ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ರಾಷ್ಟ್ರಧ್ವಜಕ್ಕೆ ಸಲ್ಲಬೇಕಾದ ಗೌರವವನ್ನು ಪ್ರತಿಯೊಬ್ಬ ಭಾರತೀಯ ಪ್ರಜೆ ನೀಡಲೇಬೇಕು. ಅದಕ್ಕಾಗಿ ಭಾರತ ಸೇವಾದಳದಿಂದ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಂಜೀವಪ್ಪ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾರತ ಸೇವಾದಳವತಿಯಿಂದ ಗುರುವಾರ ರಾಷ್ಟ್ರ ಧ್ವಜ ಅಂಗೀಕಾರ ದಿನಾಚರಣೆ ಪ್ರಯುಕ್ತ ತಾಲೂಕು ಪಂಚಾಯತ್ ಕಾರ್ಯನಿರ್ವಹಕಾಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ರಾಷ್ಟ್ರ ಧ್ವಜ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ರಾಷ್ಟ್ರಧ್ವಜಕ್ಕಿರುವ ಮಾನದಂಡಗಳು, ಧ್ವಜ ಕಟ್ಟುವ ವಿಧಾನ ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ತರಬೇತಿಯನ್ನು ಪಡೆದು ಗ್ರಾಪಂ ಹಾಗೂ ತಾಪಂ ಮಟ್ಟದಲ್ಲಿ ಶಿಸ್ತು, ಸಮಯಪಾಲನೆ ಪಾಲಿಸಬೇಕು. ರಾಷ್ಟ್ರದ ತ್ರಿವರ್ಣ ಧ್ವಜದ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಅದಕ್ಕೆ ಅವಮಾನ ತರುವಂತ ಸಂಗತಿಗಳು ನಡೆಯಬಾರದು. ಇದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಜಿಲ್ಲೆಯಾದ್ಯಂತ ಪ್ರತಿ ಪಂಚಾಯತಿಯಲ್ಲಿ ಭಾರತ ಸೇವಾದಳ ಶಾಖೆಯಾಗಬೇಕು. ಗ್ರಾಮದ 33 ಯುವ ಜನತೆಯನ್ನು ಕ್ರೂಢೀಕರಿಸುವ ಕಾರ್ಯ ಪಿಡಿಒಗಳು ಮಾಡಿದರೆ, ರಾಷ್ಟ್ರ ಧ್ವಜವನ್ನು ಹಾರಿಸುವ, ಮಡಚುವ ವಿಧಾನ, ಸಂಗ್ರಹಿಸಿಡುವ ಪದ್ಧತಿ, ಆರೋಹಣ, ಅವರೋಹಣ ಸಂಪ್ರದಾಯ, ಹಾಡಬೇಕಾದ ಗೀತೆಗಳು ಮತ್ತಿತರ ವಿಚಾರಗಳನ್ನು ಸೇವಾದಳದ ಸಂಘಟಕರು ಮತ್ತು ತರಬೇತುದಾರರು ಖುದ್ದಾಗಿ ಬಂದು ತರಬೇತಿ ನೀಡಿ ವಿವರಿಸುವರು ಎಂದು ತಿಳಿಸಿದರು.
ಕರ್ನಾಟಕದ ನಾ.ಸು.ಹರ್ಡೀಕರ್‍ರಿಂದ ಸ್ಥಾಪಿಸಲ್ಪಟ್ಟ ಹಿಂದೂಸ್ತಾನ್ ಸೇವಾದಳ ಸಂಘಟನೆಯು ಸ್ವಾತಂತ್ರ್ಯ ನಂತರ ರಾಜಕೀಯ ರಹಿತ ಸಂಘಟನೆಯಾಗಿ ಭಾರತ ಸೇವಾದಳವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶಾಲಾ ಮಕ್ಕಳಿಗೆ ರಾಷ್ಟ್ರಭಕ್ತಿಯನ್ನು ಮೂಡಿಸುವ ಚಟುವಟಿಕೆಗಳನ್ನು ಜಿಲ್ಲೆಯಾದ್ಯಂತ ನಡೆಸುತ್ತಿದೆ. ಸರ್ಕಾರದ ಆದೇಶದಂತೆ ಸೇವಾದಳ ಚಟುವಟಿಕೆಯನ್ನು ಪಿಯುಸಿ, ಪದವಿ ಹಂತಕ್ಕೆ ವಿಸ್ತರಣೆ ಮಾಡಿದ್ದು, ಈಗ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅ„ಕಾರಿಗಳಿಗೆ ರಾಷ್ಟ್ರ ಧ್ವಜ ಮಾಹಿತಿ ತಿಳಿಸುವ ಕಾರ್ಯ ನಡೆಸಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎನ್.ನಾಗರಾಜ್ ಅವರು ರಾಷ್ಟ್ರಧ್ವಜ ಮಾಹಿತಿ ಕಾರ್ಯಾಗಾರದ ಮಹತ್ವ ಅರಿತು ತರಬೇತಿಗೆ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ. ಪಂಚಾಯಿತಿ ಕಚೇರಿಗಳ ಮೇಲೆ ಬಾವುಟ ಹಾರಿಸುವ ವಿಧಾನದಲ್ಲಿ ತಪ್ಪಾದರೆ ಅಥವಾ ಹಾರಿಸಿಲ್ಲವೆಂದರೆ ಸೇವೆಯಿಂದಲೇ ಅಮಾನತು ಗೊಳ್ಳುವ ಸಂಭವವಿದೆ. ಆದ್ದರಿಂದ ಪ್ರತಿ ಅಧಿಕಾರಿಯೂ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಾತ್ಮ ಗಾಂಧೀಜಿ ಅವರ ತತ್ವ ಆದರ್ಶ ಹಾದಿಯಲ್ಲಿ 6 ಅಂಶಗಳಾದ ಶಿಸ್ತು, ಸ್ವಾಸ್ಥ್ಯ, ಸಂಘಟನೆ, ಸಹಭಾಗಿತ್ವ, ಸಹಾಯ ಹಾಗೂ ಸೌಹಾರ್ದತೆ ಎಂಬ ಧ್ಯೇಯೋದ್ಧೇಶಗಳನ್ನು ಇಟ್ಟುಕೊಂಡು ಸೇವಾದಳ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ನಿಗದಿತ ಸಮಯಕ್ಕೆ ಸರಿಯಾಗಿ ಹಾರಿಸಬೇಕು. ಯಾವ ಜನನಾಯಕರಿಗೂ ಕಾಯಬೇಕಾಗಿಲ್ಲ. ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಕುರಿತು ಅಭಿಮಾನ ಗೌರವ ಮೂಡಿಸುವ ಕಾರ್ಯ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಈ ವೇಳೆ ಭಾರತ ಸೇವಾದಳದ ಹಿರಿಯ ಕಾರ್ಯಕರ್ತ ಕಾಶಿಂಕುಂಟೆ ಅವರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸುಮಾರು ಮೂರು ಗಂಟೆಗಳ ಕಾಲ ರಾಷ್ಟ್ರ ಧ್ವಜ ಮಾಹಿತಿ ಕಾರ್ಯಗಾರವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟರು.
