ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ : ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂಬ ದೇಶದ ಅನ್ನದಾತರ ಹೋರಾಟಕ್ಕೆ ಮಣಿದಿರುವ ಕೇಂದ್ರ ಸರ್ಕಾರ ತಿದ್ದುಪಡಿ ಕಾಯ್ದೆ ವಾಪಸ್ ಪಡೆದಿದೆ . ಇದು ದೇಶದ ಅನ್ನದಾತರ ಹೋರಾಟಕ್ಕೆ ಸಿಕ್ಕ ಜಯ ಎಂದು ಜೆಡಿಎಸ್ ಎಂಎಲ್ಸಿ ಇಂಚರ ಗೋವಿಂದರಾಜು ಹೇಳಿದ್ದಾರೆ . ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು , ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ಮಾಡಿದ್ದ ರೈತರ ಮೇಲಿನ ಎಲ್ಲಾ ಕೇಸುಗಳನ್ನು ವಾಪಸ್ ಪಡೆಯಬೇಕು . ಈ ಹೋರಾಟದಲ್ಲಿ ಮೃತಪಟ್ಟ ರೈತರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಕೇಂದ್ರ ಸರ್ಕಾರ ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ . ಈ ಹಿನ್ನೆಲೆಯಲ್ಲಿ ದೇಶದ ಅನ್ನದಾತರು ಚಳಿ , ಮಳೆ , ಬಿಸಿಲೆನ್ನದೆ ಬೀದಿಗಿಳಿದು ಸುದೀರ್ಘ ಹೋರಾಟ ಮಾಡಿದ್ದರು . ಈ ಹೋರಾಟ ಹತ್ತಿಕ್ಕಲು ಸರ್ಕಾರ ಅಧಿಕಾರ , ಪೊಲೀಸ್ ಬಲ ಪ್ರಯೋಗಿಸಿತ್ತು . ಇದ್ಯಾವುದಕ್ಕೂ ಜಗ್ಗದ ರೈತರು ತಮ್ಮ ಭವಿಷ್ಯ ರಕ್ಷಣೆಗೆ ನಿಂತರು . ಈ ಹೋರಾಟದಲ್ಲಿ ೬೦೦ ಕ್ಕೂ ಹೆಚ್ಚು ರೈತರು ಪಾಣ ತ್ಯಾಗ ಮಾಡಿದ್ದು , ಕೇಂದ್ರ ಸರ್ಕಾರ ಇದೀಗ ಅನ್ನದಾತನ ಮುಂದೆ ಮಂಡಿಯೂರಿದೆ . ದೇಶದ ಅನ್ನದಾತನನ್ನು ಎದುರುಹಾಕಿಕೊಂಡು ಉಳಿದವರಿಲ್ಲ . ಹೋರಾಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ರೈತನೂ ದೇಶದ ರಕ್ಷಣೆಯಲ್ಲಿ ಯೋಧನಂತೆ ಕೆಲಸ ಮಾಡಿದ್ದಾರೆ . ಇದು ಸರ್ವಾಧಿಕಾರಿ ಧೋರಣೆ ವಿರುದ್ಧ ಪ್ರಜಾಪಭುತ್ವಕ್ಕೆ ಸಿಕ್ಕ ಗೆಲುವು .
ರೈತರ ಹಿತದೃಷ್ಟಿಯಿಂದ ಜೆಡಿಎಸ್ ಕೂಡ ರೈತರ ಈ ಹೋರಾಟಕ್ಕೆ ಬೆಂಬಲ ಸೂಚಿಸಿತ್ತು . ಕೇಂದ್ರ ಸರ್ಕಾರ ಇನ್ನು ಮುಂದಾದರು ತನ್ನ ಸರ್ವಾಧಿಕಾರಿ ಮನಃಸ್ಥಿತಿ ಯಿಂದ ಹೊರಬಂದು ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದನ್ನು ನಿಲ್ಲಿಸಬೇಕು . ದೇಶ ಹಾಗೂ ಅನ್ನದಾತನ ಹಿತದೃಷ್ಟಿಯಿಂದ ಎಲ್ಲರ ಜತೆ ಚರ್ಚೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ . ಜೆಡಿಎಸ್ ಪಕ್ಷ ಎಂದೆಂದಿಗೂ ರೈತರು ಸೇರಿದಂತೆ ಎಲ್ಲ ವರ್ಗವರ ಜತೆಗೆ ಇರಲಿದೆ . ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು , ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೂಡ ರೈತರ ಪರವಾಗಿ ಧ್ವನಿ ಎತ್ತಿದ್ದಾರೆ . ಇನ್ನುಂದೆ ರೈತರ ಹಿತಾಸಕ್ತಿಗೆ ಧಕ್ಕೆಯಾದರೆ ಜೆಡಿಎಸ್ ಪಕ್ಷ ಹೋರಾಟ ಮಾಡಲಿದೆ ಎಂದೂ ಜೆಡಿಎಸ್ ಎಂಎಲ್ಸಿ ಇಂಚರ ಗೋವಿಂದರಾಜು ಹೇಳಿದ್ದಾರೆ .