ಕೋಲಾರ / ಜುಲೈ 20 : ಶಾಶ್ಚತ ನೀರಾವರಿ ಹೋರಾಟ ಸಮಿತಿ ವತಿಯಿಂದ ಕೋಲಾರ ನಗರದ ನೂತನ ಬಸ್ ನಿಲ್ದಾಣದ ಬಳಿ ಜಿಲ್ಲೆಯ ಶಾಸಕರುಗಳ ಮುಖವಾಡ ಧರಿಸಿ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿ ಮಾಡಲು ಒತ್ತಾಯಿಸಲಾಯಿತು.
ಜಿಲ್ಲೆಯ ಎಲ್ಲಾ ಶಾಸಕರುಗಳಾದ ಕೋಲಾರ ಶಾಸಕ ಕೊತ್ತೂರು ಜಿ ಮಂಜುನಾಥ್, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮಾಲೂರು ಶಾಸಕ ಕೆ.ವೈ. ನಂಜೇಗೌಡ, ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್, ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್, ವಿಧಾನಪರಿಷತ್ ಸದಸ್ಯರುಗಳಾದ ನಜೀರ್ ಅಹಮದ್, ಎಂ.ಎಲ್.ಅನಿಲ್ ಕುಮಾರ್, ಇಂಚರ ಗೋವಿಂದರಾಜು, ಡಿ.ಟಿ.ಶ್ರೀನಿವಾಸ್, ಪಕ್ಷಾತೀತವಾಗಿ ಒಗ್ಗಟ್ಟಾಗಿ ಕೋಲಾರ ಜಿಲ್ಲೆಯ ಶಾಶ್ವತ ನೀರಾವರಿ ಯೋಜನೆಗಳ ಬಗ್ಗೆ ವಿಧಾನ ಪರಿಷತ್ ಮತ್ತು ವಿಧಾನಸಭೆ ಅಧಿವೇಶನದಲ್ಲಿ ಧ್ವನಿ ಎತ್ತಬೇಕು. ಹಾಗೂ ಸರ್ಕಾರದ ಮೇಲೆ ಒತ್ತಡ ತಂದು ಶುದ್ಧ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ನಲವತ್ತು ವರ್ಷಗಳಿಂದ ಶಾಶ್ವತ ನೀರಾವರಿಗಾಗಿ ಹೋರಾಟಗಳು ನಡೆಯುತ್ತಿದ್ದರೂ ಪರಿಹಾರ ಸಿಕ್ಕಿಲ್ಲ. ಆಳಿದ ಎಲ್ಲಾ ಸರ್ಕಾರಗಳು 2-3 ವರ್ಷಗಳಲ್ಲಿ ನೀರು ಹರಿಸುವ ಭರವಸೆ ಕೊಟ್ಟರೂ ನೀರು ಮಾತ್ರ ಹರಿಯಲಿಲ್ಲ. ಮೂರು ಜಿಲ್ಲೆಗಳಲ್ಲಿ 5400 ಕೆರೆಗಳಿದ್ದು, ರೈತರ ನೀರಿನ ಬವಣೆ ತಪ್ಪಲಿಲ್ಲ. ಅಂತರ್ಜಲ ಪಾತಾಳ ಸೇರಿದ್ದು, 1800 ಅಡಿ ಕೊಳವೆ ಬಾವಿ ಕೊರೆಸಿ ಲಕ್ಷಾಂತರ ರೂಪಾಯಿ ರೈತರ ಬೆವರಿನ ಹಣ ಮಣ್ಣುಪಾಲಗುತ್ತಿದೆ. ಆಳಾದ ಕೊಳವೆ ಬಾವಿಗಳಿಂದ ಸಿಗುತ್ತಿರುವ ನೀರಿನಲ್ಲಿ ಪ್ಲೋರೈಡ್ ಮತ್ತು ನೈಟ್ರೈಡ್ನಿಂದ ಕೂಡಿದ ನೀರನ್ನು ಕುಡಿದು ನಾಗರೀಕರು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದರೆ ಇತ್ತೀಚಿಗೆ ಕುಡಿಯುವ ಕೊಳವೆ ಬಾವಿಗಳಲ್ಲಿ ಅಪಾಯಕಾರಿ ಯುರೇನಿಯಂ ಅಂಶಗಳು ಪತ್ತೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ನಾಗರೀಕರು ಮತ್ತಷ್ಟು ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಎತ್ತಿನಹೊಳೆ, ಕೆಸಿವ್ಯಾಲಿ ಹೆಚ್.ಎನ್ ವ್ಯಾಲಿ ಯೋಜನೆಗಳಿಗೆ ಜ್ಯೋತುಬಿದ್ದು, ಸಮಗ್ರವಾದ ಶಾಶ್ವತ ನೀರಾವರಿ ಯೋಜನೆಗಳ ಬಗ್ಗೆ ಮರೆತು ಹೋಗಿದ್ದಾರೆ. ಎತ್ತಿನಹೊಳೆ ನೀರು ನಮ್ಮ ಭಾಗಕ್ಕೆ ಹರಿಯುವುದಿಲ್ಲ ಎಂದು ಗೊತ್ತಿದ್ದರೂ ಸಾವಿರಾರು ಕೋಟಿ ಸಾರ್ವಜನಿಕರ ತೆರಿಗೆ ಹಣ ದುಂದು ವೆಚ್ಚ ಮಾಡುತ್ತಿದ್ದಾರೆ. ಕೆಸಿ ವ್ಯಾಲಿ ಹೆಚ್ಎನ್ ವ್ಯಾಲಿ ನೀರನ್ನು 3ನೇ ಹಂತದ ಶುದ್ಧೀಕರಣಕ್ಕೆ ಒಳಪಡಿಸದಿದ್ದರೆ ನಮ್ಮ ಕೆರೆಗಳು ನಾಶವಾಗುವುದರ ಜೊತೆಗೆ ಅಂತರ್ಜಲ ವಿಶಪೂರಿತವಾಗುತ್ತದೆ ಆಗಾಗಿ 3ನೇ ಹಂತದ ಶುದ್ದೀಕರಣ ಕಡ್ಡಾಯವಾಗಿ ಮಾಡಬೇಕು. ಅವಿಭಾಜಿತ ಕೋಲಾರ ಚಿಕ್ಕಬಳ್ಳಾಪುರ ಗಡಿ ಭಾಗದ ವರೆಗೂ ಆಂಧ್ರದ ಕೃಷ್ಣಾ ನದಿ ನೀರು ಹರಿದು ಬಂದಿದ್ದು, ನಮ್ಮ ಪಾಲಿನ ನೀರನ್ನು ಹರಿಸಲು ಸರ್ಕಾರಗಳು ವಿಫಲವಾಗಿವೆ.
ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಗಳು ಜಾರಿ ಮಾಡಿದಲ್ಲಿ ನೂರಕ್ಕೆ ನೂರು ಸ್ವಯಂ ಉದ್ಯೋಗಗಳು ಸೃಷ್ಠಿಯಾಗುತ್ತವೆ. ಹಾಗೂ ವಲಸೆ ಹೋಗುವುದು ತಪ್ಪುತ್ತದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರಾದ ಆಂಜನೇಯರೆಡ್ಡಿ, ಹೊಳಲಿ ಪ್ರಕಾಶ್, ವಿ.ಕೆ.ರಾಜೇಶ್ ಎಲ್ಲಾ ಪ್ರಗತಿ ಪರ ಸಂಘಟನೆಗಳ ಮುಖಂಡರುಗಳಾದ ಕಲ್ವಮಂಜಲಿ ರಾಮುಶಿವಣ್ಣ, ಜಿ.ನಾರಾಯಣಸ್ವಾಮಿ, ನಾರಾಯಣಗೌಡ, ಚಂಬೆ ರಾಜೇಶ್, ಕನ್ನಡಮಿತ್ರ ವೆಂಕಟಪ್ಪ, ಕೋಟಿಗಾನಹಳ್ಳಿ ಗಣೇಶ್ಗೌಡ, ಶೇಷಾದ್ರಿ, ಕೆ.ಸಿ.ಸಂತೋಷ್, ಚಿನ್ನಪ್ಪರೆಡ್ಡಿ, ಯುವಶಕ್ತಿ ಸುಬ್ಬು, ಅಮ್ಮಯ್ಯಮ್ಮ, ಲಕ್ಷ್ಮಿ, ಸುಮಾ, ರತ್ನಮ್ಮ, ನಾಗರತ್ನಮ್ಮ, ಸುಗಟೂರು ಶೋಭಾ, ಜಯಂತಿ ಮುಂತಾದವರು ಭಾಗವಹಿಸಿದ್ದರು.