

ಕೋಲಾರ: ಎಲ್ಲ ನಾಗರಿಕ ಸೇವೆಗಳನ್ನು ಒಂದೇ ಸೂರಿನಡಿ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಕರ್ನಾಟಕ ಒನ್ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಈ ಕೇಂದ್ರದಲ್ಲಿ ವಿವಿಧ ಸರ್ಕಾರಿ ಸೇವೆಗಳನ್ನು ಒಂದೇ ಸೂರಿನಡಿ ಪಡೆಯಬಹುದಾಗಿದೆ ಎಂದು ಕೋಲಾರ ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ ರಮೇಶ್ ಹೇಳಿದರು.
ನಗರದ ಕುರುಬರಪೇಟೆಯ 3ನೇ ಮುಖ್ಯರಸ್ತೆಯಲ್ಲಿರುವ ಕರ್ನಾಟಕ ಒನ್ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಸಮಗ್ರ ನಾಗರಿಕ ಸೇವೆ ನೀಡಲು ಈ ಸೇವಾ ಕೇಂದ್ರ ಸನ್ನದ್ಧವಾಗಿರುತ್ತವೆ. ಕರ್ನಾಟಕ ಒನ್ ಕೇಂದ್ರಗಳಲ್ಲಿ ವಿದ್ಯುತ್ ಬಿಲ್ಗಳ ಪಾವತಿ, ನೀರಿನ ಬಿಲ್ ಪಾವತಿ, ಆಸ್ತಿ ತೆರಿಗೆ ಪಾವತಿ, ಪಡಿತರ ಚೀಟಿಯ ಸೇವೆಗಳು, ಚುನಾವಣಾ ಗುರುತಿನ ಚೀಟಿಯ ಸೇವೆ, ಜಾತಿ,ಆದಾಯ ಪ್ರಮಾಣಪತ್ರ, ವಿವಿಧ ಇಲಾಖೆಗಳ ಆನ್ ಲೈನ್ ಅರ್ಜಿ ಸೇರಿದಂತೆ ಇತರೆ ಸರ್ಕಾರಿ ಸೇವೆಗಳನ್ನು ಕೆ.ಎನ್.ಪ್ರದೀಪ್ರವರ ನೇತೃತ್ವದಲ್ಲಿ ಕರ್ನಾಟಕ ಒನ್ ಕೇಂದ್ರದಿಂದ ಪಡೆಯಬಹುದು ಎಂದು ವಿವರಿಸಿದರು.
ಕೋಲಾರ ಜಿಲ್ಲಾ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ರವರು ಮಾತನಾಡಿ, ಕೋಲಾರ ನಗರದಲ್ಲಿ ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರ ಪ್ರಾರಂಭವಾಗಿದ್ದು, ನಾಗರೀಕರು ಇದರ ಸದುಪಯೋಗವನ್ನು ಪಡೆಯಿರಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೋಲಾರ ನಗರಸಭಾ ಸದಸ್ಯರು, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ನಾರಾಯಣಪ್ಪ, ನ್ಯಾಯಬೆಲೆ ಅಂಗಡಿ ಮಾಲೀಕರು ಸೇರಿದಂತೆ ಮುಖಂಡರು ಹಾಜರಿದ್ದರು.