ಕೋಲಾರ : ಆರೋಗ್ಯವಂತ ಶಿಶು ಸಧೃಡ ಪ್ರಜೆಯಾಗಿ ಸಮಾಜದಲ್ಲಿ ಬದುಕಬೇಕಾದರೆ ಇದಕ್ಕೆ ಒಂದೇ ಮದ್ದು ತಾಯಿ ಹಾಲು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆಯೋಜಿಸಿದ್ದ, ವಿಶ್ವಸ್ತನ್ಯಪಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಯಿ ಹಾಲು ಮಕ್ಕಳಿಗೆ ಸಂಜೀವಿನಿ, ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ತಾಯಿ ಹಾಲು ಉತ್ತಮವಾದ ಆಹಾರ ಎಂದರು.
ಹಿಂದಿನ ಕಾಲದಲ್ಲಿ ಈ ಹಾಲುಣಿಸುವ ಬಗ್ಗೆ ಅರಿವು ನೀಡುವುದು ತಾಯಂದಿರಿಂದ ಮಕ್ಕಳಿಗೆ ಮುಂದುವರಿಯುತ್ತಿತ್ತು. ಆದರೆ ಇಂದು ವಿದ್ಯಾವಂತರಿಗೆ ಹಾಲುಣಿಸುವ ಕುರಿತು ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂದಿನ ದಿನಗಳಲ್ಲಿ ಮಕ್ಕಳು ರೋಗಗಳ ಗೂಡಾಗುತ್ತಿರಲು ಕಾರಣ ತಾಯಂದಿರು ಸ್ತನ್ಯಪಾನ ಮಾಡಿಸದೇ ಇರುವುದು ಎಂದರು.
ಎಸ್.ಎನ್.ಆರ್ ಆಸ್ಪತ್ರೆಗಳಲ್ಲಿ ತಾಯಿ ಮಗುವಿಗೆ ಮೂಲಭೂತ ಸೌಕಯ್ಯಗಳನ್ನು ಒದಗಿಸಲಾಗಿದೆ. ಗರ್ಭಿಣಿಯಿಂದ ಹಿಡಿದು ಬಾಣಂತಿ ಆರೈಕೆ ಮಗುವಿಗೆ ಚುಚ್ಚುಮದ್ದು, ತಾಯಿ ಮಗುವಿನ ಆರೋಗ್ಯ ಸೇವೆಗಳನ್ನು ಅನುಸರಿಸುವಂತಹ ವ್ಯವಸ್ಥೆ ಇಡೀ ರಾಜ್ಯದಲ್ಲಿ ಕೋಲಾರ ನಗರದಲ್ಲಿ ಮಾತ್ರ ಇದ್ದು, ಇದು ಹಮ್ಮೆಯ ವಿಷಯವಾಗಿದೆ. ಹಾಗಾಗಿ ಪ್ರತಿಯೊಬ್ಬ ತಾಯಿ ಮಗು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮಹಿಳೆಯರಲ್ಲಿ ಮನವಿ ಮಾಡಿದರು.
ಉತ್ತಮ ವೈದ್ಯಾಧಿಕಾರಿಗಳ ತಂಡವಿದ್ದು, ಉತ್ತಮ ಸಮಾಜಕ್ಕೆ ಆರೋಗ್ಯವಂತ ಪ್ರಜೆಗಳನ್ನು ನೀಡುವುದು ವೈದ್ಯರ ಉದ್ದೇಶವಾಗಿದೆ ಎಂದರು.
ಡಾ.ಬಿರೇಗೌಡ ಅವರು ಮಾತನಾಡಿ 25 ವರ್ಷಗಳ ಹಿಂದೆ ಈ ಆಸ್ಪತ್ರೆಗೆ ಯಾವುದೇ ವೈದ್ಯಕೀಯ ಸೌಲಭ್ಯಗಳಿರಲಿಲ್ಲ ಆದರೆ ಇಂದು ಜೀರೆ ಆಸ್ಪತ್ರೆಯಿಂದ ಈ ಆಸ್ಪತ್ರೆಗೆ ಶಿರ್ಫಾಸ್ಸು ಮಾಡಿ ರೋಗಿಗಳು ಬರುತ್ತಿದ್ದಾರೆ. ಇದಕ್ಕೆ ಮೂಲ ಮತ್ತು ಮುಖ್ಯ ಕಾರಣ ಈ ಆಸ್ಪತ್ರೆಯಲ್ಲಿರುವ ಮೂಲ ಸೌಲಭ್ಯಗಳು ಎಂದರು.
