

ಕೋಲಾರ,ಜು.09: ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಮುಗಿಸಲು ಹಾಗೂ ಕ್ಷೇತ್ರಕ್ಕೆ ಲಭ್ಯವಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಕಾಮಗಾರಿಗಳ ಕುರಿತು ಸಂಸದ ಎಂ.ಮಲ್ಲೇಶ್ ಬಾಬು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಚರ್ಚಿಸಿ ಮನವಿ ಸಲ್ಲಿಸಿದರು.
ನವದೆಹಲಿಯ ಸಚಿವರ ನಿವಾಸದಲ್ಲಿ ಭೇಟಿ ಮಾಡಿದ ಸಂಸದರು ಕೋಲಾರ ಕ್ಷೇತ್ರದ ಮೂಲಕ ಹಾದು ಹೋಗಿರುವ ಚನೈ ಎಕ್ಸ್ಪ್ರೆಸ್ ಕಾರಿಡಾರ್ ರಸ್ತೆಗೆ ಭೂಮಿಯನ್ನು ನೀಡಿರುವ ರೈತರಿಗೆ ಪರಿಹಾರ ಧನ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ದಿ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯಗಳ ಕುರಿತು ಸುರ್ದೀಘ ಚರ್ಚೆಯನ್ನು ನಡೆಸಿದರು.
ಈಗಾಗಲೇ ಕೆ.ಆರ್.ಪುರಂನಿಂದ ಆಂದ್ರ ಗಡಿವರೆಗೂ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಮುಗಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡುವ ಜೊತೆಗೆ ಕ್ಷೇತ್ರದಲ್ಲಿ ಹೆದ್ದಾರಿಗಳನ್ನು ಅಭವೃದ್ದಿ ಪಡಿಸಲು ಸಹಕರಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಸಂಸದರ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು ಕೂಡಲೇ ಅಧಿಕಾರಿಗಳ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ ಕುಮಾರಸ್ವಾಮಿ ಉಪಸ್ಥಿತರಿದ್ದರು.
