ಕೋಲಾರ:- ಜಿಲ್ಲೆಯಲ್ಲಿ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪುತ್ಥಳಿ ರಥಯಾತ್ರೆ ಅ.27 ರಿಂದ ನ.7 ರವರೆಗೂ 12 ದಿನಗಳ ಕಾಲ ಸಾಗಿ ಬರುವ ಹಿನ್ನಲೆಯಲ್ಲಿ ಸಚಿವ ಮುನಿರತ್ನ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಸಚಿವರ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕೋಲಾರ ತಾಲ್ಲೂಕಿನಲ್ಲಿ ರಥಯಾತ್ರೆಯ ಉಸ್ತುವಾರಿಯನ್ನು ಮಾಜಿ ಸಚಿವ ವರ್ತೂರು ಪ್ರಕಾಶ್ ಅವರಿಗೆ ವಹಿಸಿಕೊಳ್ಳುವಂತೆ ಸಚಿವ ಮುನಿರತ್ನ ಸೂಚಿಸಿದರು.
ಬೆಂಗಳೂರಿನ ಸಚಿವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ 12 ದಿನಗಳ ಕಾಲ ಸಂಚರಿಸುವ ರಥಯಾತ್ರೆ ದಿನಕ್ಕೆ 15 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಲಿದ್ದು, ಆ ವ್ಯಾಪ್ತಿಯ ಪ್ರಸಿದ್ದ ಕ್ಷೇತ್ರಗಳ ಮೃತ್ತಿಗೆ ಹಿಡಿಮಣ್ಣನ್ನು ಸಂಗ್ರಹಿಸಿ ರಥದಲ್ಲಿ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು.
ಅ.27 ಕೋಲಾರದಲ್ಲಿ ರಥಯಾತ್ರೆ ಸಂಚಾರ
ಕೋಲಾರ ತಾಲ್ಲೂಕಿನಲ್ಲಿ ಅ.27 ರಂದು ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪುತ್ಥಳಿಯ ರಥಯಾತ್ರೆ ಸರ್ಕಾರಿ ರಥವಾಗಿ ಆಗಮಿಸಿದ್ದು, ಸಚಿವ ಮುನಿರತ್ನ, ಸಂಸದ ಎಸ್.ಮುನಿಸ್ವಾಮಿ, ಸರ್ಕಾರದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಮಾಜಿ ಅಧ್ಯಕ್ಷರಾದ ಎಸ್.ಕೃಷ್ಣಾರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ.ಕೃಷ್ಣಮೂರ್ತಿ ಯಾತ್ರೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಕೋಲಾರದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ನೇತೃತ್ವ ವಹಿಸಲಿದ್ದು, ತಾಲ್ಲೂಕಿನ 15 ಗ್ರಾಮ ಪಂಚಾಯತಿಗಳಲ್ಲಿ ರಥ ಸಂಚರಿಸಲಿದ್ದು, ಅ.27 ಮತ್ತು 28 ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ನಡೆಯಲಿದೆ. ಈ ಸಂದರ್ಭದಲ್ಲಿ ತಾಲ್ಲೂಕಿನ ಪ್ರಸಿದ್ದ ಪುಣ್ಯಕ್ಷೇತ್ರಗಳ ಮೃತ್ತಿಕೆ ಸಂಗ್ರಹಕ್ಕೆ ಕ್ರಮ ವಹಿಸಲಾಗಿದೆ ಎಂದು ವರ್ತೂರು ಪ್ರಕಾಶ್ ತಿಳಿಸಿದ್ದಾರೆ.
ರಥಯಾತ್ರೆ ಸಾಗಿ ಬಂದಾಗ ತಾಲ್ಲೂಕಿನ ಸಾವಿರಾರು ಕಾರ್ಯಕರ್ತರು,ಸಾರ್ವಜನಿಕರು ಜತೆಗಿದ್ದು, ಅದ್ದೂರಿಯಾಗಿ ಸ್ವಾಗತಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವುದಾಗಿ ವರ್ತೂರು ಪ್ರಕಾಶ್ ತಿಳಿಸಿ, ಹೆಚ್ಚಿನ ಜನ ಭಾಗವಹಿಸಲಿದ್ದು, ಅಗತ್ಯವಾಗಿ ಊಟ,ತಿಂಡಿ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ತಿಳಿಸಿದರು.
ಅ,29,30 ರಂದು ಶ್ರೀನಿವಾಸಪುರದಲ್ಲಿ
ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪುತ್ಥಳಿಯ ರಥಯಾತ್ರೆ ಅ.29 ಹಾಗೂ 30 ರಂದು ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಸಂಚರಿಸಲಿದ್ದು, ಸರ್ಕಾರದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ನೇತೃತ್ವ ವಹಿಸುವರು. ಅಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಉಪಸ್ಥಿತರಿದ್ದು, ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸುವಾಗ ಸಾವಿರಾರು ಜನ ಭಾಗವಹಿಸಲು ವ್ಯವಸ್ಥೆ ಮಾಡಲಿದ್ದಾರೆ.