ಮೂಢನಂಬಿಕೆ ಯಿಂದ ಹೊರಬಂದು ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ ಎಂದರು.
ದೇವಾನುದೇವತೆಗಳೇ ತಾಯಿ ಹಾಲು ಕುಡಿದು ಆರೋಗ್ಯವಂತ ಮತ್ತು ಸದೃಢರಾಗಿ ಪ್ರಪಂಚವನ್ನೆಗೆದ್ದಿದ್ದಾರೆ. ಹಾಗಾಗಿ ಬಲಿಷ್ಠ ಹಾಗೂ ಆರೋಗ್ಯವಂತ ಮಕ್ಕಳನ್ನು ಹೊಂದಲು ಪ್ರತಿಯೊಬ್ಬ ತಾಯಿ ತನ್ನ ಮಗುವಿಗೆ ಹುಟ್ಟುದಾಗಿನಿಂದ ಆರು ತಿಂಗಳವರೆಗೆ ಕಡ್ಡಾಯವಾಗಿ ಎದೆ ಹಾಲುಣಿಸುವಂತೆ ಹೇಳಿದರು. ಆಹಾರ ಸೇವನೆ ಕ್ರಮಬದ್ಧವಾಗಿದ್ದರೆ ಅನಾರೋಗ್ಯಕ್ಕೆ ಅವಕಾಶವಿರುವುದಿಲ್ಲ ಎಂದರು.
ಡಾ.ಮಮತಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ 1991 ರಿಂದ ಈ ಸ್ತನ್ಯಪಾನ ದಿನಾಚರಣೆ ಆರಂಭವಾಯಿತು.
ಸ್ತನ್ಯಪಾನವು ಮಗುವಿಗೆ ಪೋಷಕಾಂಶಗಳ ಕಣಜವಾಗಿದೆ. ಮಗುವನ್ನು ನಿಮೋನಿಯಾ, ಅತಿಸಾರ, ಮಾರಾಣಾಂತಿಕ ರೋಗಗಳಿಂದ ರಕ್ಷಣೆ ಮಾಡುತ್ತದೆ ಎಂದರು. ಕನಿಷ್ಠ 2 ವರ್ಷದವರೆಗೆ ಮಗುವಿಗೆ ಹಾಲುಣಿಸದರೆ ಹಲವಾರು ಪ್ರಯೋಜಗಳಿವೆ. ಗರ್ಭಿಣಿ್ರ, ಬಾಣಂತಿಯರಿಗೆ ಎದೆ ಹಾಲಿನ ಮಹತ್ವವನ್ನು ಅರಿವು ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ. ತಾಯಂದಿರು ಹಾಲುಣಿಸಲು ಶುರು ಮಾಡಿ ಕೆಲವೇ ತಿಂಗಳಿಗೆ ಬಿಡಿಸುತ್ತಿರುವುದು ಹಾಗೂ ಜೊತೆಗೆ ಬಾಟಲಿ ಹಾಲು ಇತರೆ ಪಾನೀಯಗಳನ್ನು ಕುಡಿಸುತ್ತಿರುವುದು ಕಂಡುಬರುತ್ತಿದೆ. ಇದು ತುಂಬಾ ಅಪಾಯಕಾರಿಯಾಗಿದೆ ಎಂದರು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಯಾದ ಎನ್.ಸಿ ನಾರಾಯಣಸ್ವಾಮಿಯವರು ವಿಶ್ವ ಸ್ತನ್ಯಪಾನ ದಿನಾಚರಣೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವೈದ್ಯರುಗಳಾದ ಬಾಲಸುಂದರ್, ಕಮಲಾಕರ್ ಕೆ.ಆರ್, ಜಿಲ್ಲಾ ಆರೋಗ್ಯಾಧಿಕಾರಿ ಎಂ. ಪ್ರೇಮಾ, ನಸಿರ್ಂಗ್ ಅಧೀಕ್ಷಕರಾದ ವಿಜಿಯಮ್ಮ, ಸುಮತಿ ಅವರು ಸೇರಿದಂತೆ ಬಾಣಂತಿಯರು ಮಗು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಎಸ್ ಇನ್ ಆರ್. ಆಸ್ಪತ್ರೆಯಲ್ಲಿ ಮಿಲ್ಕ್ ಬ್ಯಾಂಕ್ ಉದ್ಘಾಟನೆ ಮಾಡಿದರು