JANANUDI.COM NETWORK
ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ” ಯನ್ನು ಆಚರಿಸಲಾಯಿತು. ಇದರ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ರಮಾಕಾಂತ ರೇವಣಕರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತು ಮತ್ತು ವಿಧೇಯತೆ ಅತಿ ಅವಶ್ಯಕ ಎಂದು ವಿವರಿಸಿದರು. ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಕುಂದಾಪುರ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ಅನಿಲ್ ಕೊಠಾರಿ ಇವರು ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಪ್ರಯತ್ನವನ್ನು ಶ್ಲಾಘಿಸುತ್ತ ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಕಾಲೇಜಿನ ಬೇಸಿಕ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊ. ದೀಪಕ್ ಶೆಟ್ಟಿ ಇವರು ರಾಷ್ಟ್ರೀಯ ವಿಜ್ಞಾನ ದಿನದ ಪ್ರಾಮುಖ್ಯತೆಯನ್ನು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರರಾವ್ ಮದಾನೆ ಮತ್ತು ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾ, ಕಾಲೇಜಿನ ಡೀನ್, ವಿಭಾಗದ ಮುಖ್ಯಸ್ಥರು, ಸಿಬಂದಿ ವರ್ಗ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಂ.ಬಿ.ಎ ವಿದ್ಯಾರ್ಥಿನಿ ವೈಷ್ಣವಿ ಸ್ವಾಗತಿಸಿ, ಭಾಂದವ್ಯ ಮತ್ತು ಶಬೀನಾ ವಂದಿಸಿದರು, ವಿಜೇತ ಮತ್ತು ಮುಗ್ಧ ಕಾರ್ಯಕ್ರಮ ನಿರೂಪಿಸಿದರು.