JANANUDI.COM NETWORK
ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸುವುದರೊಂದಿಗೆ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರದ ಪ್ರತಿಷ್ಠಿತ ಮನೀಶ್ ಆಸ್ಪತ್ರೆಯ ಸಂಸ್ಥಾಪಕರು ಹಾಗೂ ವೈದ್ಯರೂ ಆದ ಪ್ರಮೀಳಾ ನಾಯಕ್ ಫರ್ನಾಂಡಿಸ್ ಇವರು ಸಾಧಕ ಮಹಿಳೆಯರನ್ನು ಸನ್ಮಾನಿಸಿ ಮಾತನಾಡಿ ಪ್ರತಿಯೊಬ್ಬ ಹೆಣ್ಣು ತನ್ನ ಶಕ್ತಿ ಸಾಮರ್ಥ್ಯ ಅರ್ಥೈಸಿಕೊಂಡು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಸಾಧನೆ ತೋರಿ ಮಾದರಿಯಾಗಬೇಕು ಎಂದು ಹುರಿದುಂಬಿಸಿದರು. ಜೊತೆಗೆ ಎಲ್ಲಾ ಸಾಧಕ ಮಹಿಳೆಯರ ಸಾಧನೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಕುಂದಾಪುರದ ಬಹುಮುಖ ಪ್ರತಿಭೆ ಶ್ರೀಮತಿ ಅಕ್ಷತಾ ಗಿರೀಶ್ ಐತಾಳ್, ವಿಶೇಷ ಚೇತನ ಮಕ್ಕಳ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಹಾಲಾಡಿಯ ಬ್ರೈಟ್ ಪರ್ಲ್ ಸ್ಕೂಲ್ ನ ಸಂಸ್ಥಾಪಕರಾದ ಶ್ರೀಮತಿ ಆಶಾ ರಾಜೀವ್ ಕುಲಾಲ್, ಕಲಾ ಕ್ಷೇತ್ರದ ಸಾಧನೆಗಾಗಿ ಕಲಾವಿದರಾದ ಶ್ರೀಮತಿ ಸುಧಾ ಮಣೂರ್ ಹಾಗೂ ಸಾಮಾಜಿಕ ಕ್ಷೇತ್ರದ ಕೊಡುಗೆಗಾಗಿ ಕೋಣಿಯ ಮಾನಸ ಜ್ಯೋತಿ ಸಂಸ್ಥೆಯ ಆಡಳಿತ ವಿಭಾಗದ ಮಿಸ್ ಮಾರ್ಟ್ಜೆ ವ್ಯಾನ್ ಡಾನ್ ಬ್ರಾಂಡ್ ಇವರುಗಳನ್ನು ಗೌರವಿಸಿ ಸನ್ಮಾನಿಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರರಾವ್ ಮದಾನೆಯವರು “ಮಹಿಳಾ ದಿನಾಚರಣೆಯ ಶುಭ ಹಾರೈಸಿ ಅನೇಕ ಮೌಲ್ಯಯುತ ವಿಚಾರ ಹಂಚಿಕೊಂಡರು.
ಈ ಸಂದರ್ಭ ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರೊ. ಮೆಲ್ವಿನ್ ಡಿಸೋಜ, ಅಕಾಡೆಮಿಕ್ ಡೀನ್ ಡಾ. ಪ್ರತಿಭಾ ಎಂ ಪಟೇಲ್, ಪ್ಲೇಸ್ಮೆಂಟ್ ಡೀನ್ ಪ್ರೊ. ಅಮೃತಮಾಲ, ಪ್ರಮೋಷನ್ & ಡೆವಲಪ್ಮೆಂಟ್ ಡೀನ್ ಪ್ರೊ. ಕಿಶೋರ್ ಕುಮಾರ್ ಆರೂರ್ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ವರ್ಗ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿ ರೋಷನ್ ಸ್ವಾಗತಿಸಿದರು, ಕಿರಣ್ ವಂದಿಸಿದರು, ಅಭಿಲಾಷ್ ಅತಿಥಿಗಳನ್ನು ಪರಿಚಯಿಸಿದರು ಹಾಗೂ ಪ್ರಥಮ್ ಕಾರ್ಯಕ್ರಮ ನಿರೂಪಿಸಿದರು.