ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ಪರಸ್ಪರ ಹೊಗಳಿಕೆ, ಮಾರ್ಗದರ್ಶನದ ಮಾತುಗಳು ಶಾಸಕದ್ವಯರಾದ ರಮೇಶ್ಕುಮಾರ್ ಮತ್ತು ಕೆ.ಶ್ರೀನಿವಾಸಗೌಡರ ಮೂಲಕ ಮುಂದಿನ ದಿನಗಳಲ್ಲಿ ರಾಜಕೀಯ ಧ್ರುವೀಕರಣಕ್ಕೆ ಮುನ್ನುಡಿಯಾಗುವ ಲಕ್ಷಣಗಳು ಗೋಚರಿಸಿದವು.
ತಾಲ್ಲೂಕಿನ ಅಣ್ಣಿಹಳ್ಳಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕಿನಿಂದ ನಡೆದ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಕೆ.ಶ್ರೀನಿವಾಸಗೌಡರು, ರಮೇಶ್ಕುಮಾರ್ ಅವರ ಕುರಿತು ಮಾತನಾಡಿ, ಯಾವುದೇ ಕೆಲಸ ಆಗಬೇಕಾದರೆ ಪಟ್ಟು ಬಿಡದೇ ಹಿಂದೆ ಬೀಳುವ ಜಾಯಮಾನ ಅವರದ್ದು, ಅವರ ಜತೆ ಸದಾ ನಾನಿರುವೆ ಎಂದು ತಿಳಿಸಿದರು.
ಜತೆಗೆ ಶ್ರೀನಿವಾಸಗೌಡರ ಕುಡುವನಹಳ್ಳಿ ಮನೆಯಲ್ಲೇ ರಮೇಶ್ಕುಮಾರ್ ಅವರಿಗೆ ಊಟದ ವ್ಯವಸ್ಥೆ ಮಾಡಿ, ಇಬ್ಬರೂ ಒಟ್ಟಾಗಿ ಕುಳಿತು ಊಟ ಸವಿದರು.
ಈ ನಡುವೆ ರಮೇಶ್ಕುಮಾರ್ ಮಾತನಾಡಿ, ಶ್ರೀನಿವಾಸಗೌಡರು ನನಗಿಂತ ಹಿರಿಯರು, ನನ್ನ ಕೆಲಸಗಳಿಗೆ ಸ್ಪೂರ್ತಿಯಾಗಿದ್ದಾರೆ, ಅವರಂತಹ ಹಿರಿಯರು ನನ್ನೊಂದಿಗೆ ಇದ್ದರೆ ಏನು ಬೇಕಾದರೂ ಅಭಿವೃದ್ದಿ ಸಾಧಿಸಲು ಸಾಧ್ಯ,ನನ್ನೆಲ್ಲಾ ಜನಪರ ಕೆಲಸಗಳಿಗೆ ಅವರೇ ಮಾರ್ಗದರ್ಶನ ಎಂದು ಹೇಳಿದರು.
ರಮೇಶ್ಕುಮಾರ್ ಹಾಗೂ ಶ್ರೀನಿವಾಸಗೌಡ ಇಬ್ಬರಿಗೂ ಪರಮಾಪ್ತರಾಗಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಅಣ್ಣಿಹಳ್ಳಿ ದಿವಂಗತ ಕೃಷ್ಣಪ್ಪ ಅವರ ಸ್ಮರಣಾರ್ಥ ಯಾವುದಾದರೂ ನೆನಪಿನಲ್ಲಿ ಉಳಿಯುವ ಕೆಲಸ ಮಾಡಲು ಸೂಚಿಸಿ ಎಂದು ಶಾಸಕದ್ವಯರಿಗೆ ಮನವಿ ಮಾಡಿದರಲ್ಲದೇ, ಇಬ್ಬರೂ ಒಂದಾಗಿ ಸಾಗುವಂತೆ ಮನವಿ ಮಾಡಿದರು.
ಈ ನಡುವೆ ಕೋಚಿಮುಲ್ ಮಾಜಿ ಅಧ್ಯಕ್ಷ ಹಾಗೂ ರಮೇಶ್ಕುಮಾರ್ ಆಪ್ತ ಬ್ಯಾಟಪ್ಪ, ಶ್ರೀನಿವಾಸಗೌಡರು ಕೋಲಾರ ಕ್ಷೇತ್ರ ವಿಭಜನೆಯಿಂದ ಎರಡು ಬಾರಿ ಸೋಲಬೇಕಾಯಿತು, ಈ ಬಾರಿ ಅವರ ಗೆಲುವಿಗೆ ನಾವೆಲ್ಲರೂ ಕೆಲಸ ಮಾಡಿದೆವು, ಅವರ ಗ್ರಾಮಗಳು ಶ್ರೀನಿವಾಸಪುರ ಕ್ಷೇತ್ರಕ್ಕೆ ಸೇರಿವೆ, ಮುಂದೆಯೂ ಅವರ ಮಾರ್ಗದರ್ಶನ ಈ ಕ್ಷೇತ್ರಕ್ಕೆ ಅಗತ್ಯವಿದೆ ಎಂದು ಹೇಳಿದ್ದು ವಿಶೇಷವಾಗಿತ್ತು.
ಒಟ್ಟಾರೆ ಒಂದೇ ವೇದಿಕೆಯಲ್ಲಿ ಶಾಸಕದ್ವಯರ ನಡೆ, ಅವರ ಆಪ್ತರ ಹೇಳಿಕೆಗಳು ಮುಂದಿನ ದಿನಗಳಲ್ಲಿ ರಾಜಕೀಯ ಧ್ರುವೀಕರಣದ ಸುಳಿವನ್ನು ನೀಡುವಂತಿತ್ತು.