ಶ್ರೀನಿವಾಸಪುರ: ಅವರೆ ಕಾಯಿ ವಹಿವಾಟು ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಕಾರ್ಯಕರ್ತರು ಪುರಸಭೆ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ವೇದಿಕೆ ಯುವಸೇನೆ ಅಧ್ಯಕ್ಷ ಶ್ರೀನಾಥ್ ಮಾತನಾಡಿ, ಪಟ್ಟಣದ ಏಕೈಕ ಮುಖ್ಯ ರಸ್ತೆಯಾದ ಎಂ.ಜಿ ರಸ್ತೆಯ ಉದ್ದಗಲಕ್ಕೂ ಪ್ರತಿ ದಿನ ಅವರೆ ಕಾಯಿ ವಹಿವಾಟು ನಡೆಸುವುದರಿಂದ, ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ನಾಗರಿಕರ ಓಡಾಟಕ್ಕೂ ತೊಂದರೆಯಾಗಿದೆ. ವಾಹನ ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗಿದೆ ಎಂದು ಹೇಳಿದರು.
ಪಟ್ಟಣದ ಚಿಂತಾಮಣಿ ಸರ್ಕ್ಲ್ನಿಂದ ಇಂದ್ರಾ ಭವನ್ ವೃತ್ತದ ವರೆಗೆ ರಸ್ತೆ ವಿಸ್ತರಣೆ ಹಾಗೂ ದುರಸ್ತಿ ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿದ್ದು, ವಾಹನ ಸಂಚಾರ ಸಾಧ್ಯವಾಗಿಲ್ಲ. ಮುಖ್ಯ ರಸ್ತೆಗಳಲ್ಲಿ ಒಂದಾದ ಚಿಂತಾಮಣಿ ಸರ್ಕಲ್ ರಸ್ತೆ ಮುಚ್ಚಿರುವುದರಿಂದ ನಾಗರಿಕರಿಗೆ ತೊಂದರೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಪಡಿಸಿದರು.
ಪುರಸಭೆ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್ ಅವರಿಗೆ ತಮ್ಮ ಬೇಡಿಕೆ ಒಳಗೊಂಡ ಮನವಿ ಪತ್ರ ನೀಡಿದರು.
ಸಂಘಟನೆ ಜಿಲ್ಲಾಧ್ಯಕ್ಷ ಸುಬ್ರಮಣಿ, ಮುಖಂಡರಾದ ಧನಂಜಯ್, ರಾಜೀವ್, ನವೀನ್, ಸುನಿಲ್, ನಿಶಾಂತ್ ಇದ್ದರು.