

“ನಾವೆಲ್ಲರೂ ಕಾನಾಟಿ ( ದಪ್ಪ ಕನ್ನಡಕ ಧರಿಸುವ) ಅರ್ಥಾತ್ ಅಜ್ಜ ಎಂದೇ ಕರೆಯುತಿದ್ದ ನಮ್ಮಜ್ಜ ಲೂವಿಸ್ ಕಣ್ಣಪ್ಪನವರಿಂದಲೇ ನನ್ನ ಬರವಣಿಗೆಗೆ ಮೊದಲ ಪ್ರೇರಣೆ ದೊರೆಯಿತು. ಸ್ವಾತಂತ್ಯ ಪರ್ವದಲ್ಲಿ ಮದ್ರಾಸ್ವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಮ್.ಎ. ಮತ್ತು ಎಲ್. ಟಿ. ಪದವಿ ಪಡೆದಿದ್ದ ಲೂವಿಸ್ ಕಣ್ಣಪ್ಪನವರು ಮಂಗಳೂರು ಹಂಪನಕಟ್ಟೆಯ ಸರಕಾರಿ ಕಾಲೇಜಿನಲ್ಲಿ (ಇಂದಿನ ವಿಶ್ವವಿದ್ಯಾನಿಲಯ ಕಾಲೇಜು) ಪ್ರಾಂಶುಪಾಲರಾಗಿ, ನಂತರ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಗಣಿತ ಹಾಗೂ ಲ್ಯಾಟಿನ್ ಭಾಷೆಯಲ್ಲಿ ಸಂತ ಅಲೋಶಿಯಸ್ ಕಾಲೇಜಿಗೆ ಪ್ರಪ್ರಥಮ ಬಾರಿ ರ್ಯಾಂಕ್ ತಂದುಕೊಟ್ಟ ಲೂವಿಸ್ ಕಣ್ಣಪ್ಪನವರು – ನನ್ನಣ್ಣನಿಗೆ ಗಣಿತ ಮತ್ತು ನನಗೆ ಇಂಗ್ಲಿಶ್ ಸಾಹಿತ್ಯ ಕಲಿಸಿದ್ದರು. ಇಂಗ್ಲಿಷ್ ಸಾಹಿತ್ಯದಲ್ಲಿ ಅವರಿಲ್ಲಿ ಅಪಾರ ಪಾಂಡಿತ್ಯವಿತ್ತು.” ಎಂದು ಮುಂಬಯಿಯ ಖ್ಯಾತ ಕನ್ನಡ ಲೇಖಕಿ ಶ್ರೀಮತಿ ಶ್ಯಾಮಲಾ ಮಾಧವ ಅಭಿಪ್ರಾಯಪಟ್ಟರು.
ಶ್ರೀಮತಿ ಶ್ಯಾಮಲಾ ಮಾಧವ – ಸಾಹಿತ್ಯ ಅಕಾಡೆಮಿ, ನವದೆಹಲಿ ಇವರು ಕೊಂಕಣಿ ಸಾಹಿತಿಗಳು ಮತ್ತು ಕಲಾವಿದರ ಸಂಘಟನೆಯ ಆಶ್ರಯದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಶನಿವಾರ, ಸಪ್ಟೆಂಬರ್ 2 ರಂದು ಹಮ್ಮಿಕೊಂಡ ‘ಥ್ರೂ ಮೈ ವಿಂಡೋ’ ಕರ್ಯಕ್ರಮ ಸರಣಿಯಲ್ಲಿ ಕೊಂಕಣಿಯ ಪ್ರಪ್ರಥಮ ಪತ್ರಿಕೆ ದರ್ವೆಂ ಸ್ಥಾಪಕ – ವ್ಯವಸ್ಥಾಪಕ ಸರದಾರ ಲೂವಿಸ್ ಕಣ್ಣಪ್ಪ ಅವರ ಬದುಕು – ಬರೆಹದ ಕುರಿತು ವಿಶೇಷ ಉಪನ್ಯಾಸ ಕರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.



