ಕೋಲಾರ: ಹಾಕಿ ಮಾಂತ್ರಿಕ ಧ್ಯಾನಚಂದ್ ಆದರ್ಶದಲ್ಲಿ ಸಾಗುವ ಮೂಲಕ ಯುವ ಕ್ರೀಡಾಪಟುಗಳು ಹೆಮ್ಮೆಯ ಕ್ರೀಡಾಪಟುಗಳಾಗಿ ದೇಶಕ್ಕೆ ಕೀರ್ತಿ ತರಬೇಕೆಂದು ಅಂತರಾಷ್ಟ್ರೀಯ ಅಥ್ಲೆಟಿಕ್ ಬಿಂದುರಾಣಿ ಹೇಳಿದರು.
ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಕಾರ್ಯಕ್ರಮವನ್ನು ತ್ರಿವರ್ಣದ ಬಲೂನ್‍ಗಳನ್ನು ಹಾರಿ ಬಿಟ್ಟು ಹಾಕಿ ಮಾಂತ್ರಿಕ ಧ್ಯಾನಚಂದ್‍ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡುತ್ತಿದ್ದರು.
ಕಿರಿಯ ವಯಸ್ಸಿನಲ್ಲಿಯೇ ಕ್ರೀಡಾ ಕ್ಷೇತ್ರವನ್ನು ಪ್ರವೇಶಿಸಿದ ಧ್ಯಾನಚಂದ್ ಸೌಲಭ್ಯ ಸವಲತ್ತು ತರಬೇತಿಯ ಕೊರತೆ ನಡುವೆಯೂ ಹಾಕಿಯಲ್ಲಿ ಇಡೀ ವಿಶ್ವವೇ ಗಮನಿಸುವಂತ ಕ್ರೀಡಾಪಟುವಾಗಿ ಬೆಳೆದರು. ಈಗಿನ ಕ್ರೀಡಾಪಟುಗಳು ಸರಕಾರದ ಯೋಜನೆ ಮತ್ತು ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಕ್ರೀಡಾಪಟುಗಳಾಗಬೇಕೆಂದು ಕಿವಿಮಾತು ಹೇಳಿದರು.
ಅಥ್ಲೆಟಿಕ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಕೆ.ಜಯದೇವ್ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಕ್ರೀಡಾಚಟುವಟಿಕೆಗಳನ್ನು ಹೆಚ್ಚಿಸುವ ಸಲುವಾಗಿ ಸರಕಾರ ಈಗಾಗಲೇ ಬಿಡುಗಡೆ ಮಾಡಿರುವ ಅನುದಾನದಲ್ಲಿ ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಶೀಘ್ರದಲ್ಲಿಯೇ ಅತ್ಯಾಧುನಿಕ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಿ ಯುವ ಕ್ರೀಡಾಪಟುಗಳಿಗೆ ಅತ್ಯುತ್ತಮ ತರಬೇತಿ ಸಿಗುವಂತೆ ಮಾಡಲಾಗುವುದು ಎಂದರು.
ಚಿಕ್ಕಬಳ್ಳಾಪುರ ಅಥ್ಲೆಟಿಕ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಮಂಚನಬೆಲೆ ಶ್ರೀನಿವಾಸ್ ಮಾತನಾಡಿ, ಹಾಕಿ ಮಾಂತ್ರಿಕ ಧ್ಯಾನಚಂದ್ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು, ಹಿಟ್ಲರ್ ಅವರಿಗೆ ಮೇಜರ್ ಹುದ್ದೆ ನೀಡುವ ಆಮಿಷ ತೋರಿದರು ಭಾರತ ದೇಶವನ್ನು ಪ್ರತಿನಿ„ಸುವ ಅವಕಾಶವನ್ನು ಕಳೆದುಕೊಳ್ಳದ ಅಪ್ರತಿಮ ದೇಶಪ್ರೇಮಿ ಧ್ಯಾನಚಂದ್ ಆಗಿದ್ದರೆಂದು ವರ್ಣಿಸಿದರು.
ಜಿಲ್ಲಾ ಭಾರತ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಧ್ಯಾನಚಂದ್‍ರಂತ ಮತ್ತೊರ್ವ ಹಾಕಿ ಕ್ರೀಡಾಪಟು ಇದುವರೆವಿಗೂ ಹುಟ್ಟಿಲ್ಲ, ಹಾಕಿ ಕ್ರೀಡೆಯಲ್ಲಿ ಅವರು ಮಾಡಿರುವ ಸಾಧನೆ ಮೇರು ಶಿಖರವಾಗಿ ಉಳಿದುಬಿಟ್ಟಿದೆ. ಅನೇಕ ದಂತಕಥೆಗಳು ಅವರ ಬಗ್ಗೆ ಇಂದಿಗೂ ಉಳಿದುಕೊಂಡಿರುವುದು ಅವರ ಕ್ರೀಡಾ ಸಾಧನೆಗೆ ಕನ್ನಡಿಯಾಗಿದೆ.ಇಂತ ಮಹನೀಯರ ಆದರ್ಶದಲ್ಲಿ ಕ್ರೀಡಾಪಟುಗಳು ದೇಶದ ಕೀರ್ತಿ ಪತಾಕೆ ಹಾರಿಸುವಂತಾಗಬೇಕೆಂದರು.
ಕಾರ್ಯಕ್ರಮದಲ್ಲಿ ಕುಡಾ ಅಧ್ಯಕ್ಷ ವಿಜಯಕುಮಾರ್, ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಜಗನ್, ಬೆಂಗಳೂರು ಉತ್ತರ ವಿವಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಕುಮುದಾ, ಜಿಲ್ಲಾ ದೈಹಿಕ ಶಿಕ್ಷಣಾ„ಕಾರಿ ಮಂಜುನಾಥ್, ಕ್ರೀಡಾಪಟುಗಳಾದ ನಿರಂಜನ್, ದೈಹಿಕ ಶಿಕ್ಷಕ ಮುರಳಿ ಮೋಹನ್, ಅರುಣ್‍ಕುಮಾರ್, ಅಂಬರೀಷ್, ತರಬೇತುದಾರ ವೆಂಕಟೇಶ್ ಇತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕ್ರೀಡಾದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಕ್ರೀಡೆಗಳಿಗೆ ಬಿಂದುರಾಣಿ ಚಾಲನೆ ನೀಡಿದರು.
ಬೆಂಗಳೂರು ಉತ್ತರ ವಿವಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಮತ್ತು ಕ್ರೀಡಾ ಹಾಸ್ಟೆಲ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.