

ಕೋಲಾರ:- ಕೆ.ಜಿ.ಎಫ್ ನಗರದಲ್ಲಿ ಬಿಇಎಂಎಲ್ ಕಾರ್ಖಾನೆಯಿಂದ ಸರ್ಕಾರ ವಾಪಸ್ಸು ಪಡೆದಿರುವ 973.24 ಎಕರೆ ಬಳಕೆಯಾಗದ ಭೂಮಿಯನ್ನು ಕೆಐಡಿಬಿಗೆ ಹಸ್ತಂತರಿಸುವ ಪ್ರಕ್ರಿಯೆ ಮುಗಿಸಿ ಕೈಗಾರಿಕಾ ಟೌನ್‍ಷಿಫ್ ಸ್ಥಾಪನೆಗೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕಿ ರೂಪಕಲಾ ಶಶಿಧರ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ವಿಧಾನಸಭೆಯಲ್ಲಿ ಶುಕ್ರವಾರ ಒಟ್ಟು 1870 ಎಕರೆ ಜಮೀನಿನ ಪೈಕಿ ಬಿಎಎಂಎಲ್ ಬಳಸಿಕೊಳ್ಳದ 973.24 ಎಕರೆ ಜಮೀನನ್ನು ಕಂದಾಯ ಇಲಾಖೆ ವಶದಿಂದ ಕೈಗಾರಿಕಾ ಇಲಾಖೆ, ಕೆಐಡಿಬಿಗೆ ಹಸ್ತಂತರಿಸುವ ಪ್ರಕ್ರಿಯೆ ವಿಳಂಬವಾಗಿರುವ ಕುರಿತು ಶಾಸಕಿ ರೂಪಕಲಾ ಸರ್ಕಾರದ ಗಮನ ಸೆಳೆದ ಹಿನ್ನಲೆಯಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು ಈ ಭರವಸೆ ನೀಡಿದರು.
ಸದನದಲ್ಲಿ ಸರ್ಕಾರದ ಗಮನ ಸೆಳೆದು ಮಾತನಾಡಿದ ಶಾಸಕಿ ರೂಪಕಲಾ, ಬೃಹತ್,ಮಧ್ಯಮ ಕೈಗಾರಿಕಾ ಸಚಿವ ನಿರಾಣಿ ಅವರು ಅನುಭವಿಯಾಗಿದ್ದಾರೆ, ಸ್ವತಃ ಉದ್ಯಮಿಯಾಗಿದ್ದಾರೆ, ಕೆಜಿಎಫ್ ನಗರಕ್ಕೆ ಪ್ರವಾಸ ಬಂದಿದ್ದಾಗ ಜಮೀನು ಪರಿಶೀಲಿಸಿದ ಸಂದರ್ಭದಲ್ಲಿ ಕೈಗಾರಿಕಾ ವಲಯ ಸ್ಥಾಪನೆಗೆ ಸೂಕ್ತ ಜಾಗ ಎಂದು ತಿಳಿಸಿ ಭರವಸೆಯನ್ನೂ ನೀಡಿದ್ದಾರೆ, ಕಳೆದ 2021ರ ಫೆ.18 ಹಾಗೂ ನ.30 ರಂದು ಸಭೆ ನಡೆಸಿ ಸದರಿ ಜಮೀನನ್ನು ಕೆಐಡಿಬಿಗೆ ಪಡೆದುಕೊಳ್ಳುವ ಕುರಿತ ತೀರ್ಮಾನವನ್ನು ಕೈಗೊಂಡಿದ್ದಾರೆ ಎಂದರು.
3 ವರ್ಷಗಳಿಂದ ನೆನೆಗುದಿಗೆ-ಬೇಸರ
ಕೈಗಾರಿಕಾ ವಲಯ ಸ್ಥಾಪನೆ ಸಂಬಂಧ ಬೆಮೆಲ್‍ನ ಈ ಜಾಗವನ್ನು ಕಂದಾಯ ಇಲಾಖೆಯಿಂದ ಕೆಐಡಿಬಿಗೆ ಪಡೆದುಕೊಳ್ಳುವ ಕಾರ್ಯಕ್ಕೆ ಸತತ ಒತ್ತಡ ಹಾಕುತ್ತಿದ್ದರೂ 3 ವರ್ಷಗಳಿಂದ ಸಾಧ್ಯವಾಗಿಲ್ಲ, ನನ್ನ ಕ್ಷೇತ್ರದ ಬಗ್ಗೆ ಈ ನಿರ್ಲಕ್ಷ್ಯ ಏಕೆ? ಅಲ್ಲಿ ಬಡವರಿದ್ದಾರೆ, ಗಣಿ ಮುಚ್ಚಿದ ನಂತರ ಜೀವನ ನಡೆಸಲಾಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ, ಕೋವಿಡ್ ಸಂದರ್ಭದಲ್ಲಿ ಕೆಲಸಕ್ಕಾಗಿ ಅಲೆದಾಟ ನಡೆಸಿ ನೋವುಂಡಿದ್ದಾರೆ ಎಂದರು.
ನನ್ನ ಕ್ಷೇತ್ರದ ಜನ ಕಷ್ಟದ ಬದುಕು ನಡೆಸುತ್ತಿದ್ದಾರೆ, ಅವರ ನೋವಿನ ಪರಿಚಯವನ್ನು ಸಚಿವರು, ಸಿಎಂ ಅವರಿಗೂ ಅರ್ಥ ಮಾಡಿಸುವ ಕೆಲಸ ಮಾಡಿದ್ದೇನೆ ಆದರೂ ಇನ್ನೂ ಸ್ಪಂದನೆ ಸಿಗಲಿಲ್ಲ, ಕೂಡಲೇ ಕೈಗಾರಿಕಾ ವಲಯ ಘೋಷಿಸಿ ಎಂದು ರೂಪಕಲಾ ಮನವಿ ಮಾಡಿದರು.
ರಾಜ್ಯ ಸರ್ಕಾರ ಹಾಗೂ ಕೈಗಾರಿಕಾ ಸಚಿವರು ಮಾತೆತ್ತಿದರೆ 80 ಸಾವಿರ ಎಕರೆ ಕೈಗಾರಿಕಾ ಪ್ರದೇಶಕ್ಕೆ ಜಮೀನು ಹಸ್ತಂತರ ಹಾಗೂ ಬೃಹತ್ ಕೈಗಾರಿಕೆಗಳ ಸ್ಥಾಪನೆಯ ಮಾತನಾಡುತ್ತಾರೆ, ನನ್ನ ಕ್ಷೇತ್ರ ಬೆಂಗಳೂರಿನಿಂದ ಕೇವಲ 70 ಕಿಮೀ ದೂರದಲ್ಲಿದೆ, ಕೋಟ್ಯಾಂತರ ರೂ ಬೆಲೆ ಬಾಳುವ 873 ಎಕರೆ ಜಮೀನಿದೆ, ಅಲ್ಲಿ ಕೈಗಾರಿಕಾ ವಲಯ ಸ್ಥಾಪಿಸಿದರೆ 50 ಸಾವಿರದಿಂದ 1 ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿಯಾಗುತ್ತದೆ ಇಷ್ಟಾದರೂ ಈ ವಿಳಂಬ ಧೋರಣೆ ಏಕೆ ಎಂದು ಪ್ರಶ್ನಿಸಿದರು.
ಸಚಿವ ನಿರಾಣಿ ಹೇಳಿಕೆಗೆ ಪ್ರತಿರೋಧ

ಕೈಗಾರಿಕಾ ಸಚಿವ ನಿರಾಣಿ ಇದಕ್ಕೂ ಮುನ್ನಾ ಮಾತನಾಡಿ,ಕಳೆದ 18 ತಿಂಗಳಿಂದ ಪತ್ರ ವ್ಯವಹಾರ ನಡೆಸಿದ್ದರೂ, ಕಂದಾಯ ಇಲಾಖೆಯಿಂದ ಕೈಗಾರಿಕೆ ಇಲಾಖೆಗೆ ಜಮೀನು ಹಸ್ತಂತರವಾಗಿಲ್ಲ, ಈ ಕಾರ್ಯ ಮುಗಿದ ಕೂಡಲೇ ಕೈಗಾರಿಕಾ ವಲಯ ಮಾಡುವ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡುತ್ತಿದ್ದಂತೆ ಶಾಸಕಿ ರೂಪಕಲಾ ಶಶಿಧರ್ ಪ್ರತಿರೋಧ ಒಡ್ಡಿದರು ಅವರಿಗೆ ಶಾಸಕ ಕೆ.ಶ್ರೀನಿವಾಸಗೌಡ, ಮಾಜಿ ಸಚಿವ ದೇಶಪಾಂಡೆ ಬೆಂಬಲ ವ್ಯಕ್ತಪಡಿಸಿದರು.
