ಮಂಜೂರಾದ ಕಾಮಗಾರಿಗಳು ಶೀಘ್ರ ಆರಂಭಿಸಲು ಶಾಸಕಿ ರೂಪಕಲಾ ಶಶಿಧರ್ ಲೋಕೋಪಯೋಗಿ ಇಲಾಖೆಗೆ ಮನವಿ

ಕೋಲಾರ:- ಕೆಜಿಎಫ್ ತಾಲ್ಲೂಕಿನ ಸಮಗ್ರ ಅಭಿವೃದ್ದಿಗಾಗಿ ಕಂಕಣ ತೊಟ್ಟಿರುವ ತಮ್ಮ ಪ್ರಯತ್ನದಿಂದ ಈಗಾಗಲೇ ವಿವಿಧ ಯೋಜನೆಗಳಡಿ ಸುಮಾರು 35 ಕೋಟಿ ರೂ ಮಂಜೂರು ಮಾಡಿಸಿದ್ದು ಲೋಕೋಪಯೋಗಿ ಇಲಾಖೆ ಅಡಿಯಲ್ಲಿ 15 ಕೋಟಿ ರೂಗಳ ರಸ್ತೆ ಕಾಮಗಾರಿ ಶೀಘ್ರ ಆರಂಭಿಸಲು ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಮನವಿ ಮಾಡಿದರು.
ನಗರದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಚಂದ್ರಶೇಖರ್ ಅವರನ್ನು ಖುದ್ದು ಭೇಟಿಯಾಗಿ ಮುಖ್ಯಮಂತ್ರಿಗಳು ಅನುಮೋದನೆ ನೀಡಿರುವ 15 ಕೋಟಿ ರೂಗಳ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಿದ್ದು, ಕೂಡಲೇ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಿಸುವಂತೆ ತಾಕೀತು ಮಾಡಿದರು.
ಕೆಜಿಎಫ್ ಹೊಸ ತಾಲ್ಲೂಕಾಗಿದ್ದು, ಎಷ್ಟು ಶೀಘ್ರವೋ ಅಷ್ಟು ಬೇಗ ಅಭಿವೃದ್ದಿ ಕಾರ್ಯ ನಡೆಯಬೇಕು ಎಂದ ಅವರು, ಮಾದರಿ ತಾಲ್ಲೂಕಾಗಿಸಲು ತಮ್ಮ ಪ್ರಯತ್ನಕ್ಕೆ ಸ್ಪಂದಿಸಿ ಎಂದು ಕೋರಿದರು.
ತಮ್ಮ ಪ್ರಯತ್ನದ ಫಲವಾಗಿ ಲೋಕೋಪಯೋಗಿ ಇಲಾಖೆ ಮೂಲಕ ರಸ್ತೆಗಳ ಅಭಿವೃದ್ದಿಗೆ 15 ಕೋಟಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ 6 ಕೋಟಿ ರೂ, ಮತ್ತು ಎಸ್‍ಹೆಚ್‍ಡಿಪಿ ಯೋಜನೆಯಡಿ ನಗರಭಾಗದ ರಸ್ತೆಗಳ ಅಭಿವೃದ್ದಿಗೆ 10 ಕೋಟಿ ಬಿಡುಗಡೆಯಾಗಿದ್ದು ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕೆಜಿಎಫ್ ಕ್ಷೇತ್ರದ ಪರಿಶಿಷ್ಟಜಾತಿ,ವರ್ಗಗಳ ಜನವಸತಿ ಪ್ರದೇಶಗಳಲ್ಲಿವಿವಿಧ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು 4 ಕೋಟಿ ರೂ ಬಿಡುಗಡೆಯಾಗಿದೆ ಎಂದು ವಿವರಿಸಿದರು.
ಕೆಜಿಎಫ್ ನಗರದ ರಾಬರ್ಟ್‍ಸನ್ ಪೇಟೆಯಿಂದ ರಾಮಕುಪ್ಪಂ ವರೆಗಿನ ರಸ್ತೆ ಅಭಿವೃದ್ದಿಗೆ 4 ಕೋಟಿ ರೂ ಮೀಸಲಿಡಲಾಗಿದೆ, ಬೇತಮಂಗಲ ದಿಂದ ವೆಂಕಟಗಿರಿಕೋಟೆ ರಾಷ್ಟ್ರೀಯ ಹೆದ್ದಾರಿ 95ಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿಗೆ 1 ಕೋಟಿ ರೂ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಇದಲ್ಲದೇ ಕೆಜಿಎಫ್‍ನಲ್ಲಿ ದ್ವಿಪಥ ರಸ್ತೆಗೆ 4 ಕೋಟಿರೂ ಬಿಡುಗಡೆ ಮಾಡಿಸಲಾಗಿದೆ ಎಂದ ಅವರು, ಬೇತಮಂಗಲ-ಕ್ಯಾಸಂಬಳ್ಳಿ ರಸ್ತೆಗೆ 2.30 ಕೋಟಿ ರೂ ಹಾಗೂ ಒಡೆನಿಯಲ್ ರಸ್ತೆ ಸಂಪರ್ಕಕ್ಕೆ 70 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ ಎಂದರು.
