ಶ್ರೀನಿವಾಸಪುರ: ಬಡ್ಡಿರಹಿತ ಸಾಲ ವಿತರಣೆ ಮಾಡುವಲ್ಲಿ ಶಾಸಕ ಕೆ.ಅರ್.ರಮೇಶ್ ಕುಮಾರ್ ಮತದಾರರ ದಾರಿ ತಪ್ಪಿಸುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಆಪಾದಿಸಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಬಾರ್ಡ್ ಮೂಲಕ ಡಿಸಿಸಿ ಬ್ಯಾಕ್‍ಗೆ ನೀಡಿದ ಹಣದಲ್ಲಿ ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಸಾಲ ನೀಡಲಾಗುತ್ತಿದ್ದೆ. ಸಾಲ ನೀಡುವುದಕ್ಕೆ ನನ್ನ ಆಕ್ಷೇಪವಿಲ್ಲ. ಆದರೆ ಶಾಸಕರು ತಮ್ಮ ಜೇಬಿನಿಂದ ಹಣ ತೆಗೆದು ಸಾಲ ನೀಡಿದಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರು ಮೂರು ತಲೆಮಾರಿಗೆ ಸಾಕಾಗುಷ್ಟು ಅಸ್ತಿ ಮಾಡಿಕೊಂಡಿದ್ದಾರೆ ಎಂದು ಹೇಳುವುದರ ಮೂಲಕ, ಆ ಪಕ್ಷದ ಮುಖಂಡರ ನಿಜ ಬಣ್ಣ ಬಯಲು ಮಾಡಿದ್ದಾರೆ. ಸದನದಲ್ಲಿ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವ ಅವರಿಗೆ ಮಹಿಳೆಯರ ಸಬಲೀಕರಣ ಕುರಿತು ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಅಭಿಪ್ರಾಯಪಟ್ಟರು.
ಡಿಸಿಸಿ ಬ್ಯಾಂಕ್ ಸಾಲ ಸಾರ್ವಜನಿಕ ಸಮಾರಂಭದಲ್ಲಿ ವಿತರಿಸುವುದು ನಿಯಮ ಬಾಹಿರವಾಗಿದ್ದರೂ, ಸಾವಿರಾರು ಜನರನ್ನು ಸೇರಿಸಿ ಸಾಲ ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 80 ಸಾವಿರ ಸ್ತ್ರೀ ಶಕ್ತಿ ಸಂಘಗಳಿವೆ. ತಾಲ್ಲೂಕಿನಲ್ಲಿ ಸುಮಾರು 15 ಸಾವಿರ ಸಂಘಗಳಿವೆ. ಆ ಪೈಕಿ 1 ಸಾವಿರ ಸಂಘಗಳು ನಿಯಮಬಾಹಿರವಾಗಿವೆ. 50 ಕೋಟಿ ಸಾಲ ನೀಡಲಾಗಿದ್ದು ಆ ಪೈಕಿ 20 ಕೋಟಿ ದುರ್ಬಳಕೆಯಾಗಿದೆ. ಈ ಕುರಿತು ಸಿಬಿಐ ತನಿಖೆ ನಡೆಸುವಂತೆ ಮುಖ್ಯ ಮಂತ್ರಿಗೆ ದೂರು ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ನಾರಾಯಣಸ್ವಾಮಿ, ಪುರಸಭೆ ಸದಸ್ಯ ಬಿ.ವೆಂಕಟರೆಡ್ಡಿ, ಮುಖಂಡರಾದ ಆನಂದ್, ಏಜಾಜ್ ಪಾಷ, ಪೂಲ ಶಿವಾರೆಡ್ಡಿ, ಜಗದೀಶ್, ಮಂಜುನಾಥ್ ಇದ್ದರು.