ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಅನುದಾನ ವಿತರಣೆಯಲ್ಲಿ ತಾರತಮ್ಯ ವಿಧಾನಪರಿಷತ್‍ನಲ್ಲಿ ಎಂಎಲ್‍ಸಿ ಇಂಚರ ಗೋವಿಂದರಾಜು ಆರೋಪ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಸೋಮವಾರ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದಿಂದ ಕೋಲಾರ ಜಿಲ್ಲೆಯ ಗಡಿ ತಾಲ್ಲೂಕುಗಳಿಗೆ ಅನುದಾನ ನೀಡಿಕೆಯಲ್ಲಿ ತಾರತಮ್ಯವಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಗಡಿ ಅಭಿವೃದ್ದಿ ಪ್ರಾಧಿಕಾರಕ್ಕೆ ಕಳೆದ 5 ವರ್ಷದ ಆಯವ್ಯಯದಲ್ಲಿ ಒದಗಿಸಿರುವ ಅನುದಾನವೆಷ್ಟು, ಸರ್ಕಾರ ಬಿಡುಗಡೆ ಮಾಡಿರುವ ಅನುದಾನದಲ್ಲಿ ಕಳೆದ 5 ವರ್ಷದಿಂದ ಎಷ್ಟು ಸಂಘ- ಸಂಸ್ಥೆ, ಗಡಿ ಭಾಗದ ಶಾಲೆ, ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಅಭಿವೃದ್ಧಿ ಹಾಗೂ ಇನ್ನಿತರ ಅಭಿವೃದ್ದಿಗೆ ಖರ್ಚು ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಕೋಲಾರ ಜಿಲ್ಲೆಯೂ ರಾಜ್ಯದ ಗಡಿಭಾಗದಲ್ಲಿರುವುದರಿಂದ ಈ ಜಿಲ್ಲೆಗೆ ಗಡಿ ಅಭಿವೃದ್ದಿ ಪ್ರಾಧಿಕಾರದಿಂದ ಕಳೆದ 5 ವರ್ಷದಿಂದ ಎಷ್ಟು ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂಬುದರ ಬಗ್ಗೆ, ಕನ್ನಡ ಮತ್ತು ಸಂಸ್ಕ್ರತಿ ಇಲಾಖಾ ಸಚಿವರನ್ನು ಪ್ರಶ್ನಿಸಿದ್ದು, ಸಚಿವರ ಪರವಾಗಿ ಗೋವಿಂದ ಕಾರಜೋಳ ಉತ್ತರ ನೀಡಿದರು.
ಸಚಿವರು ಮಾಹಿತಿ ನೀಡಿ, ಸರ್ಕಾರ ಕಳೆದ 5 ವರ್ಷದಲ್ಲಿ ರೂ. 177.48 ಕೋಟಿ ರೂಪಾಯಿಗಳ ಅನುದಾನವನ್ನು ಗಡಿ ಅಭಿವೃದ್ದಿ ಪ್ರಾಧಿಕಾರಕ್ಕೆ ಆಯವ್ಯಯದಲ್ಲಿ ಒದಗಿಸಿದ್ದು, ಬಿಡುಗಡೆ ಮಾಡಿರುವ ಅನುದಾನದಲ್ಲಿ ಕಳೆದ 5 ವರ್ಷದಿಂದ ಸಂಘ-ಸಂಸ್ಥೆ, ಗಡಿ ಭಾಗದ ಶಾಲೆ, ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಅಭಿವೃದ್ಧಿ ಹಾಗೂ ಇನ್ನಿತರ ಗಡಿಭಾಗದ ಅಭಿವೃದ್ಧಿಗೆ ಸುಮಾರು ರೂ. 