ಲೋಕೋಪಯೋಗಿ
ಉಪವಿಭಾಗ ಸ್ಥಳಾಂತರ
ಕೆಜಿಎಫ್ ತಾಲ್ಲೂಕು ರಚನೆಯಾದ ನಂತರ ಅಭಿವೃದ್ದಿಗಾಗಿ ಸರ್ಕಾರದ ಮೇಲೆ ಒತ್ತಡ ಹಾಕಲಾಗಿದೆ ಎಂದ ಅವರು, ತಮ್ಮ ಮನವಿಗೆ ಸರ್ಕಾರ ಸ್ಪಂದಿಸಿದ್ದು, ತಾಲ್ಲೂಕಿಗೆ ಪ್ರತ್ಯೇಕವಾಗಿ ಲೋಕೋಪಯೋಗಿ ಇಲಾಖೆ ಉಪವಿಭಾಗವನ್ನು ಮಂಜೂರು ಮಾಡಿದೆ ಎಂದರು.
ಅದರಂತೆ ಕಳೆದ 2017-18ನೇ ಸಾಲಿನ ಆಯವ್ಯಯದಲ್ಲಿ ಘೋಷಣೆಯಾದಂತೆ ಸರ್ಕಾರ ಕ್ರಮವಹಿಸಿದ್ದು, ಮೈಸೂರಿನ ಲೋಕೋಪಯೋಗಿ ಇಲಾಖೆಯ ವಿಶೇಷ ಉಪವಿಭಾಗವನ್ನು ಹುದ್ದೆಗಳ ಸಮೇತ ಕೆಜಿಎಫ್‍ಗೆ ಸ್ಥಳಾಂತರಿಸಲಾಗಿದೆ, ಇದರಿಂದ ರಸ್ತೆ ಅಭಿವೃದ್ದಿ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಮಿನಿವಿಧಾನಸೌಧ
ಶೀಘ್ರ ಉದ್ಘಾಟನೆ
ಈಗಾಗಲೇ ಕೆಜಿಎಫ್ ನಗರದಲ್ಲಿ ಮಿನಿವಿಧಾನಸೌಧ ಕಾಮಗಾರಿ ಮುಗಿದಿದ್ದು, ಈಗಾಗಲೇ ಜಿಲ್ಲಾಧಿಕಾರಿ ವೆಂಕಟ್‍ರಾಜಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದ ಅವರು, ಉಳಿಕೆ ಕಾಮಗಾರಿ ಶೀಘ್ರ ಮುಗಿಸಿಕೊಟ್ಟು, ಮಿನಿವಿಧಾನಸೌಧ ಉದ್ಘಾಟನೆಗೆ ಮುಂದಿನ ದಿನಗಳಲ್ಲಿ ದಿನಾಂಕ ನಿಗಧಿಗೆ ಕ್ರಮವಹಿಸಲು ಸೂಚಿಸಿದರು.
ನಗರ ಭಾಗದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ ಮುಂದುವರೆದಿದ್ದು, ಅತಿ ಶೀಘ್ರವಾಗಿ ಮುಗಿಸಿಕೊಡಿ ಎಂದು ಕೋರಿದ ಅವರು, ಕೆಜಿಎಫ್ ತಾಲ್ಲೂಕಿನ ಸಮಗ್ರ ಅಭಿವೃದ್ದಿಗಾಗಿ ತಮ್ಮ ಪ್ರಯತ್ನಕ್ಕೆ ವೇಗವಾಗಿ ಸ್ಪಂದಿಸಲು ಮನವಿ ಮಾಡಿದರು.
ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಆರ್.ಚಂದ್ರಶೇಖರ್, 15 ಕೋಟಿ ರೂ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶೀಘ್ರ ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿ ಆರಂಭಿಸುವ ಭರವಸೆ ನೀಡಿದರು.