ಸ್ವಾತಂತ್ರ್ಯ ರಾಷ್ಟ್ರವೊಂದರ ಲಕ್ಷಣಗಳಾದ ರಾಷ್ಟ್ರಗೀತೆ,ರಾಷ್ಟ್ರಧ್ವಜ, ರಾಷ್ಟ್ರಪಕ್ಷಿ, ರಾಷ್ಟ್ರಲಾಂಚನ, ರಾಷ್ಟ್ರಪ್ರಾಣಿಯ ಕುರಿತು ಅರಿವಿರಬೇಕು, ಸೇವಾದಳ ಮಾತ್ರ ರಾಷ್ಟ್ರಧ್ವಜದ ಕುರಿತು ಮಾಹಿತಿ ನೀಡುವ ಏಕೈಕ ಸಂಸ್ಥೆಯಾಗಿದೆ ಎಂದರು.
ಧ್ವಜ ಯಾವುದೇ ಓರ್ವ ಅಧಿಕಾರಿ,ಪ್ರತಿನಿಧಿಯ ಸ್ವತ್ತಲ್ಲ, ಪ್ರತಿ ನಾಗರೀಕನ ಗೌರವದ ಸಂಕೇತ, ರಾಷ್ಟ್ರವನ್ನು ಪ್ರತಿಬಿಂಬಿಸುವುದೇ ಧ್ವಜ,ಕೇಸರಿ ಬಣ್ಣ ಭಾರತೀಯರ ತ್ಯಾಗ,ಧೈರ್ಯದ ಸಂಕೇತವಾಗಿದೆ, ಹಸಿರು ಶೌರ್ಯ,ಸಂಮೃದ್ದಿಯ ಸಂಕೇತ, ಬಿಳಿ ಸತ್ಯ,ಶಾಂತಿ,ನಿರ್ಮಲತೆಯ ಪ್ರತೀಕ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ಸೆಂಟ್ರಲ್ ಸಂಸ್ಥೆ ಅಧ್ಯಕ್ಷ ಸಿಎಂಆರ್ ಶ್ರೀನಾಥ್, ಭಾರತ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಜಿ. ಶ್ರೀನಿವಾಸ್, ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್, ಸದಸ್ಯರಾದ ಅಪ್ಪಿ ನಾರಾಯಣಸ್ವಾಮಿ,ಡಿ.ಮುನೇಶ್, ಸಂಪತ್‍ಕುಮಾರ್, ಬಹುದ್ದೂರ್ ಸಾಬ್, ಆರ್.ರವಿಕುಮಾರ್, ಎಂ.ನಾಗರಾಜ್ ದಾನೇಶ್ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸರ್ವಧರ್ಮ ಪ್ರಾರ್ಥನೆಯಿಂದ ಆರಂಭವಾದ ಕಾರ್ಯಕ್ರಮವನ್ನು ಸೇವಾದಳ ತರಬೇತುದಾರ ಮಂಜುನಾಥ್‍ರ ನಿರೂಪಿಸಿ, ಜಿಲ್ಲಾ ಸಂಘಟಿಕ ಎಂ.ಬಿ.ದಾನೇಶ್ ವಂದಿಸಿದರು. ರಾಷ್ಟ್ರಗೀತೆ ಗಾಯನದೊಂದಿಗೆ ಮುಕ್ತಾಯವಾಯಿತು. ಇದೇ ಸಂದರ್ಭದಲ್ಲಿ ಜಿಲ್ಲೆಯ 156 ಪಂಚಾಯ್ತಿ ಪಿಡಿಒಗಳಿಗೂ ಭಾರತ ಸೇವಾದಳ ಪ್ರಕಟಿಸಿರುವ ರಾಷ್ಟ್ರಧ್ವಜ ಮಾಹಿತಿ ಪುಸ್ತಕ ಮತ್ತು ಸೇವಾದಳ ಕಾರ್ಯಚಟುವಟಿಕೆಗಳ ಪರಿಚಯಿಸುವ ಕಿರು ಹೊತ್ತಿಗೆಯನ್ನು ವಿತರಿಸಲಾಯಿತು.