ಶ್ರೀನಿವಾಸಪುರ: ಈಚೆಗೆ ಕೊಲೆಯಾದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸನ್ ಅವರ ಕೊಲೆ ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ವೆಂಕಟಸ್ವಾಮಿ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎಂ.ಶ್ರೀನಿವಾಸನ್ ಕೊಲೆ ಹೋರಾಟ ಸಮಿತಿಯಿಂದ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆ ಆರೋಪಿಗಳು ಜೈಲಿನಲ್ಲಿದ್ದಾರೆ. ಆದರೆ ಕೊಲೆಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳಿಗೆ ಗಿಳಿಪಾಠ ಒಪ್ಪಿಸುತ್ತಿದ್ದಾರೆ. ಆದ್ದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಎಂ.ಶ್ರೀನಿವಾಸನ್ ಕೊಲೆ ಹಿಂದೆ ಕಾಣದ ಕೈಗಳ ಕೈವಾಡವಿದೆ. ಪ್ರಭಾವಿ ವ್ಯಕ್ತಿಗಳು ಸಂಚುಮಾಡಿ ಕೊಲೆ ಮಾಡಿಸಿರುವ ಶಂಕೆ ಇದೆ. ಆದ್ದರಿಂದಲೇ ಕೊಲೆ ಆರೋಪಿಗಳು ಸಂಚುಕೋರರು ಹೇಳಿಕೊಟ್ಟಿರುವುದನ್ನೇ ಹೇಳುತ್ತಿದ್ದಾರೆ. ಆರೋಪಿಗಳಿಗೆ ಸ್ವಂತ ಶಕ್ತಿಯಿಂದ ಕೊಲೆ ಮಾಡುವ ಧೈರ್ಯವಿಲ್ಲ. ಅವರು ವೃತ್ತಿಪರ ಕೊಲೆಗಡುಕರಲ್ಲ. ಯಾರೋ ಅವರಿಗೆ ಬೆಂಬಲ ನೀಡಿ ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಎಂ.ಶ್ರೀನಿವಾಸನ್ ಕೊಲೆ ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ವಿಶೇಷ ತನಿಖೆ ನಡೆಸುವಂತೆ ಹಾಗೂ ನಿಜವಾದ ಕೊಲೆ ಹಿಂದಿನ ರಹಸ್ಯ ಬಯಲು ಮಾಡಲು ಪ್ರಕರಣ ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿ ಡಿ.1ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಮುಖ್ಯ ಮಂತ್ರಿ ನಿವಾಕ್ಕೆ ತೆರಳಿ ಮನವಿ ಪತ್ರ ಸಲ್ಲಿಸಲಾಗುವುದು. ಧರಣಿ ಸತ್ಯಾಗ್ರಹ ಜಾತ್ಯಾತೀತ ಹಾಗೂ ಪಕ್ಷಾತೀತವಾಗಿದ್ದು ಸಮಾಜದ ಎಲ್ಲ ಸಮುದಾಯದ ಜನರೂ ಭಾಗವಹಿಸಲಿದ್ದಾರೆ ಎಂದು ಹೇಳಿದು.
ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ದಿವಂಗತ ಎಂ.ಶ್ರೀನಿವಾಸನ್ ಗೌರವಾರ್ಥ ಸಂತಾಪ ಸೂಚಕ ಸಭೆ ಏರ್ಪಡಿಸುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಪ್ರಾರಂಭಿಸಲಾಗುವುದು. ಡಿ.16 ರಂದು ಶ್ರೀನಿವಾಸಪುರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ಮಟ್ಟದ ಮೊದಲ ಸಂತಾಪ ಸೂಚನಾ ಸಭೆ ನಡೆಸಲು ನಿರ್ಧರಿಸಲಾಗಿದೆ. ದಲಿತ ಹಾಗೂ ಜನಪರ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿ ಹೋರಾಟದ ರೂಪರೇಷೆ ರೂಪಿಸಲಾಗುವುದು ಎಂದು ಹೇಳಿದರು.
ಮುಖಂಡರಾದ ಆರ್.ಜಿ.ನರಸಿಂಹಯ್ಯ, ವಿ.ಶಂಕರ್, ರಾಮಾಂಜಮ್ಮ, ಈರಪ್ಪ, ಮೇಡಿಹಾಳ ಮುನಿವೆಂಕಟಪ್ಪ, ಬಿ.ಆರ್.ಭಾಸ್ಕರ್, ನಾಗರಾಜ್, ವರ್ತನಹಳ್ಳಿ ವೆಂಕಟೇಶ್, ಪಿ.ಶ್ರೀನಿವಾಸ್, ಬಕ್ಷುಸಾಬ್, ಎಂ.ಪಾಪಣ್ಣ, ನಾರಾಯಣಸ್ವಾಮಿ, ನಾಗೇಶ್ ಇದ್ದರು.