

ಕೋಲಾರ:- ಭಾರತ ರಾಷ್ಟ್ರಧ್ವಜ ಸಂಹಿತಿ ವಿಚಾರಗಳು ಪಠ್ಯಪುಸ್ತಕದ ವಿಚಾರವಾಗಿ ಮಕ್ಕಳನ್ನು ತಲುಪಬೇಕಾಗಿದೆಯೆಂದು ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಅಧ್ಯಕ್ಷ ಎ.ಸದಾನಂದ ಹೇಳಿದರು.
ತಾಲೂಕಿನ ನಡುಪಳ್ಳಿ ಜ್ಞಾನಬೋಧ ಶಾಲೆಯಲ್ಲಿ ಭಾರತ ಸೇವಾದಳವತಿಯಿಂದ ಬುಧವಾರ ಆಯೋಜಿಸಲಾಗಿದ್ದ ರಾಷ್ಟ್ರಧ್ವಜ ಮಾಹಿತಿ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಇತ್ತೀಚಿನ ವರ್ಷಗಳಲ್ಲಿ ವಿವಾದಾತ್ಮಕ ವಿಚಾರಗಳನ್ನು ಪಠ್ಯವಸ್ತುವಾಗಿಸುತ್ತಿರುವ ಬೆಳವಣಿಗೆ ನಡುವೆ ದೇಶದ ಪ್ರತಿ ಪ್ರಜೆಗೂ ಅಗತ್ಯವಿರುವ ರಾಷ್ಟ್ರಧ್ವಜ ಸಂಹಿತೆ ವಿಷಯಗಳು ಪಠ್ಯಗಳಾದಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರಧ್ವಜದ ಮೇಲೆ ಅಭಿಮಾನ ಪ್ರೀತಿ ಹೆಚ್ಚುವಂತಾಗುತ್ತದೆ, ರಾಷ್ಟ್ರಧ್ವಜಕ್ಕೆ ಅನಗತ್ಯ ಅಪಮಾನವಾಗುವುದು ನಿಲ್ಲುತ್ತದೆಯೆಂದರು.
ಭಾರತ ಸೇವಾದಳವು ಸ್ವಾತಂತ್ರ್ಯ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ರಾಷ್ಟ್ರಧ್ವಜ ಮಾಹಿತಿ ಶಿಬಿರಗಳ ಸರಣಿ ಅರಂಭಿಸಿರುವುದು ಸ್ವಾಗತಾರ್ಹ, ಈ ಶಿಬಿರ ಪ್ರತಿ ಶಾಲೆಯಲ್ಲಿಯೂ ನಡೆಯುವಂತಾದರೆ ವಿದ್ಯಾರ್ಥಿಗಳಿಗೆ ಸಹಕಾರಿಯಾಗುತ್ತದೆಯೆಂದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ರಾಷ್ಟ್ರಧ್ವಜ ಸಂಹಿತೆ ಕುರಿತು ಮಾಹಿತಿ ನೀಡಿ, ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪ್ರತಿ ಮನೆಯಲ್ಲಿಯೂ ತ್ರಿವರ್ಣ ಧ್ವಜ ಹಾರಿಸುವ ಸಂದೇಶ ಉತ್ತಮವಾದರೂ, ಆಗಸ್ಟ್ 15 ರ ನಂತರ ತ್ರಿವರ್ಣಧ್ವಜಗಳು ಕಸವಾಗುವುದಂತೆ ಎಚ್ಚರವಹಿಸಿ ಧ್ವಜ ಸಂಹಿತೆಯನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹೇಳಿದರು.
ಭಾರತಸೇವಾದಳ ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್ ಮಾತನಾಡಿ, ಭಾರತ ಸೇವಾದಳ ಕಾರ್ಯಕ್ರಮದ ಪ್ರಮುಖ ಭಾಗವಾಗಿ ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ರಾಷ್ಟ್ರ ಲಾಂಛನಗಳ ಕುರಿತಂತೆ ಮಾಹಿತಿ ಶಿಬಿರಗಳನ್ನು ಸಾರ್ವಜನಿಕರಿಗೆ ಹೆಚ್ಚು ತಲುಪುವಂತೆ ಮಾಡಲಾಗುತ್ತಿದೆಯೆಂದರು.
ಭಾರತ ಸೇವಾದಳ ಜಿಲ್ಲಾ ಸಂಘಟಕ ದಾನೇಶ್, ರಾಷ್ಟ್ರಧ್ವಜ ಆರೋಹಣ, ಅವರೋಹಣ ಮತ್ತು ಸಂರಕ್ಷಣಾ ಪ್ರಾತ್ಯಕ್ಷಿಕೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ರಾಘವೇಂದ್ರ, ಶಿಕ್ಷಕ ವರ್ಗದವರು ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ರಾಷ್ಟ್ರಧ್ವಜ ಸಂಹಿತೆ ಮಾಹಿತಿ ಪಡೆದುಕೊಂಡರು.