

ಕೋಲಾರ ತಾಲ್ಲೂಕು ಅಬ್ಬಣಿ ಗ್ರಾಮದ ಸರ್ವೇ ನಂಬರ್ 79ರಲ್ಲಿ 91 ಎಕರೆ 06 ಗುಂಟೆ ವ್ಯಾಪ್ತಿಯ ದೊಡ್ಡಕೆರೆ ಜಮೀನಿದ್ದು,ಬಹುತೇಖ ಒತ್ತುವರಿಯಾಗಿರುತ್ತದೆ ಹಾಗೂ ಅದರಲ್ಲಿ ನಾರಾಯಣಪ್ಪ ಎಂಬುವವರ ಹೆಸರಿಗೆ ಪಹಣಿ ಸಹ ನಮೂದಾಗಿರುತ್ತದೆ. ಅದನ್ನು ವಜಾಗೊಳಿಸಿ ಒತ್ತುವರಿ ತೆರವುಗೊಳಿಸುವಂತೆ ತಹಶಿಲ್ದಾರ್, ಸಹಾಯಕ ಆಯುಕ್ತರು,ಕೋಲಾರ ಉಪವಿಭಾಗರವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮಹಿಳಾ ಜಿಲ್ಲಾಧ್ಯಕ್ಷೆ ನಳಿನಿಗೌಡರವರಿಂದ ಮನವಿಯನ್ನು ಸಲ್ಲಿಸಲಾಗಿತ್ತು.
ಮನವಿದಾರರ ಅರ್ಜಿ ಆಧರಿಸಿ ತಹಶಿಲ್ದಾರ್ ರವರ ವರದಿಯನ್ವಯ ಮಾನ್ಯ ಸಹಾಯಕ ಆಯುಕ್ತರಾದ ಡಾ.ಮೈತ್ರಿರವರು ತಮ್ಮ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿ ಕೆರೆ ಜಮೀನಿನಲ್ಲಿ ಯಾರಿಗೂ ಹಕ್ಕುದಾರಿಕೆ ಮಂಜೂರು ಮಾಡಲು ಭೂ ಕಂದಾಯ ಕಾಯ್ದೆ ಅಥವಾ ನಿಯಮಗಳಲ್ಲಿ ಅವಕಾಶ ಇರುವುದಿಲ್ಲವೆಂದು ಅನಧಿಕೃತವಾಗಿ ದಾಖಲಾಗಿದ್ದ ಪಹಣಿಯನ್ನು ರದ್ದುಪಡಿಸಿ ಸಾರ್ವಜನಿಕ ಉಪಯೋಗಕ್ಕಾಗಿ ಕಾಯ್ದಿರಿಸಲಾದ ಜಮೀನನ್ನು ಉಳಿಸಲು ಆದೇಶ ಮಾಡಿದ್ದರು. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಪಹಣಿ ರದ್ದುಪಡಿಸಿ ಆದೇಶ ಮಾಡಿದ್ದರೂ ಕೆರೆ ಒತ್ತುವರಿ ತೆರವುಗೊಳಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ.
ಅರ್ಜಿದಾರರಾದ ನಳಿನಿಗೌಡರವರು ಹಲವು ಬಾರಿ ತಹಶಿಲ್ದಾರ್ ಕಚೇರಿಗೆ ತೆರಳಿ ಒತ್ತುವರಿ ತೆರವು ಮಾಡುವಂತೆ ಮನವಿ ಮಾಡಲಾಗಿದ್ದು,ಸರ್ವೇಯರ್ಗಳ ಕೊರತೆಯಿದೆ ಎಂದು ಸಬೂಬು ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ.ಅರ್ಜಿದಾರರೇ ಖುದ್ದು ಸಹಾಯಕ ನಿರ್ದೇಶಕರು ಭೂ ದಾಖಲೆಗಳ ಇಲಾಖೆರವರಿಗೆ ತಾಲ್ಲೂಕು ಸರ್ವೆಯರ್ ಕೈಗೆ ಸಿಗುತ್ತಿಲ್ಲವಾದ್ದರಿಂದ ತಮ್ಮ ವ್ಯಾಪ್ತಿಯ ಸರ್ಕಾರಿ ಸರ್ವೇಯರ್ ಒಬ್ಬರನ್ನು ನೇಮಕಗೊಳಿಸಿ ಕೆರೆ ಉಳಿಸುವಂತೆ ಮನವಿ ಮಾಡಲಾಗಿದ್ದು ಅದರಂತೆ ಸರ್ವೇ ಕಾರ್ಯ ಮುಗಿಸಿ ಸಂಪೂರ್ಣ ಕೆರೆ ಒತ್ತುವರಿಯಾಗಿದೆ ಎಂದು ವರದಿಯನ್ನೂ ನೀಡಿರುತ್ತಾರೆ. ಆದರೆ ಕೆರೆ ಒತ್ತುವರಿ ತೆರವುಗೊಳಿಸಬೇಕಾದ ಅಧಿಕಾರಿಗಳು ಮಾತ್ರ ನಿದ್ದೆಗೆ ಜನರಿದ್ದಾರೆ
ಅಬ್ಬಣಿ ಗ್ರಾಮದ ಸರ್ಕಾರಿ ಕೆರೆ 91 ಎಕರೆ ಸಂಪೂರ್ಣ ಒತ್ತುವರಿ ಆಗಿದೆ ಎಂದು ವರದಿ ಕೊಟ್ಟಿರುತ್ತಾರೆ ಸರಕಾರಿ ಕೆರೆಯನ್ನು ಉಳಿಸುವ ನಿಟ್ಟಿನಲ್ಲಿ ಕೂಡಲೇ ತಾಲ್ಲೂಕಾಡಳಿತ ಮತ್ತು ಜಿಲ್ಲಾಡಳಿತ ಮುಂದಾಗಿ ಒತ್ತುವರಿ ತೆರವುಗೊಳಿಸಿ ಕೆರೆಯನ್ನು ಸಂರಕ್ಷಿಸುವ ಕೆಲಸವನ್ನು ಮಾಡಬೇಕಿದೆ. – ನಳಿನಿಗೌಡ, ರೈತ ಸಂಘ


