ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಕಣ್ಣಿನ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದು ನೇತ್ರ ತಜ್ಞ ಡಾ. ದೇವಾಜ್ ಹೇಳಿದರು.
ತಾಲ್ಲೂಕಿನ ಬೈರಗಾನಪಲ್ಲಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಮತ್ತು ಸ್ವಸಹಾಯ ಸಂಘಗಳ ಸದಸ್ಯರಿಗೆ ಶುಕ್ರವಾರ ಏರ್ಪಡಿಸಿದ್ದ ನೇತ್ರ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಮನುಷ್ಯನ ಅಂಗಾಂಗಳಲ್ಲಿ ನೇತ್ರ ಪ್ರಧಾನವಾದುದು. ನೇತ್ರ ರೋಗವನ್ನು ನಿರ್ಲಕ್ಷಿಸಿದರೆ ಅಂಧಕಾರ ಆವರಿಸುವ ಸಾಧ್ಯತೆತೆ ಇರುತ್ತದೆ. ಎಷ್ಟೋ ಜನ ಕಣ್ಣಿಲ್ಲದೆ ಪರಿತಪಿಸುತ್ತಿದ್ದಾರೆ. ಅಂಥ ಸಂದರ್ಭದಲ್ಲಿ ಇರುವ ಕಣ್ಣನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಘಟಕದ ನಿರ್ದೇಶಕ ಸುರೇಶ್ ಗೌಡ ಮಾತನಾಡಿ, ಕಣ್ಣಿನ ಸಮಸ್ಯೆ ಇರುವವರು ಉಚಿತ ನೇತ್ರ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು. ದೃಷ್ಟಿ ಮಂದವಾಗುವುದನ್ನು ತಪ್ಪಿಸಬೇಕು. ಅಗತ್ಯ ಇರುವ ನೇತ್ರ ರೋಗಿಗಳಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಿ, ಉಚಿತವಾಗಿ ಕನ್ನಡಕ ನೀಡಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬೈರಾರೆಡ್ಡಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕಿನ ಬಡವರ ಪಾಲಿಗೆ ದೊಡ್ಡ ಭರವಸೆಯಾಗಿದೆ. ಅದು ಕೈಗೊಂಡಿರುವ ಸಮಾಜ ಸೇವಾ ಕಾರ್ಯಗಳು ಹಾಗೂ ಆರ್ಥಿಕಾಭಿವೃದ್ದಿ ಯೋಜನೆಗಳು ಜನರನ್ನು ಸದೃಢಗಳಿಸುವಲ್ಲಿ ಯಶಸ್ವಿಯಾಗಿವೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ವೆಂಕಟರಮಣ, ಮೇಲ್ವಿಚಾರಕ ವೆಂಕಟೇಶ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಈರಮ್ಮ ನಾಗರಾಳ, ಸೇವಾ ಪ್ರತಿನಿಧಿಗಳಾದ ಧನಲಕ್ಷ್ಮಿ, ¯ಕ್ಷ್ಮಿ ನವೀನ್ ಇದ್ದರು.