ನರೇಗಾ ಹಣ ದುರ್ಬಳಕೆ- ಕ್ರಮಕ್ಕೆ ಸದನದಲ್ಲಿ ಡಾ.ವೈ.ಎ.ಎನ್ ಆಗ್ರಹ:ಅಧಿಕಾರಿಗಳ ಅಮಾನತ್,ಗ್ರಾ.ಪಂಅಧ್ಯಕ್ಷರ ವಿರುದ್ದ ಕ್ರಮ-ಈಶ್ವರಪ್ಪ ಭರವಸೆ

ವರದಿ :ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ:- ನರೇಗಾ ಯೋಜನೆಯಡಿ ಜಿಲ್ಲೆಯ ವಿವಿಧೆಡೆ ಹಣ ದುರುಪಯೋಗ ಪಡಿಸಿಕೊಂಡಿರುವ ಅಧಿಕಾರಿಗಳನ್ನು ಅಮಾನತ್ ಮಾಡಿ, ಸಂಬಂಧಿಸಿದ ಜನಪ್ರತಿನಿಧಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ರಾಜ್ಯ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ವಿಧಾನಪರಿಷತ್‍ನಲ್ಲಿ ಡಾ.ವೈ.ಎ.ನಾರಾಯಣಸ್ವಾಮಿ ಅವರಿಗೆ ಆಶ್ವಾಸನೆ ನೀಡಿದರು.
ವಿಧಾನಪರಿಷತ್‍ನಲ್ಲಿ ಸದಸ್ಯ ಡಾ.ವೈ.ನಾರಾಯಣಸ್ವಾಮಿ ಅವರು ವಿವಿಧ ಯೋಜನೆಗಳಡಿ ಜಿಲ್ಲೆಯ ಗ್ರಾ.ಪಂಗಳಿಗೆ ಬಂದಿರುವ ಹಣ, ದುರುಪಯೋಗವಾದ ಅನುದಾನ ಎಷ್ಟು, ದುರುಪಯೋಗ ಪಡಿಸಿಕೊಂಡವರ ಮಾಹಿತಿ, ಕೈಗೊಂಡ ಕ್ರಮದ ಕುರಿತು ಸದನದಲ್ಲಿ ಕೇಳಿದ ಪ್ರಶ್ನೆಗೆ ಸಚಿವ ಕೆ.ಎಸ್.ಈಶ್ವರಪ್ಪ ಈ ಉತ್ತರ ನೀಡಿದರು.
ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮೀಪುರ ಮತ್ತು ನೆಲವಂಕಿ ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಆಗಿರುವ ಅವ್ಯವಹಾರಗಳ ಕುರಿತು ತನಿಖೆ ನಡೆಸಲು ತಂಡ ರಚಿಸಿದ್ದು, ಅದು ನೀಡುವ ವರದಿ ಆಧಾರದ ಮೇಲೆ ಸಂಬಂಧಿಸಿದ ಅಧಿಕಾರಿಗಳ ಅಮಾನತ್ ಹಾಗೂ ಗ್ರಾ.ಪಂ ಅಧ್ಯಕ್ಷರಾಗಿದ್ದವರ ಮೇಲೆಯೂ ಕಾನೂನು ಕ್ರಮ ಜರುಗಿಸುವುದಾಗಿ ಸಚಿವ ಈಶ್ವರಪ್ಪ ಆಶ್ವಾಸನೆ ನೀಡಿದರು.
ಡಾ.ವೈ.ಎ.ಎನ್ ಪ್ರಶ್ನೆಗೆ ಉತ್ತರಿಸಿ ಮಾಹಿತಿ ನೀಡಿದ ಸಚಿವ ಈಶ್ವರಪ್ಪ ನರೇಗಾ ಯೋಜನೆಯ ಹಣ ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿ,ಸಿಬ್ಬಂದಿ,ಗ್ರಾ.ಪಂ ಅಧ್ಯಕ್ಷರ ಮಾಹಿತಿಯನ್ನು ಸದನಕ್ಕೆ ಒದಗಿಸಿದರು.
