ಕೋಲಾರ,ಸೆ.9: ಕೆ.ಜಿ.ಎಫ್‍ನಲ್ಲಿ ಬೆಮೆಲ್ ವಶದಿಂದ 967 ಎಕರೆ ಬಳಕೆಯಾಗದ ಭೂಮಿಯನ್ನು ಉಪಯೋಗಿಸಿಕೊಂಡು ಕೈಗಾರಿಕಾ ವಲಯ ಸ್ಥಾಪಿಸಿ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಡಲೇಬೇಕಂಬ ಹಠ ತೊಟ್ಟಿರುವ ಶಾಸಕಿ ರೂಪಕಲಾ ಶಶಿಧರ್ ನಿರಂತರವಾಗಿ ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ.
ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿದ ರೂಪಕಲಾ ಕೆ.ಜಿ.ಎಫ್‍ನ ಕೈಗಾರಿಕಾ ಹಬ್ ಸ್ಥಾಪನೆ ವಿಚಾರವು ಇನ್ನು ಕಾರ್ಯಕತಗೊಳ್ಳದೆ ಇರುವ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆದರು.
ಈ ಸಂಬಂಧ ಲಿಖಿತ ಮನವಿಯನ್ನು ಸಹ ಸಲ್ಲಿಸಿದ ಅವರು ಕೆ.ಜಿ.ಎಫ್‍ನ ಶೋಷಿತ ಸಮುದಾಯಗಳ ಸಾವಿರಾರು ನಿರುದ್ಯೋಗಿಗಳ ಪಾಲಿಗೆ ಆಶಾಕಿರಣವಾಗಿ ಕೆ.ಜಿ.ಎಫ್ ಕೈಗಾರಿಕಾ ವಲಯ ಸ್ಥಾಪನೆಗೆ ಶೀಘ್ರವಾಗಿ ಒತ್ತು ನೀಡುವಂತೆ ಕೋರಿದರು.
1968 ರಲ್ಲಿ ಬೆಮೆಲ್‍ಗೆ ಕೈಗಾರಿಕಾ ಉದ್ದೇಶಕ್ಕಾಗಿ ನೀಡಲಾಗಿದ್ದ 2000 ಎಕರೆ ಭೂಮಿಯ ಪೈಕಿ 973 ಎಕರೆಯನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದು, 20 ವರ್ಷಗಳಿಂದ ಈ ಸಂಬಂಧ ನಿರಂತರ ಪ್ರಯತ್ನ ನಡೆಸಿ ಅನುಪಯುಕ್ತವಾಗಿರುವ ಈ ಭೂಮಿಯನ್ನು ಕೂಡಲೇ ರಾಜ್ಯ ಸರ್ಕಾರ ವಶಕ್ಕೆ ಪಡೆದುಕೊಳ್ಳಬೇಕಾಗಿದೆ.
ಕಂದಾಯ ಇಲಾಖೆ ಸುಪರ್ದಿಗೆ ಹಸ್ತಾಂತರಿಸಿರುವ ಈ ಭೂಮಿಯನ್ನು ಕೈಗಾರಿಕಾ ಇಲಾಖೆಗೆ ವರ್ಗಾಯಿಸಿ ಕೈಗಾರಿಕಾ ವಲಯವಾಗಿ ರೂಪಿಸುವಂತೆ ಹಿಂದಿನ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮತ್ತು ಈಗಿನ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ಗಮನ ಸೆಳೆದಿದ್ದು, ಇಬ್ಬರೂ ಸಹ ಕೆ.ಜಿ.ಎಫ್‍ಗೆ ಆಗಮಿಸಿ ಸಕಾರಾತ್ಮಕ ಪ್ರತಿಕ್ರಿಯೆ ತೋರಿದ್ದರು.
ಒಂದು ವರ್ಷ ಕಳೆದರೂ ಈ ನಿಟ್ಟಿನಲ್ಲಿ ಯಾವುದೇ ಪ್ರಗತಿ ಆಗಿಲ್ಲ. 973 ಎಕರೆ ಭೂಮಿಗೆ ನಯಾಪೈಸೆ ಹಣ ವೆಚ್ಚ ಮಾಡುವ ಅಗತ್ಯವಿಲ್ಲ. ಇದನ್ನು ಕೈಗಾರಿಕಾ ವಲಯವಾಗಿ ರೂಪಿಸಿದರೆ ಸರ್ಕಾರಕ್ಕೆ ನಿರಾಯಾಸವಾಗಿ 1000 ಕೋಟಿ ಆದಾಯ ಬರುತ್ತದೆ ಅಲ್ಲದೆ ಕೆ.ಜಿ.ಎಫ್‍ನಿಂದ ಪ್ರತಿನಿತ್ಯ ಕೆಲಸ ಹುಡುಕಿಕೊಂಡು ಹೋಗುವ ಸವಿರಾರು ಯುವಕ ಯುವತಿಯರಿಗೆ ಹಾಗೂ ಕೋಲಾರ ಜಿಲ್ಲೆಯ ಯುವ ಜನರಿಗೆ ಉದ್ಯೋಗ ಅವಕಾಶ ದೊರಕಿಸಲು ಸಾಧ್ಯವಾಗುತ್ತದೆ ಎಂದು ರೂಪಕಲಾ ಶಶಿಧರ್ ಮನವರಿಕೆ ಮಾಡಿಕೊಟ್ಟರು.
ಕೈಗಾರಿಕಾ ವಲಯ ಸ್ಥಾಪನೆ ವಿಷಯದಲ್ಲಿ ಕಂದಾಯ ಮತ್ತು ಕೈಗಾರಿಕಾ ಇಲಾಖೆಗಳ ನಡುವಣ ಪ್ರಕ್ರಿಯೆಯಲ್ಲಿ ವಿಳಂಭಕ್ಕೆ ಕಾರಣ ಗೊತ್ತಾಗುತ್ತಿಲ್ಲ.
ಆದ್ದರಿಂದ ತಾವು ಮಧ್ಯ ಪ್ರವೇಶಿಸಿ ಎರಡೂ ಇಲಾಖೆಗಳ ಸಮನ್ವಯ ರೂಪಿಸಲು ಕೈಗಾರಿಕಾ ಹಬ್ ಸ್ಥಾಪಿಸುವ ಮೂಲಕ ಜಾಗತಿಕ ವಲಯಗಳು ಕೆ.ಜಿ.ಎಫ್‍ಗೆ ಆಗಮಿಸುವಂತಾಗಬೇಕೆಂದು ಕೋರಿದರು.
ರೂಪಶಶಿಧರ್ ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಕಾರಾತ್ಮಕ ಪ್ರತಿಕ್ರಿಯೆ ತೋರಿದರು. ಈ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರು.