ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂದಾಪುರ : ಬಹು ದಿನಗಳಿಂದಲೂ ನಿರೀಕ್ಷಿಸಿದ್ದ, ಕೋಟೇಶ್ವರದ ಯುವ ಪ್ರತಿಭೆ ನಿರ್ದೇಶಿಸಿ, ಕರಾವಳಿ ಭಾಗದಲ್ಲೇ ಚಿತ್ರೀಕರಣಗೊಂಡಿದ್ದ, ಬಿಡುಗಡೆಯ ಪೂರ್ವದಲ್ಲೇ ಮೂರು ಅಂತರ್ ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡ ಸಾಂಸಾರಿಕ ಕಥಾನಕದ “ಮೋಡರ್ನ್ ಮಹಾಭಾರತ” ಕನ್ನಡ ಸಿನಿಮಾ ಫೆ.26ರ ಶುಕ್ರವಾರ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಭಾರತ್ ಸಿನಿಮಾಸ್ ನಲ್ಲಿ ಬಿಡುಗಡೆಗೊಂಡಿತು. ಕುಂದಾಪುರದವರೆ ನಿರ್ಮಿಸಿದ್ದ ಇನ್ನೊಂದು ಸಿನಿಮಾ ಕೂಡಾ ಅಂದೇ ಬಿಡುಗಡೆಗೊಂಡಿತ್ತು.
ಹಿಂದಿನ ದಿನವೇ ಚಿತ್ರ ತಂಡದವರು ಕೋಟೇಶ್ವರದ ಭಾರತ್ ಸಿನಿಮಾಸ್ ಥಿಯೇಟರ್ ಮುಂಭಾಗದಲ್ಲಿ ದೊಡ್ಡ ದೊಡ್ಡ ಹೋರ್ಡಿಂಗ್ ಗಳನ್ನು ನಿಲ್ಲಿಸಿ ಪ್ರಚಾರ ನಡೆಸಿದ್ದರು. ಬೆಳಿಗ್ಗೆ 10 ಗಂಟೆಯ ಪ್ರದರ್ಶನಕ್ಕೆ ಆಗಮಿಸುವ ಪ್ರೇಕ್ಷಕರನ್ನು ಅದ್ಧೂರಿಯ ಬ್ಯಾಂಡ್ ವಾದ್ಯದ ಮೂಲಕ ಸ್ವಾಗತಿಸಿದ್ದು ಸಿನಿಮಾ ವೀಕ್ಷಣೆಗೆ ಆಗಮಿಸಿದವರಿಗೆ ಖುಷಿ ನೀಡಿತು. ತುಂಬಿದ ಚಿತ್ರ ಮಂದಿರದಲ್ಲಿ ಪ್ರದರ್ಶನ ವೀಕ್ಷಿಸಿ ಜನರು ಹೊರಬರುವಾಗ ಸ್ಥಳದಲ್ಲಿದ್ದ ಮೋಡರ್ನ್ ಮಹಾಬ್ಗಾರತ ಚಿತ್ರ ನಿರ್ದೇಶಕ ಶ್ರೀಧರ್ ಉಡುಪರನ್ನು ಮುಕ್ತ ಕಂಠದಿಂದ ಅಭಿನಂದಿಸಿದರು. ಎಲ್ಲರ ಬಾಯಲ್ಲೂ ಸಿನಿಮಾದ ಬಗ್ಗೆ ಮೆಚ್ಚಿಕೆಯ ಮಾತುಗಳಿತ್ತು. ಮೋಡರ್ನ್ ಮಹಾಭಾರತ ಸಿನಿಮಾದ ಕತೆ, ಅದ್ಭುತ ತಿರುವು, ಇಂಪಾದ ಹಾಡುಗಳು, ಬಿಗಿಯಾದ ನಿರ್ದೇಶನ, ಕರಾವಳಿ ಪ್ರದೇಶದ ಸುಂದರ ಹೊರಾಂಗಣ ದೃಶ್ಯಗಳ ಬಗ್ಗೆಯೇ ಜನರು ಪ್ರಶಂಸೆಯ ಮಾತನಾಡುತ್ತಿದ್ದರು. ಮಣಿಪಾಲ ಮತ್ತು ಮಂಗಳೂರು ಗಳಿಂದಲೂ ಚಿತ್ರದ ಬಗ್ಗೆ ಒಳ್ಳೆಯ ಸುದ್ದಿಗಳೇ ಬಂದಿದ್ದು, ಜಿಲ್ಲೆಯಾದ್ಯಂತ ಚಿತ್ರ ರಸಿಕರು ಮೋಡರ್ನ್ ಮಹಾಭಾರತವನ್ನು ಮೆಚ್ಚಿರುವುದು ಚಿತ್ರ ತಂಡದವರ ಶ್ರಮವನ್ನು ಮರೆಸಿದೆ. ಚಿತ್ರ ನಿರ್ದೇಶಕ ಕೋಟೇಶ್ವರ ಶ್ರೀಧರ ಉಡುಪ ತಮ್ಮ ಚೊಚ್ಚಲ ಪ್ರಯತ್ನದ ಪ್ರಥಮ ಪ್ರದರ್ಶನದ ನಂತರ ತಮ್ಮನ್ನು ಸಂಪರ್ಕಿಸಿದ ಮಾಧ್ಯಮದವರೊಂದಿಗೆ ಮಾತನಾಡಿ, ತಮ್ಮ ಮತ್ತು ಇಡೀ ಚಿತ್ರ ತಂಡದವರ ಶ್ರಮ ಸಾರ್ಥಕವಾಯಿತು ಎಂದರು. ಮೊಡರ್ನ್ ಮಹಾಭಾರತ ಚಿತ್ರ ಸಂಪೂರ್ಣಗೊಂಡಿದ್ದರೂ ಕೋವಿಡ್ ಕಾರಣದಿಂದ ಬಿಡುಗಡೆಗೆ ಸಾಧ್ಯವಾಗಿರಲಿಲ್ಲ. ಇದೀಗ ಎಲ್ಲ ಆತಂಕ ಕಳೆದು ಜನರು ಪರಿಸ್ಥಿತಿಗೆ ಹೊಂದಿಕೊಳ್ಳುವ ಈ ಸಮಯದಲ್ಲಿ ಚಿತ್ರ ಮಂದಿರದಲ್ಲೇ ಅವರಿಗೆ ಸಿನಿಮಾ ವೀಕ್ಷಣೆಯ ಅವಕಾಶ ವಾಗಿರುವುದು ಕೂಡಾ ಜನ ಮೆಚ್ಚಿಗೆಗೆ ಇನ್ನೊಂದು ಕಾರಣವಾಗಿದೆ. ಚಿತ್ರ ಸೆನ್ಸಾರ್ ನಂತರ ಚಿತ್ರದ ಟ್ರೈಲರ್, ಟೀಸರ್ ಗಳು ಬಿಡುಗಡೆಗೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಜೊತೆಗೆ ಚಿತ್ರದ ಬಾಲ ಕಲಾವಿದರ ಧ್ವನಿ ಮುದ್ರಿಕೆಯ ಬಹಿರಂಗ ಪ್ರಚಾರ ಜನರನ್ನು ಥಿಯೇಟರ್ ಗಳಿಗೆ ಸೆಳೆಯುವಲ್ಲಿ ಕಾರಣವಾಯಿತು. ಆನ್ ಲೈನ್ ಮೂಲಕವೂ ಬುಕಿಂಗ್ ವ್ಯವಸ್ಥೆಯಿದ್ದು ಬಹುತೇಕ ಸೀಟುಗಳು ಆ ಮೂಲಕವೇ ಭರ್ತಿಯಾಗಿತ್ತು. ಮೋಡರ್ನ್ ಮಹಾಭಾರತ ಸಿನಿಮಾದ ಆನ್ ಲೈನ್ ಬುಕ್ಕಿಂಗ್, ವಿಚಾರಣೆಯ ಮಹಾಪೂರವೇ ಬರುತ್ತಿದ್ದು, ಚಿತ್ರ ಎಲ್ಲೆಡೆ ಯಶಸ್ವೀ ಪ್ರದರ್ಶನ ಕಾಣುವ ಭರವಸೆ ಮೂಡಿಸಿದೆ.
ಕೋಟೇಶ್ವರದ ಭಾರತ್ ಸಿನಿಮಾಸ್ ಥಿಯೇಟರ್ ನಲ್ಲಿ ಚಿತ್ರದ ನಿರ್ದೇಶಕ ಶ್ರೀಧರ ಉಡುಪ, ನಟರಾದ ಪ್ರಶಾಂತ್ ಶೆಟ್ಟಿ, ಸುಪ್ರೀತಾ, ಬಾಲ ನಟರಾದ ಆದಿತ್ಯ, ಸಮೃದ್ಧಿ, ನಾಗರಾಜ್ ಇನ್ನಿತರರು ಹಾಜರಿದ್ದರು.
ವೀಕ್ಷಕರ ಪ್ರತಿಕ್ರಿಯೆಗಳು
“ಮೋಡರ್ನ್ ಮಹಾಭಾರತ ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ನಿರ್ದೇಶಕ ಶ್ರೀಧರ ಉಡುಪರ ಕಲಾ ಪ್ರೌಢಿಮೆ ಎದ್ದು ಕಾಣುತ್ತದೆ.” — ಚೇತನಾ ಕಲಾರಂಗದ ನಟ ರಾಮಚಂದ್ರ ಆಚಾರ್ಯ
” ಮೂರು ಸಂಸಾರಗಳ ಕತೆಯ ಎಲ್ಲ ಹೂರಣಗಳನ್ನೂ ಅದ್ಭುತವಾಗಿ ತೆರೆಗೆ ತಂದಿರುವುದು ಮೆಚ್ಚಿಕೆಯಾಯಿತು. ಉಡುಪರಿಗೆ ಅಭಿನಂದನೆಗಳು ” — ಲಕ್ಷ್ಮಿಯಮ್ಮ, ಹಿರಿಯ ಗೃಹಿಣಿ.
” ಮೋಡರ್ನ್ ಮಹಾಭಾರತ ಎಂಬ ಟೈಟಲ್ ನೋಡಿ ಇದು ಪೌರಾಣಿಕ ಚಿತ್ರ ಎಂದೇ ಭಾವಿಸಿದ್ದೆ. ಆದರೆ ಚಿತ್ರ ವೀಕ್ಷಣೆಯ ನಂತರ, ಇದು ಎಲ್ಲಾ ಸಂಸಾರಗಳ ಮಹಾಭಾರತ ಎಂದು ಅರಿವಾಯಿತು, ಚಿತ್ರ ಅದ್ಭುತವಾಗಿದೆ ” — ನಾಗರಾಜ್, ಪುಷ್ಪ ವ್ಯಾಪಾರಿ.
” ಚಿತ್ರದಲ್ಲಿ ಹದಿ ಹರೆಯದವರ ಲವ್ ಸೀನ್ಸ್ ಚೆನ್ನಾಗಿದೆ. ಎರಡೂ ಕುಟುಂಬಗಳ ಒಪ್ಪಿಗೆಯಿಂದಲೇ ಪ್ರೇಮಿಗಳು ಒಂದಾಗುವುದು ಪ್ರೇಮಿಗಳಿಗೆ ತುಂಬಾ ಇಷ್ಟವಾಗುತ್ತದೆ” — ರಾಮಕೃಷ್ಣ , ಟೆಕ್ಕಿ
” ನಮ್ಮ ಸುತ್ತಮುತ್ತಲಿನ ಸುಂದರ ಪರಿಸರ, ಪ್ರೇಮಿಗಳ ಕಲರವ, ಅವರ ಹೆತ್ತವರ ಆತಂಕ ಎಲ್ಲವೂ ಚಿತ್ರದಲ್ಲಿ ಪರಿಣಾಮಕಾರಿಯಾಗಿದೆ. ಚಿತ್ರವನ್ನು ಇನ್ನು ಇನ್ನೂ ನೋಡಬೇಕೆನಿಸುತ್ತದೆ” — ಪವನ್ ಕುಮಾರ್, ಕಾಲೇಜು ವಿದ್ಯಾರ್ಥಿ.