅದನ್ನು ತಪ್ಪದೆ ಚಲಾಯಿಸುವುದರ ಮೂಲಕ ಉತ್ತಮ ಪ್ರತಿನಿಧಿಗಳನ್ನು ಚುನಾಯಿಸಬೇಕು. ಯಾವುದೇ ಅಮಿಷಕ್ಕೆ ಒಳಗಾಗದೆ, ತಮಗೆ ಇಷ್ಟವಾದ ವ್ಯಕ್ತಿಗೆ ಮತ ನೀಡುವುದರಿಂದ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿದರು.
ದೇಶದಲ್ಲಿ ವಿವಿಧ ಹಂತಗಳಲ್ಲಿ ಮತದಾನ ನಡೆಯುತ್ತದೆ. ಎಲ್ಲ ಚುನಾವಣೆಗಳಲ್ಲೂ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕಾದ ಜವಾಬ್ದಾರಿ ಮತದಾರರ ಮೇಲಿದೆ. ಉತ್ತಮ ಆಡಳಿತಂದಿ ಮಾತ್ರ ದೇಶದ ಪ್ರಗತಿ ಸಾಧ್ಯವಾಗುತ್ತದೆ. ಹೊಣೆ ಅರಿತ ಮತದಾರ ಮಾತ್ರ ಅಂಥ ವ್ಯವಸ್ಥೆಯನ್ನು ಬೆಂಬಲಿಸುತ್ತಾನೆ. ಇದರ ಜತೆಗೆ ಪ್ರಜೆಗಳಿಗೆ ಕಾನೂನು ಅರಿವು ಅತ್ಯಗತ್ಯ ಎಂದು ಹೇಳಿದರು.
ವಕೀಲರಾದ ಶ್ರೀನಿವಾಸಗೌಡ, ಶಂಕರಪ್ಪ ನಾಯಕ್ ಮತದಾನದ ಮಹತ್ವ ಹಾಗೂ ಪ್ರಜೆಗಳ ಹಕ್ಕು ಹಾಗೂ ಕರ್ತವ್ಯಗಳ ಬಗ್ಗೆ ಉಪನ್ಯಾಸ ನೀಡಿದರು.
ಪಿಡಿಒ ಸಂಪತ್ ಕುಮಾರ್, ಕಾರ್ಯದರ್ಶಿ ಶಿವಶಂಕರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಶ್ರೀನಿವಾಸ್, ಕಲಾವಿದ ನಾರಾಯಣಸ್ವಾಮಿ, ಕಲಾ ಶಂಕರ್, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.