ಮುಳಬಾಗಿಲಿಗೆ ಅ.31, ನ.1 ರಂದು
ಮುಳಬಾಗಿಲು ತಾಲ್ಲೂಕಿಗೆ ರಥಯಾತ್ರೆ ಅ.31 ಮತ್ತು ನ.1 ರಂದು ಆಗಮಿಸಿ ಇಡೀ ತಾಲ್ಲೂಕಿನಲ್ಲಿ ಸಂಚಾರ ನಡೆಸಲಿದ್ದು, ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷ ಹೆಚ್.ನಾಗೇಶ್ ನೇತೃತ್ವ ವಹಿಸುವರು.
ಹಾಗೆಯೇ ಕೆಜಿಎಫ್ ತಾಲ್ಲೂಕಿನಲ್ಲಿ ನ.2 ಮತ್ತು 3 ರಂದು ಯಾತ್ರೆ ಸಾಗಿ ಬರಲಿದ್ದು, ಮಾಜಿ ಶಾಸಕ ವೈ.ಸಂಪಂಗಿ ನೇತೃತ್ವ ವಹಿಸಲಿದ್ದಾರೆ. ಯಾತ್ರೆ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಸಂಚರಿಸಲಿದೆ.
ಬಂಗಾರಪೇಟೆ ತಾಲ್ಲೂಕಿನಲ್ಲಿ ಯಾತ್ರೆ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ನೇತೃತ್ವದಲ್ಲಿ ಸಾಗಿ ಬರಲಿದ್ದು, ನ.4 ಮತ್ತು 5 ರಂದು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಲಿದೆ.
ಮಾಲೂರು ತಾಲ್ಲೂಕಿನಲ್ಲಿ ನ.6 ಮತ್ತು 7 ರಂದು ನಾಡಪ್ರಭುವಿನ ರಥ ಯಾತ್ರೆ ಸಂಚರಿಸಲಿದ್ದು, ಮಾಜಿ ಶಾಸಕ ಮಂಜುನಾಥಗೌಡ, ಮುಖಂಡ ಹೂಡಿ ವಿಜಯಕುಮಾರ್ ನೇತೃತ್ವ ವಹಿಸುವರು.
ಕಲಾ ತಂಡಗಳ ಭವ್ಯ ಮೆರವಣಿಗೆ
ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪುತ್ಥಳಿಯ ರಥಯಾತ್ರೆಯಲ್ಲಿ ನಾಡಪ್ರಭುವಿನ ಪುತ್ಥಳಿ ಹೊತ್ತ ರಥ, ಡಿಜಿ ಸೆಟ್, ಬ್ಯಾಂಡ್ ಸೆಟ್, ಕಲಾ ತಂಡಗಳು, ಡೊಳ್ಳುಕುಣಿತ, ಮೊಬೈಲ್ ಆರ್ಕೆಸ್ಟ್ರಾ, ತಮಟೆಗಳ ನಾದ ಜತೆ ಸಾಗಿ ಬರಲಿದೆ.
ರಥವನ್ನು ಸುರಕ್ಷಿತ ಸ್ಥಳದಲ್ಲಿ ಗೌರವಯುತವಾದ ರೀತಿಯಲ್ಲಿ ಸೂಕ್ತ ರಕ್ಷಣೆಯೊಂದಿಗೆ ನಿಲುಗಡೆ ಮಾಡಲು ಕ್ರಮವಹಿಸಬೇಕು ಎಂದು ಸಚಿವರು ಸಭೆಯಲ್ಲಿ ಸೂಚಿಸಿದರು.
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಮೆರವಣಿಗೆಯಲ್ಲಿ ರಥಯಾತ್ರೆಯೊಂದಿಗೆ ಸಾವಿರದಿಂದ 5 ಸಾವಿರ ಮಂದಿ ಪಾಲ್ಗೊಳ್ಳಬೇಕು. ಪ್ರತಿ ದಿನ ಸಾವಿರ ಮಂದಿಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ವ್ಯವಸ್ಥೆ ಮಾಡಿದ್ದು, ಇದು ಸರ್ಕಾರಿ ಪ್ರಯೋಜಿತ ರಥಯಾತ್ರೆಯಾಗಿರುವುದರಿಂದ ಇದರಲ್ಲಿ ಸರ್ಕಾರದ ಆಡಳಿತ ಯಂತ್ರ ಬಳಸಿಕೊಳ್ಳಬಹುದು ಎಂದು ತಿಳಿಸಿದರು.
ಸಚಿವ ಮುನಿರತ್ನ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಸದ ಎಸ್.ಮುನಿಸ್ವಾಮಿ, ಸರ್ಕಾರದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕರಾದ ವೈ.ಸಂಪಂಗಿ, ಬಿ.ಪಿ.ವೆಂಕಟಮುನಿಯಪ್ಪ, ಮಂಜುನಾಥಗೌಡ, ಹೂಡಿ ವಿಜಯಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್,ಬಿಜೆಪಿ ಮುಖಂಡರಾದ ಮಾಗೇರಿ ನಾರಾಯಣಸ್ವಾಮಿ, ಎಸ್.ಕೃಷ್ಣಾರೆಡ್ಡಿ ಮತ್ತಿತರರಿದ್ದರು.