160.44 ಕೋಟಿ ರೂಪಾಯಿ ಬಳಕೆಯಾಗಿದೆ ಎಂದು ತಿಳಿಸಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮ 2010 ರನ್ವಯ 19 ಜಿಲ್ಲೆಯ 52 ಗಡಿ ತಾಲ್ಲೂಕುಗಳನ್ನು ಹಾಗೂ 11 ಹೊಸ ಗಡಿ ತಾಲ್ಲೂಕುಗಳನ್ನು ಒಟ್ಟು 63 ಗಡಿ ತಾಲ್ಲೂಕುಗಳನ್ನು ಗಡಿ ಭಾಗವೆಂದು ಗುರುತಿಸಲಾಗಿದ್ದು, ಇದರೊಂದಿಗೆ ಪಕ್ಕದ ರಾಜ್ಯಗಳಾದ ಗೋವಾ, ಆಂಧ್ರಪ್ರದೇಶ , ತೆಲಂಗಣ, ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯಗಳಲ್ಲಿರುವ ಕನ್ನಡ ಸಂಘ ಸಂಸ್ಥೆಗಳಿಗೆ ಪ್ರಾಧಿಕಾರದಿಂದ ಕಳೆದ 5 ವರ್ಷಗಳಲ್ಲಿ ಒಟ್ಟು ರೂ. 2.18 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಕೋಲಾರ ಜಿಲ್ಲೆಯಲ್ಲಿ ಗಡಿ ವ್ಯಾಪ್ತಿಗೆ ಒಳಪಡುವ ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಬಂಗಾರಪೇಟೆ ಹಾಗೂ ಕೆ.ಜಿ.ಎಫ್ ತಾಲ್ಲೂಕುಗಳಿಗೆ 2016-17 ನೇ ಸಾಲಿನಿಂದ ಇಲ್ಲಿಯವರೆಗೆ, ಶುದ್ಧಕುಡಿಯುವ ನೀರಿನ ಘಟಕ ಸ್ಥಾಪನೆ, ಸಾಂಸ್ಕ್ರತಿಕ ಭವನ, ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಶಾಲಾ ಕೊಠಡಿಗೆ ರೂ. 142 ಲಕ್ಷ ರೂ ನೀಡಿರುವುದಾಗಿ ಸಚಿವರು ಮಾಹಿತಿ ನೀಡಿದರು.


ಸಚಿವರ ಉತ್ತರಕ್ಕೆ ಎಂಎಲ್‍ಸಿ ಆಕ್ರೋಶ


ಇದಕ್ಕೆ ಆಕ್ರೋಶ ವ್ಯಪ್ತಪಡಿಸಿದ ಸದಸ್ಯ ಗೋವಿಂದರಾಜು, ಕೋಲಾರ ಜಿಲ್ಲೆಗೆ ಕಳೆದ ಮೂರು ವರ್ಷದಿಂದ ಯಾವುದೇ ಅನುದಾನ ನೀಡಿಲ್ಲ, ಕೇವಲ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಸಿರುವುದನ್ನು ಹೊರತುಪಡಿಸಿ, ಗಡಿ ಭಾಗದ ಶಾಲೆ, ರಸ್ತೆ, ಕುಡಿಯುವ ನೀರು ಇನ್ನಿತರ ಯಾವುದೇ ಕೆಲಸ ಇದುವರೆಗೂ ಆಗಿಲ್ಲ ಎಂದು ದೂರಿದರು.
ಕೋಲಾರ ಜಿಲ್ಲೆ ಅತೀ ಹಿಂದುಳಿದ ಪ್ರದೇಶ, ಇಲ್ಲಿ ಅತಿ ಹೆಚ್ಚಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ಹಾಗೂ ಪರಭಾಷೆಯ ಜನರೇ ಹೆಚ್ಚಾಗಿದ್ದು, ಕಡು ಬಡತನದಿಂದ ಜೀವನ ಸಾಗಿಸುತ್ತಿರುವ ಇಂತಹ ಜಿಲ್ಲೆಯನ್ನು ಸರ್ಕಾರ ಕಡೆಗಣಿಸಿದೆ, ಈ ಕೂಡಲೇ ಸರ್ಕಾರ ಈ ಜಿಲ್ಲೆಗೆ ನ್ಯಾಯವನ್ನು ಒದಗಿಸಿಸುವ ದೃಷ್ಠಿಯಿಂದ, ಕೋಲಾರ ಜಿಲ್ಲೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ, ಗಡಿ ತಾಲ್ಲೂಕು ಅಭಿವೃದ್ಧಿಗೆ ಸ್ಪಂದಿಸಬೇಕೆಂದು ಆಗ್ರಹಿಸಿದರು.
ಸಚಿವರು ಉತ್ತರಿಸಿ ಹೆಚ್ಚಿನ ಅನುದಾನವನ್ನು ಅಗತ್ಯಕ್ಕೆ ತಕ್ಕಂತೆ ಬಿಡುಗಡೆ ಮಾಡುವ ಭರವಸೆ ನೀಡಿದರು.