ನೆಲವಂಕಿ ಮತ್ತು ಲಕ್ಷ್ಮೀಪುರ ಗ್ರಾ.ಪಂಗಳ ಹಿಂದಿನ ಪಿಡಿಒ ಪಿ.ವಿ.ವಿಶ್ವನಾಥರೆಡ್ಡಿ, ಈಗ ಅವರು ಗೌನಿಪಲ್ಲಿ ಗ್ರಾ.ಪಂನಲ್ಲಿ ಗ್ರೇಡ್-2 ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೋಲಾರದ ಲೋಕೋಪಯೋಗಿ ಎಇ ಚಂದ್ರಶೇಖರ್, ಶ್ರೀನಿವಾಸಪುರ ಪಂಚಾಯತ್‍ರಾಜ್ ಇಂಜಿನಿಯರಿಂಗ್ ವಿಭಾಗದ ಕಿರಿಯ ಅಭಿಯಂತರ ಕೃಷ್ಣಪ್ಪ, ಶ್ರೀನಿವಾಸಪುರ ತಾಪಂ ಪ್ರಭಾರ ಇಒ ಆಗಿ ನಿವೃತ್ತಿ ಹೊಂದಿರುವ ಶಿವಶಂಕರಯ್ಯ, ಶ್ರೀನಿವಾಸಪುರ ರೇಷ್ಮೆ ವಲಯ ಅಧಿಕಾರಿ ಶ್ರೀನಿವಾಸಯ್ಯ ಸೇರಿದ್ದಾರೆ.
ಶ್ರೀನಿವಾಸಪುರ ರೇಷ್ಮೆ ವಿಸ್ತರಣಾಧಿಕಾರಿ ರಘುನಾಥಗೌಡ, ಶ್ರೀನಿವಾಸಪುರ ಹಿಂದಿನ ತಾಪಂ ಇಒ ಲಕ್ಷ್ಮೀಮೋಹನ್, ಲಕ್ಷ್ಮೀಪುರ ಗ್ರಾ.ಪಂನ ಕಂಪ್ಯೂಟರ್ ಆಪರೇಟರ್ ಆಗಿದ್ದು ಸೇವೆಯಿಂದ ವಜಾಗೊಂಡಿರುವ ರವಿ, ಶ್ರೀನಿವಾಸಪುರ ತಾಪಂ ಎಂ.ಐಎಸ್ ಸಂಯೋಜಕರಾಗಿದ್ದು ಸೇವೆಯಿಂದ ವಜಾಗೊಂಡಿರುವ ಮುನಿವೀರೇಗೌಡ, ತಾಪಂ ಟಿಎಇಗಳಾಗಿದ್ದು, ಇದೀಗ ಸೇವೆಯಿಂದ ವಜಾಗೊಂಡಿರುವ ನಾಗರಾಜ್, ಕೃಷ್ಣಮೂರ್ತಿ, ಶಿವರಾಜ್ ನರೇಗಾದಡಿ ಅನುದಾನ ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ಸದನದಲ್ಲಿ ಉತ್ತರಿಸಿದರು.
ಇವರಲ್ಲದೇ ಜನಪ್ರತಿನಿಧಿಗಳಾಗಿದ್ದ ನೆಲವಂಕಿ ಗ್ರಾಮ ಪಂಚಾಯಿತಿ ಹಿಂದಿನ ಅಧ್ಯಕ್ಷೆ ಬಿ.ಎನ್.ಪ್ರಮೀಳಾ, ಲಕ್ಷ್ಮೀಪುರ ಗ್ರಾ.ಪಂ ಹಿಂದಿನ ಅಧ್ಯಕ್ಷೆ ಆದಿಲಕ್ಷ್ಮಮ್ಮ ಸಹಾ ಹಣ ದುರುಪಯೋಗದ ಆರೋಪ ಎದುರಿಸುತ್ತಿದ್ದು, ಇವರೆಲ್ಲರ ವಿರುದ್ದ ವರದಿ ನಂತರ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಡಾ.ವೈ.ಎ.ನಾರಾಯಣಸ್ವಾಮಿ ಅವರಿಗೆ ಆಶ್ವಾಸನೆ ನೀಡಿದರು
.