




ಕುಂದಾಪುರ : ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಬೇಸಿಕ್ ಸೈನ್ಸ್ ವಿಭಾಗದ ಸಿ.ವಿ.ರಾಮನ್ ಕ್ಲಬ್ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಪ್ರಥಮ ವರ್ಷದ ವಿಧ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಆಯೋಜಿಸಲಾಗಿದ್ದು 40ಕ್ಕೂ ಅಧಿಕ ತಂಡಗಳು ಪ್ರಥಮ ಸುತ್ತಿನಲ್ಲಿ ಭಾಗವಹಿಸಿ ವಿಭಿನ್ನ ರೀತಿಯ ಮಾದರಿಯನ್ನು ತಯಾರಿಸಿ ಪ್ರದರ್ಶಿಸಿದರು. ತಿರುವುಗಳಲ್ಲಿ ಅಪಘಾತ ತಡೆಗಟ್ಟುವಿಕೆ, ಲೇಸರ್ ತಂತ್ರಜ್ಞಾನ ಬಳಸಿ ಸುರಕ್ಷತಾ ಅಲಾರಾಮ್ , ಆರ್ಡಿನೋ ಸಾಧನದಿಂದ ಮೊಬೈಲ್ ಅಲ್ಲೇ ನಿರ್ವಹಣೆ ಮಾಡಬಲ್ಲ ಕಾರು, ನೀರನ್ನು ಸ್ವಚ್ಛ ಮಾಡುವ ಮಾದರಿ, ವೈ ಫ಼ೈ ಮೂಲಕ ನಿರ್ವಹಣೆ ಮಾಡಬಲ್ಲ ವಾಹನ ಹೀಗೆ ಹಲವು ರೀತಿಯ ವಿಶಿಷ್ಟ ಮಾದರಿಯನ್ನು ತಯಾರಿಸಿದರು. ಲೋಳೆರಸದಿಂದ ವಿಧ್ಯುತ್ ತಯಾರಿಕೆ, ಹೊಲೊಗ್ರಾಫಿಕ್ ಪ್ರಕ್ಷೇಪಕಗಳು ವಕ್ರೀಭವನದ ಮೂಲಕ ಸೃಷ್ಟಿಸಿದ ಚಿತ್ರ, ಆಟೋಮ್ಯಾಟಿಕ್ ಜ಼ೀಬ್ರಾ ಕ್ರಾಸಿಂಗ್, ಜಲಾಂತರ್ಗಾಮಿ ವ್ಯವಸ್ಥೆಯ ಮಾದರಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಯಿತು.
ಆಯ್ದ ಹದಿನೈದು ಮಾದರಿಗಳ ಪ್ರದರ್ಶನ ಹಾಗು ಕೊನೆಯ ಹಂತದ ತೀರ್ಪನ್ನು ರಾಷ್ಟ್ರೀಯ ವಿಜ್ಞಾನ ದಿನದಂದು ನಡೆಸಲಾಯಿತು. ಮಧ್ಯಾಹ್ನ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿತ್ತು. ಅತಿಥಿ ಹಾಗೂ ತೀರ್ಪುಗಾರರಾಗಿ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯ ಪ್ರಶಸ್ತಿ ವಿಜೇತ ಗಣಿತ ಪ್ರಾಧ್ಯಾಪಕರಾದ ಶ್ರೀ ಉದಯಕುಮಾರ್ ಹಾಗೂ ಭಟ್ಕಳದ ಸಿಧ್ದಾರ್ಥ ಪದವಿ ಪೂರ್ವ ಕಾಲೇಜಿನ ಗಣಿತ ಪ್ರಾಧ್ಯಾಪಕರಾದ ಶ್ರೀ ಶ್ರೀನಿವಾಸ ಎನ್ ನಾಯ್ಕ್ ಅವರು ಆಗಮಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಉದಯಕುಮಾರ್ ಅವರು ಪ್ರಥಮ ವರ್ಷದ ವಿಧ್ಯಾರ್ಥಿಗಳಾಗಿ ಕಡಿಮೆ ಅವಧಿಯಲ್ಲಿ ಹೊಸ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾದರಿಯನ್ನು ಪ್ರಸ್ತುತ ಪಡಿಸಿರುವುದು ನಿಜವಾಗಿಯೂ ಶ್ಲಾಘನೀಯ. ಮುಂದಿನ ದಿನಗಳಲ್ಲಿ ತಮ್ಮ ಸುತ್ತ ಮುತ್ತಲಿನ ಸಮಸ್ಯೆಗಳನ್ನು ಅರಿತು ಅದಕ್ಕೆ ಪರಿಹಾರ ಒದಗಿಸುವಂತಹ ಪ್ರಾಜೆಕ್ಟ್ ಗಳನ್ನು ಆವಿಷ್ಕರಿಸಿ ಜನಹಿತ ಕಾರ್ಯಗಳಲ್ಲಿ ತೊಡಗಬೇಕು ಎಂದು ಕರೆ ನೀಡಿದರು. ಇನ್ನೋರ್ವ ಅತಿಥಿಯಾಗಿರುವ ಶ್ರೀನಿವಾಸ ನಾಯ್ಕ್ ಅವರು ಮಾತನಾಡಿ ವಿಧ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿ ಯಾದರೆ ಕಾಲೆಜು ಉನ್ನತ ಸ್ಥಾನವೇರುವುದರಲ್ಲಿ ಬೇರೆ ಮಾತಿಲ್ಲ ಆ ನಿಟ್ಟಿನಲ್ಲಿ ಇಂತಹ ಸ್ಪರ್ದೆಗಳು ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೇ ಪ್ರತಿಯೊಂದು ಕಾರ್ಯದಲ್ಲು ಗುರುಹಿರಿಯರ ಮಾರ್ಗದರ್ಶನ ಅತಿ ಅವಶ್ಯಕ ಎಂದು ಉದಾಹರಣೆಯೊಂದಿಗೆ ವಿವರಿಸಿ ತಾವು ಕಲಿತ ಶಾಲಾಕಾಲೇಜುಗಳ ಬಗ್ಗೆ ಸದಾಕಾಲ ಅಭಿಮಾನ ಹೊಂದಿರಬೇಕು ಎಂದು ಮಾರ್ಮಿಕವಾಗಿ ತಿಳಿಸಿದರು. ಐಎಮ್ ಜೆ ವಿಧ್ಯಾ ಸಂಸ್ಥೆಯ ನಿರ್ದೇಶಕರಾದ ಪ್ರೊಫ಼ೆಸರ್ ದೋಮ ಚಂದ್ರಶೇಖರ ಅವರು ವಿಧ್ಯಾರ್ಥಿಗಳ ಉತ್ಸಾಹ, ಮಾದರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ|ಅಬ್ದುಲ್ ಕರೀಮ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಿ ವಿ ರಾಮನ್ ಅವರ ಸಾಧನೆಯ ಬಗ್ಗೆ ವಿವರಿಸುತ್ತ ವಿಧ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಆವಿಷ್ಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಡು ಕಾಲೇಜಿನ ಕೀರ್ತಿ ಹೆಚ್ಚಿಸುವಲ್ಲಿ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು. ಬೇಸಿಕ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ದೀಪಕ್ ಶೆಟ್ಟಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾ, ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ|ರಾಮಕೃಷ್ಣ ಹೆಗ್ಡೆ, ಸಂಯೋಜಕರಾದ ಪ್ರೊಫೆಸರ್ ಸೂಕ್ಷ್ಮ ಅಡಿಗ , ವಿಭಾಗದ ಮುಖ್ಯಸ್ಥರು , ಸಿಬ್ಬಂದಿ ವರ್ಗ ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಥಮ ವರ್ಷದ ವಿಧ್ಯಾರ್ಥಿನಿ ಪ್ರತೀಕ್ಷಾ ಗಾಣಿಗ ಕಾರ್ಯಕ್ರಮ ನಿರೂಪಿಸಿದರು. ಸಿವಿ ರಾಮನ್ ಕ್ಲಬ್ ಇದರ ಅಧ್ಯಕ್ಷ ದೇವರಾಜ್ ಮತ್ತು ದರ್ಶನ್ ಅತಿಥಿಗಳ ಪರಿಚಯ ಮಾಡಿ, ಉಪಾಧ್ಯಕ್ಷ ಮಣಿಕಂಠ ವಿಜೇತರ ವಿವರಣೆ ನೀಡಿದರು ಹಾಗೂ ಕಾರ್ಯದರ್ಶಿ ಶರತ್ ಸ್ವಾಗತಿಸಿ, ಸ್ನೇಹ ವಂದಿಸಿದರು