ಮೋಡರ್ನ್ ಮಹಾಭಾರತ ಚಿತ್ರ ನಿರ್ದೇಶಕರಿಗೆ ಸನ್ಮಾನ

ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂದಾಪುರ : ಬೆಂಗಳೂರಿನ ‘ಅಗೋಚರ’ ಮಾಸ ಪತ್ರಿಕೆಯ ಆಶ್ರಯದಲ್ಲಿ ಕೋಟೇಶ್ವರದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ ಮತ್ತು ತಾಲೂಕು ಘಟಕಗಳ ಕುಂದು ಕೊರತೆ – ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮೊಡರ್ನ್ ಮಹಾಭಾರತ ಸಿನಿಮಾ ನಿರ್ದೇಶಕ ಕೋಟೇಶ್ವರ ಶ್ರೀಧರ ಉಡುಪರನ್ನು ಅಗೋಚರ ಪತ್ರಿಕಾ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಪತ್ರಿಕಾ ಬಳಗ ಮತ್ತು ಸಾಹಿತ್ಯ ಪರಿಷತ್ ಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಯುವ ನಿರ್ದೇಶಕ ಶ್ರೀಧರ್ ಉಡುಪ, – ಒಂದು ಸದಭಿರುಚಿಯ ಸಾಂಸಾರಿಕ ಚಿತ್ರ ಮೊಡರ್ನ್ ಮಹಾಭಾರತ. ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಎಲ್ಲರೂ ನೋಡಲೇಬೇಕಾದ, ಉತ್ತಮ ಸಂದೇಶ ನೀಡುವ ಚಿತ್ರ ಇದಾಗಿದೆ. ಈಗಾಗಲೇ ಬಿಡುಗಡೆಗೊಂಡ ಈ ಸಿನಿಮಾದ ಟ್ರೈಲರ್, ಟೀಸರ್, ಪೋಸ್ಟರ್ ಗಳನ್ನು ವೀಕ್ಷಿಸಿದ ಜನರು ಅದ್ಭುತವಾಗಿ ಸ್ಪಂದಿಸಿದ್ದಾರೆ. ಚಿತ್ರದ ಬಗ್ಗೆ ತೀವ್ರ ಕುತೂಹಲ ಹೊಂದಿರುವ ಜನರು ಅದರ ಬಿಡುಗಡೆಯ ದಿನಾಂಕವನ್ನೇ ಚಾತಕ ಪಕ್ಷಿಯಂತೆ ನಿರೀಕ್ಷಿಸುತ್ತಿರುವುದು ನಮ್ಮ ಚಿತ್ರ ತಂಡದ ಗಮನಕ್ಕೆ ಬಂದಿದೆ. ಇದೇ ಫೆಬ್ರವರಿ 26ನೇ ಶುಕ್ರವಾರ ಕೋಟೇಶ್ವರ, ಮಣಿಪಾಲ ಮತ್ತು ಮಂಗಳೂರಿನ ಭಾರತ್ ಸಿನೆಮಾ ಥಿಯೇಟರ್ ಗಳಲ್ಲಿ ಮೊಡರ್ನ್ ಮಹಾಭಾರತ ಸಿನಿಮಾ ಬಿಡುಗಡೆಯಾಗಲಿದೆ. ತಾವೆಲ್ಲರೂ ಮನೆ ಮಂದಿ, ಇಷ್ಟ ಮಿತ್ರರೊಂದಿಗೆ ಚಿತ್ರ ವೀಕ್ಷಿಸಿ ಪ್ರೋತ್ಸಾಹಿಸಿರಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಗೋಚರ ಪತ್ರಿಕಾ ಸಂಪಾದಕ ನಾಗೇಶ್ ಚಡಗ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ಹಿರಿಯ ಸಾಹಿತಿ ಉಪೇಂದ್ರ ಸೋಮಯಾಜಿ, ವಿವಿಧ ತಾಲೂಕು ಸಾಹಿತ್ಯ ಪರಿಷತ್ ಘಟಕ ಪದಾಧಿಕಾರಿಗಳು, ಮೋಡರ್ನ್ ಮಹಾಭಾರತ ಚಿತ್ರ ತಂಡದ ಪ್ರಶಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.