ಮಾಜಿ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ನಾನು ಕೈಗಾರಿಕಾ ಸಚಿವನಾಗಿದ್ದಾಗ ಸಾವಿರಾರು ಎಕರೆ ಸರ್ಕಾರಿ ಜಾಗ ಕೆಐಡಿಬಿಗೆ ಹಸ್ತಂತರಿಸಿದ್ದೇನೆ, ಬೆಂಗಳೂರು ಸುತ್ತಮುತ್ತ ಕೈಗಾರಿಕೆ ಸ್ಥಾಪಿಸಲು ಜಮೀನು ಒದಗಿಸುವುದು ಕಷ್ಟ, ಅಷ್ಟೊಂದು ಹಣ ನೀಡಿ ಉದ್ಯಮಿಗಳು ಜಾಗ ಖರೀದಿ ಮಾಡಲು ಮುಂದೆ ಬರಲ್ಲ, ಕೆಜಿಎಫ್ ದೂರವಿಲ್ಲ, ಅಲ್ಲಿ ಸರ್ಕಾರಿ ಜಾಗವಿದೆ, ಕಂದಾಯ ಇಲಾಖೆಯೂ ಕೈಗಾರಿಕಾ ಇಲಾಖೆಯ ಸಹೋದರನಿದ್ದಂತೆ ಸಿಎಂ ಮಧ್ಯೆ ಪ್ರವೇಶಿಸಿ ಕೈಗಾರಿಕೆ ವಲಯ ಮಂಜೂರು ಮಾಡಿ ಎಂದರು. ಶಾಸಕ ಕೆ.ಶ್ರೀನಿವಾಸಗೌಡರು, ಜಮೀನು ಹಸ್ತಂತರಕ್ಕೆ ಎಷ್ಟುದಿನ ಬೇಕು ಎಂದು ಪ್ರಶ್ನಿಸುತ್ತಿದ್ದಾರೆ ಉತ್ತರ ನೀಡಿ ಎಂದು ನಿರಾಣಿಯವರನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಭಾಧ್ಯಕ್ಷ ಕಾಗೇರಿ ಅವರು, ಸಿಎಂ ಉತ್ತರ ನೀಡುವಂತೆ ಸೂಚಿಸಿದಾಗ ಸಿಎಂ. ಶಾಸಕರ ಮನವಿಗೆ ಸ್ಪಂದಿಸಿ ಕೈಗಾರಿಕಾ ವಲಯ ಸ್ಥಾಪನೆ, ಜಮೀನು ಹಸ್ಥಂತರ ಪ್ರಕ್ರಿಯೆಗೆ ಕೂಡಲೇ ಅಗತ್ಯಕ್ರಮ ವಹಿಸುವ ಭರವಸೆ ನೀಡಿದರು.
ಒಟ್ಟಾರೆ ಸರ್ಕಾರದ ಮೇಲೆ ಒತ್ತಡ ತಂದು ಮುಖ್ಯಮಂತ್ರಿಗಳಿಂದಲೇ ಕೈಗಾರಿಕಾ ವಲಯ ಮಂಜೂರಿಗೆ ಸದನದಲ್ಲಿ ಒಪ್ಪಿಗೆ ಪಡೆಯುವಲ್ಲಿ ಶಾಸಕಿ ರೂಪಕಲಾ ಯಶಸ್ವಿಯಾದರು.