ಲೋಕೋಪಯೋಗಿ ಇಇ ಕಚೇರಿಯಲ್ಲಿ ಗುತ್ತಿಗೆದಾರರ ಸಭೆಯಲ್ಲಿ ಶಾಸಕರ ತಾಕೀತು – ರಸ್ತೆಅಭಿವೃದ್ದಿ ಕಾಮಗಾರಿ ಡಿ.15ರೊಳಗೆ ಮುಗಿಸಿ,ವಿಳಂಬವಾದರೆ ಸಹಿಸಲ್ಲ-ರೂಪಕಲಾ

ಕೋಲಾರ:- ಕೆಜಿಎಫ್ ತಾಲ್ಲೂಕಿನ ರಸ್ತೆ ಅಭಿವೃದ್ದಿಗಾಗಿ ಸರ್ಕಾರದ ಮೇಲೆ ಒತ್ತಡ ಹಾಕಿ ಮುಖ್ಯಮಂತ್ರಿಗಳಿಂದ ರಸ್ತೆ ಅಭಿವೃದ್ದಿಗಾಗಿ 15 ಕೋಟಿ ರೂ ವಿಶೇಷ ಅನುದಾನ ತಂದಿದ್ದೇನೆ, ಹಣ ಬಿಡುಗಡೆ ವಿಳಂಬದ ನೆಪವೊಡ್ಡಿ ಕಾಮಗಾರಿ ತಡವಾದರೆ ಸಹಿಸಲು ಸಾಧ್ಯವಿಲ್ಲ ಡಿಸೆಂಬರ್ 15 ರೊಳಗೆ ಮುಗಿಸಬೇಕು ಎಂದು ಗುತ್ತಿಗೆದಾರರಿಗೆ ಶಾಸಕಿ ರೂಪಕಲಾ ತಾಕೀತು ಮಾಡಿದರು.
ನಗರದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ಈ ಸಂಬಂಧ 15 ಕೋಟಿರೂಗಳ ರಸ್ತೆ ಅಭಿವೃದ್ದಿ ಕಾಮಗಾರಿಗಳ ಟೆಂಡರ್ ಪಡೆದುಕೊಂಡಿರುವ ಗುತ್ತಿಗೆದಾರರ ಸಭೆ ನಡೆಸಿದ ಅವರು, ಹಳೆ ಕಾಮಗಾರಿಯ ಹಣ ಬಂದಿಲ್ಲ ಎಂಬ ಕೆಲವು ಗುತ್ತಿಗೆದಾರರ ಹೇಳಿಕೆಗೆ ಗರಂ ಆಗಿ, ಅಂತಹವರು ಏಕೆ ಈ ಬಾರಿ ಟೆಂಡರ್‍ನಲ್ಲಿ ಭಾಗವಹಿಸಿದಿರಿ ಎಂದು ಪ್ರಶ್ನಿಸಿದರು.
ನಿಮಗೆ ಸರ್ಕಾರದಿಂದ ಬಿಡುಗಡೆಯಾಗಬೇಕಿರುವ ಅನುದಾನ ವಿಳಂಬವಾಗಿದ್ದರೆ ತಿಳಿಸಿ ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ, ಪ್ರಧಾನ ಕಾರ್ಯದರ್ಶಿ ಕೃಷ್ಣೇಗೌಡರಿಗೆ ಮನವಿ ಮಾಡಿ ಹಣ ಬಿಡುಗಡೆ ಮಾಡಿಸುತ್ತೇನೆ ಆದರೆ ಕಾಮಗಾರಿ ವಿಳಂಬವಾದರೆ ಮಾತ್ರ ಸಹಿಸುವುದಿಲ್ಲ ಎಂದರು.
ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ರಸ್ತೆ ಅಭಿವೃದ್ದಿಗೆ 15 ಕೋಟಿ ರೂ ವಿಶೇಷ ಅನುದಾನ ತಂದಿದ್ದೇನೆ, ಗುತ್ತಿಗೆದಾರರು ಕಾಮಗಾರಿ ಅರ್ಧ ಮುಗಿಸಿ ನಂತರ ಬಿಟ್ಟು ಹೋದರೆ ಜಲ್ಲಿ ಕಲ್ಲು ತುಂಬಿದ ರಸ್ತೆಯಲ್ಲಿ ಓಡಾಡುವ, ಬಿದ್ದು ತೊಂದರೆಗೀಡಾಗುವ ನಾಗರೀಕರಿಗೆ ನಾನು ಏನು ಉತ್ತರ ಹೇಳಬೇಕು ಹೇಳಿ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ರಸ್ತೆ ಕಾಮಗಾರಿಗಳ 1400 ಕೋಟಿ ರೂ ಬಾಕಿ ಹಣದಲ್ಲಿ 88 ಕೋಟಿ ಬಿಡುಗಡೆ ಮಾಡಿದೆ, ನಾವು ಕೆಲಸ ಮಾಡಲು ಕಷ್ಟವಾಗುತ್ತಿದೆ ಎಂದು ಗುತ್ತಿಗೆದಾರರು ತಿಳಿಸಿದಾಗ ಇದು ರಾಜ್ಯದ ಸಮಸ್ಯೆ, ಅದನ್ನು ಕೆಜಿಎಫ್ ವಿಷಯದಲ್ಲಿ ತರಬೇಡಿ ಎಂದರು.


ನಾನು ರಸ್ತೆ ಅಭಿವೃದ್ದಿಗಾಗಿ ಮಂಜೂರು ಮಾಡಿಸಿರುವ ಅನುದಾನದಲ್ಲಿ ಹಣ ಬಿಡುಗಡೆ ವಿಳಂಬವಾದರೆ ತಿಳಿಸಿ ನಾನೇ ಖುದ್ದು ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮಾತನಾಡಿ ತಕ್ಷಣ ಬಿಡುಗಡೆ ಮಾಡಿಸುವೆ, ಬೇರಾವುದೋ ಕಾಮಗಾರಿಯ ಬಿಲ್ಲು ಆಗುತ್ತಿಲ್ಲ ಎಂದು ಕೆಜಿಎಫ್‍ನಲ್ಲಿ ಕೆಲಸ ನಿಲ್ಲಿಸಿದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಇಂತಹ ನೆಪಗಳನ್ನು ಹೇಳದಿರಿ, ಕೆಜಿಎಫ್‍ನಲ್ಲಿ ನೀವು ಪಡೆದಿರುವ ಕಾಮಗಾರಿಯ ಹಣ ಬಿಡುಗಡೆ ತಡವಾದರೆ ತಿಳಿಸಿದರು.
ವಿವಿಧ ಯೋಜನೆಗಳಡಿ ಸುಮಾರು 35 ಕೋಟಿ ರೂ ಮಂಜೂರು ಮಾಡಿಸಿದ್ದು ಲೋಕೋಪಯೋಗಿ ಇಲಾಖೆ ಅಡಿಯಲ್ಲಿ 15 ಕೋಟಿ ರೂಗಳ ರಸ್ತೆ ಕಾಮಗಾರಿ ಶೀಘ್ರ ಆರಂಭಿಸಲು ಸೂಚಿಸಿದ್ದೇನೆ ಎಂದರು.
ಕೆಜಿಎಫ್ ಹೊಸ ತಾಲ್ಲೂಕಾಗಿದ್ದು, ಎಷ್ಟು ಶೀಘ್ರವೋ ಅಷ್ಟು ಬೇಗ ಅಭಿವೃದ್ದಿ ಕಾರ್ಯ ನಡೆಯಬೇಕು ಎಂದ ಅವರು, ಮಾದರಿ ತಾಲ್ಲೂಕಾಗಿಸಲು ತಮ್ಮ ಪ್ರಯತ್ನಕ್ಕೆ ಸ್ಪಂದಿಸಿ ಎಂದು ಕೋರಿದರು.
ತಮ್ಮ ಪ್ರಯತ್ನದ ಫಲವಾಗಿ ಲೋಕೋಪಯೋಗಿ ಇಲಾಖೆ ಮೂಲಕ ರಸ್ತೆಗಳ ಅಭಿವೃದ್ದಿಗೆ 15 ಕೋಟಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ 6 ಕೋಟಿ ರೂ, ಮತ್ತು ಎಸ್‍ಹೆಚ್‍ಡಿಪಿ ಯೋಜನೆಯಡಿ ನಗರಭಾಗದ ರಸ್ತೆಗಳ ಅಭಿವೃದ್ದಿಗೆ 10 ಕೋಟಿ ಬಿಡುಗಡೆಯಾಗಿದ್ದು ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಕೆಜಿಎಫ್ ನಗರದ ರಾಬರ್ಟ್‍ಸನ್ ಪೇಟೆಯಿಂದ ರಾಮಕುಪ್ಪಂ ವರೆಗಿನ ರಸ್ತೆ ಅಭಿವೃದ್ದಿಗೆ 4 ಕೋಟಿ ರೂ ಮೀಸಲಿಡಲಾಗಿದೆ, ಬೇತಮಂಗಲ ದಿಂದ ವೆಂಕಟಗಿರಿಕೋಟೆ ರಾಷ್ಟ್ರೀಯ ಹೆದ್ದಾರಿ 95ಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿಗೆ 1 ಕೋಟಿ ರೂ ಬಿಡುಗಡೆಯಾಗಿದ್ದು, ಕೆಲಸ ಬೇಗ ಮುಗಿಸಿ ಎಂದರು.
