ವಿಶ್ವ ಮಧುಮೇಹ ದಿನದ ಅಂಗವಾಗಿ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಸ್ಯೂಟಿಕಲ್ ವಿಭಾಗ ಮತ್ತು ಕಾಲೇಜಿನ ರಾಘ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ದಿನಾಂಕ 13.11.2022 ರಂದು ‘ಮುಲ್ಲರ್ರನ್ನ್’ ಮ್ಯಾರಥಾನ್ ಓಟವನ್ನು ಆಯೋಜಿಸಲಾಯಿತು.
ಮಂಗಳೂರಿನ ಸಂಚಾರಿ ಸಹಾಯಕ ಪೊಲೀಸ್ ಆಯುಕ್ತರಾದ ಗೀತಾ ಕುಲಕರ್ಣಿಯವರು ಮ್ಯಾರಥನ್ನ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು. ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳು ತಮ್ಮ ಉದ್ಘಾಟನಾ ಭಾಷಣದಲ್ಲಿ ಭಾಗವಹಿಸುವವರಿಗೆ ‘ನಡೆಯಿರಿ, ಆರೋಗ್ಯಕರವಾಗಿ ತಿನ್ನಿರಿ, ಅರೋಗ್ಯಕರವಾಗಿ ಯೋಚಿಸಿರಿ ಮತ್ತು ಉತ್ತಮ ಆರೋಗ್ಯಕ್ಕಾಗಿ ಓಡಿರಿ’ ಎಂಬ ನಾಲ್ಕು ತಂತ್ರಗಳನ್ನು ಅನುಸರಿಸಲು ಪೆÇ್ರೀತ್ಸಾಹಿಸಿದರು. ಅಧ್ಯಕ್ಷರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಮಧುಮೇಹದ ಬಗ್ಗೆ ಜಾಗರೂಕರಾಗಬೇಕಾದ ಪ್ರಸ್ತುತ ಯುಗದಲ್ಲಿ ಈ ಮ್ಯಾರಥಾನ್ ಓಟವನ್ನು ಅಯೋಜಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದೆ ಬಂದ ಕಾಲೇಜಿನ ಆಯೋಜನಾ ತಂಡವನ್ನು ಶ್ಲಾಘಿಸಿದರು. ಇದರೊಂದಿಗೆ ಬೆಳಿಗ್ಗೆ 6.30 ಗಂಟೆಗೆ ಮುಖ್ಯ ಅತಿಥಿಗಳು 15 ಕಿ.ಮೀ ಓಟಕ್ಕೆ ಹಾಗೂ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿಗಳಾದ ವಂದನೀಯ ಅಜಿತ್ ಮಿನೇಜಸ್ ರವರು 7.15 ಗಂಟೆಗೆ 5 ಕಿ.ಮೀ ಓಟಕ್ಕೆ ಚಾಲನೆ ನೀಡಿದರು.
15 ಕಿ.ಮೀ ಪುರುಷರ ವಿಭಾಗದಲ್ಲಿ ಶ್ರೀ ಅನಿಲ್ ಕುಮಾರ್ರವರು 43ನಿಮಿಷ 28ಸೆಕೆಂಡ್ ಗಳಲ್ಲಿ ಹಾಗೂ ಮಹಿಳೆಯರ ವಿಭಾಗದಲ್ಲಿ ಕುಮಾರಿ ಚೈತ್ರಾ ದೇವಾಡಿಗ 58 ನಿಮಿಷ 30ಸೆಕೆಂಡ್ಗಳಲ್ಲಿ ಪೂರೈಸುವ ಮೂಲಕ ಮೊದಲನೆ ಸ್ಥಾನವನ್ನು ಗಳಿಸಿದರು. ಪುರುಷರ 5 ಕಿ.ಮೀ ವಿಭಾಗದಲ್ಲಿ ಶೀ ಗೋವಿಂದರಾಜ್ ಹಾಗೂ ಮಹಿಳೆಯರ ವಿಭಾಗದಲ್ಲಿ ಕುಮಾರಿ ಧನುಷಾ ಶೆಟ್ಟಿ ಪ್ರಥಮ ಸ್ಥಾನ ಗಳಿಸಿದರು.
15 ಕಿ.ಮೀ ವಿಭಾಗದಲ್ಲಿ 71 ವರ್ಷದ ಶ್ರೀಮತಿ ಸುಲತಾ ಕಾಮತ್ ಹಾಗೂ 64 ವರ್ಷದ ಶ್ರೀ ವಿಠ್ಟಲ್ ಶೆಟ್ಟಿಗಾರ್ ಮತ್ತು ಅತೀ ಕಿರಿಯ ವಯಸ್ಸಿನ ಮಾಸ್ಟರ್ ಸ್ವಯಂ ರವರ ಭಾಗವಹಿಸುವಿಕೆಯು ಈ ಮ್ಯಾರಥಾನ್ನ ವಿಶೇಷತೆಯಾಗಿದ್ದು ಅವರನ್ನು ವಿಶೇಷ ಬಹುಮಾನಗಳೊಂದಿಗೆ ಗೌರವಿಸಲಾಯಿತು.
ಒಟ್ಟಾಗಿ ವಿಜೇತರಿಗೆ ನಗದು ಬಹುಮಾನ, ಆರೋಗ್ಯ ತಪಾಸಣೆ ವೌಚರ್ ಹಾಗೂ ಗಿಫ್ಟ್ ಹ್ಯಾಂಪರ್ಗಳನ್ನೊಳಗೊಂಡ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಬಹುಮಾನಗಳನ್ನು ನೀಡಲಾಯಿತು. ಹಾಗೂ ಎಲ್ಲಾ ಮ್ಯಾರಥಾನ್ ಫಿನಿಶರ್ಗಳಿಗೆ ಅವರ ಭಾಗವಹಿಸುವಿಕೆಗಾಗಿ ಪದಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂದನೀಯ ರೋಶನ್ ಕ್ರಾಸ್ತ, ಕಾಲೇಜಿನ ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಗಿರೀಶ್ ನಾವಡ ಯು.ಕೆ., ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ದೀಪಾ ರೆಬೆಲ್ಲೊ, ಕಾರ್ಯಕ್ರಮ ಸಂಯೋಜಕರಾದ ಡಾ. ಸೂರಜ್ ಕೆ.ವಿ., ರಾಘ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಡಾ. ದೀರಜ್ ಫೆರ್ನಾಂಡಿಸ್, ಮಾದ್ಯಮ ಸಂಯೋಜಕರಾದ ಡಾ. ಅನುಷಾ ಜಿ., ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಚೆನ್ನಕೇಶವ ಎಮ್.ಜಿ. ಯವರು ಉಪಸ್ಥಿತರಿದ್ದರು.