ರಾಹುಲ್ ಗಾಂಧಿ ವಿರುದ್ಧ ನಳಿನ್ ಕುಮಾರ್ ಹೇಳಿಕೆ: ವಿನೋದ್ ಕ್ರಾಸ್ಟೊ ಖಂಡನೆ

JANANUDI.COM NETWORK

ಕುಂದಾಪುರ: ದೇಶದಲ್ಲಿ ಪ್ರಸ್ತುತ ಅತ್ಯಂತ ಜನಪರವಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿರುವ, ದೇಶದ ರಾಜಕೀಯದ ಭವಿಷ್ಯದ ಆಶಾಕಿರಣ ಎಂದೇ ಬಿಂಬಿತವಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕುರಿತು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಇತ್ತೀಚೆಗೆ ಮಾಡಿರುವ ಟೀಕೆಗಳು ಅತ್ಯಂತ ಕೀಳುಮಟ್ಟದ್ದಾಗಿವೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಪತ್ರಿಕಾ ಹೇಳಿಕೆಯ ಮೂಲಕ ಖಂಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಾಹುಲ್ ಗಾಂಧಿ ಕುರಿತು ಆಧಾರರಹಿತವಾಗಿ ಅವಾಚ್ಯ ಶಬ್ದ ಬಳಸಿ ನಾಲಿಗೆ ಹರಿಯ ಬಿಟ್ಟಿರುವ ನಳಿನ್ ಕಟೀಲ್ ವಿವಾದಾತ್ಮಕ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ವಿನೋದ್ ಕ್ರಾಸ್ಟೊ ಪತ್ರಿಕಾ ಹೇಳಿಕೆ ನೀಡಿದ್ದಾರೆ .

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದ ಜನವಿರೋಧಿ, ರೈತವಿರೋಧಿ, ಸ್ತ್ರೀ ವಿರೋಧಿ ಧೋರಣೆಗಳನ್ನು ರಾಹುಲ್ ಗಾಂಧಿ ಸತತವಾಗಿ ಟೀಕಿಸುತ್ತಲೇ ಬಂದಿದ್ದಾರೆ. ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಸ್ತ್ರೀಯರ ವಿರುದ್ಧ ದೌರ್ಜನ್ಯ, ರೈತರ ಕಗ್ಗೊಲೆಗಳ ಸಂದರ್ಭದಲ್ಲಿ ಸಂತ್ರಸ್ತರ ಪರವಾಗಿ ನಿಂತು ಹೋರಾಟ ನಡೆಸುತ್ತಿದ್ದಾರೆ. ದೇಶದ ಇಂದಿನ ಜ್ವಲಂತ ಸಮಸ್ಯೆಗಳ ಕುರಿತು ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣ ಸಂವೇದನಾಶೂನ್ಯವಾಗಿರುವ ಸಂದರ್ಭದಲ್ಲಿ ಜನರ ನೋವುಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ಸಂವೇದನಾಶೀಲ ನಾಯಕ ರಾಹುಲ್ ಗಾಂಧಿಯ ಕುರಿತು ಬಿಜೆಪಿ ನಾಯಕರಿಗೆ ಅಸಹನೆ ಹೆಚ್ಚಾಗುತ್ತಿದೆ. ಈ ಅಸಹನೆಯನ್ನು ಇಂತಹ ಅವಹೇಳನದ ಮೂಲಕ ಬಿಜೆಪಿ ನಾಯಕರು ಹೊರಹಾಕುತ್ತಿದ್ದಾರೆ. ದೇಶದ ಸರ್ವತೋಮುಖ ಬೆಳವಣಿಗೆಗೆ ಸದಾ ಶ್ರಮಿಸಿದ, ಬಲಿದಾನಗಳನ್ನೂ ಕೊಟ್ಟ ಗಾಂಧಿ ಕುಟುಂಬದ ಇಂದಿನ ಜನನಾಯಕ ರಾಹುಲ್ ಗಾಂಧಿ ಕುರಿತ ಟೀಕೆ ಮಾಡುವ ಸಣ್ಣ ನೈತಿಕತೆ ಕೂಡ ನಳಿನ್ ಕುಮಾರ್‌ಗೆ ಇಲ್ಲ’ ಎಂದು ವಿನೋದ್ ಕ್ರಾಸ್ಟೊ ಹೇಳಿದ್ದು. ಈ ವಿವಾದಾತ್ಮಕ ಹೇಳಿಕೆಗಾಗಿ ನಳಿನ್ ಕುಮಾರ್ ಕ್ಷಮೆ ಯಾಚಿಸಬೇಕು ಎಂಬ ಪಕ್ಷದ ಆಗ್ರಹಕ್ಕೆ ವಿನೋದ್ ಕ್ರಾಸ್ಟೊ ದನಿಗೂಡಿಸಿದ್ದಾರೆ.