ಇದಲ್ಲದೇ ಕೆಜಿಎಫ್‍ನಲ್ಲಿ ದ್ವಿಪಥ ರಸ್ತೆಗೆ 4 ಕೋಟಿರೂ ಬಿಡುಗಡೆ ಮಾಡಿಸಲಾಗಿದೆ ಎಂದ ಅವರು, ಬೇತಮಂಗಲ-ಕ್ಯಾಸಂಬಳ್ಳಿ ರಸ್ತೆಗೆ 2.30 ಕೋಟಿ ರೂ ಹಾಗೂ ಒಡೆನಿಯಲ್ ರಸ್ತೆ ಸಂಪರ್ಕಕ್ಕೆ 70 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ ಎಂದರು.

ಮಿನಿವಿಧಾನಸೌಧ ಬೇಗ ಹಸ್ತಂತರಿಸಿ


ಈಗಾಗಲೇ ಕೆಜಿಎಫ್ ನಗರದಲ್ಲಿ ಮಿನಿವಿಧಾನಸೌಧ ಕಾಮಗಾರಿ ಮುಗಿದಿದ್ದು, ಕಾಂಪೌಂಡ್ ಹಾಗೂ ಸಿಸಿ ಕ್ಯಾಮರಾ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಕಂದಾಯ ಸಚಿವ ಅಶೋಕ್ ಅವರು, ಉದ್ಘಾಟನೆಗೆ ದಿನಾಂಕ ಕೇಳುತ್ತಿದ್ದಾರೆ, ಬೇಗ ಹಸ್ತಂತರಿಸಲು ಕ್ರಮವಹಿಸಿ, ತಿಂಗಳಾಂತ್ಯಕ್ಕೆ ಉದ್ಘಾಟನೆ ಮುಗಿಸಬೇಕಿದೆ ಎಂದು ಲೋಕೋಪಯೋಗಿ ಇಇ ಅವರಿಗೆ ಶಾಸಕಿ ರೂಪಕಲಾ ಮನವಿ ಮಾಡಿದರು.
10 ಕೋಟಿ ರೂ ಖರ್ಚು ಮಾಡಿ ನಿರ್ಮಿಸಿದ ಮಿನಿ ವಿಧಾನಸೌಧಕ್ಕೆ ಕಾಂಪೌಂಡ್ ಬೇಡವೇ ಎಂದು ಪ್ರಶ್ನಿಸಿದ ಅವರು, ಈ ಸಂಬಂಧ ಡಿಸಿಗೆ ಪ್ರಸ್ತಾವನೆ ಸಲ್ಲಿಸಿ ನನಗೂ ಒಂದು ಪ್ರತಿ ನೀಡಿ ಮಾತನಾಡುವೆ ಎಂದು ಸಲಹೆ ನೀಡಿದರು.
ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಆರ್.ಚಂದ್ರಶೇಖರ್, ಕಾಮಗಾರಿ ಒಂದು ಬಾರಿ ಆರಂಭಿಸಿದರೆ ಮುಗಿಸಿಯೇ ಅಲ್ಲಿಂದ ಹೋಗಬೇಕು ಎಂಬುದು ಶಾಸಕರ ಆಗ್ರಹವಾಗಿದ್ದು, ಅದರಂತೆ ಗುತ್ತಿಗೆದಾರರು ಕ್ರಮವಹಿಸಿ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಎಇಇ ರಾಜಶೇಖರ್, ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿ.ಕೃಷ್ಣಾರೆಡ್ಡಿ, ಗುತ್ತಿಗೆದಾರರಾದ ಯಲವಾರ ಸೊಣ್ಣೇಗೌಡ, ವೆಂಕಟರಾಮೇಗೌಡ, ಕೆ.ಎಂ.ಮುರಳಿ, ವರದಪ್ಪ, ಶಿವಾರೆಡ್ಡಿ, ಮಂಜುನಾಥ್, ಮುನಿರೆಡ್ಡಿ ಮತ್ತಿತರರಿದ್ದರು.