ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಾಸಕ ಕೆ.ಶ್ರೀನಿವಾಸಗೌಡ ಮತದಾನ -ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಕುರ್ಕಿ ರಾಜೇಶ್ವರಿ ಆಗ್ರಹ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ,ಜೂ.9: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಮೂಲಕ ಶಾಸಕ ಕೆ.ಶ್ರೀನಿವಾಸಗೌಡ ಕ್ಷೇತ್ರದ ಜನರಿಗೆ ನಂಬಿಕೆ ದ್ರೋಹ ಮಾಡಿದ್ದಾರೆ. ಇವರಿಗೆ ನೈತಿಕತೆ ಇದ್ದರೆ ಈ ಕೂಡಲೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ತಾಲೂಕು ಜೆಡಿಎಸ್ ಅಧ್ಯಕ್ಷೆ ಕುರ್ಕಿರಾಜೇಶ್ವರಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ವಿರುದ್ದ ಕೆಲವು ಶಾಸಕರು ಮುನಿಸಿಕೊಂಡಿದ್ದರೂ ಕೂಡ ಅವರು ಜೆಡಿಎಸ್ ಅಭ್ಯರ್ಥಿಗೆ ಮತ ಚಲಾಯಿಸಿ ತಮ್ಮ ನಿಷ್ಠೆಯನ್ನ ತೋರ್ಪಡಿಸಿದ್ದಾರೆ. ಆದರೆ ಶಾಸಕ ಕೆ.ಶ್ರೀನಿವಾಸಗೌಡರು ಜೆಡಿಎಸ್‍ನಲ್ಲಿ ಶಾಸಕರಾಗಿದ್ದರೂ ಕೂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿರುವುದು ಕೋಲಾರ ಕ್ಷೇತ್ರದ ಮತದಾರರಿಗೆ ಮಾಡಿದ ದ್ರೋಹವಾಗಿದೆ ಎಂದು ಕಿಡಿಕಾರಿದ್ದಾರೆ.
2018ರ ಚುನಾವಣೆಯ ಸಂದರ್ಭದಲ್ಲಿ ಕೆ.ಶ್ರೀನಿವಾಸಗೌಡರು ಕಾಂಗ್ರೆಸ್ ಪಕ್ಷಕ್ಕೆ ಹೋದಾಗ ಇದೇ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಯಾಕೆ ಟಿಕೆಟ್ ಕೊಡಿಸಲಿಲ್ಲ. ಆಗ ಇದೇ ಶ್ರೀನಿವಾಸಗೌಡರು ಇನ್ನೇನು ನನ್ನ ರಾಜಕಾರಣ ಇಲ್ಲಿಗೆ ಅಂತ್ಯವಾಯಿತು ಎಂದು ಕೈ' ಕಟ್ಟಿ ಕುಳಿತಿದ್ದಾಗ ಇವರಿಗೆ ರಾಜಕಾರಣದ ಕೊನೆಯ ದಿನಗಳಲ್ಲಿ ಅವರನ್ನ ಕೈ ಹಿಡಿದಿದ್ದು ಇದೇ ಜೆಡಿಎಸ್ ಪಕ್ಷ ಅನ್ನುವುದನ್ನ ಶಾಸಕರು ಮರೆತು ಹೋಗಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರು ಆ ದಿನಗಳಲ್ಲಿ ಕೆ.ಶ್ರೀನಿವಾಸಗೌಡರಿಗೆ ಟಿಕೆಟ್ ಕೊಡುವುದು ಬೇಡ. ನಿಮ್ಮಲ್ಲಿಯೇ ಯಾರಾದರೂ ಮುಂದೆ ಬಂದರೆ ಅವರಿಗೆ ಟಿಕೇಟ್ ನೀಡುತ್ತೇವೆ ಎಂದು ಹೇಳಿದ್ದರು. ಆವತ್ತಿನ ದಿನಗಳಲ್ಲಿ ಜೆಡಿಎಸ್ ಪಕ್ಷದಿಂದ ಟಿಕೆಟ್ ಬಯಸಿ ಸಾಕಷ್ಟು ಮಂದಿ ಆಕಾಂಕ್ಷಿಗಳು ಇದ್ದರು. ಅವತ್ತಿನ ಪರಿಸ್ಥಿತಿಯಲ್ಲಿ ಕೆ.ಶ್ರೀನಿವಾಸಗೌಡರು ಹಿರಿಯರು, ಎಲ್ಲೂ ಕೂಡ ಭ್ರಷ್ಠಾಚಾರ ಮಾಡಿಲ್ಲ, ಸಾರ್ವಜನಿಕ ಜೀವನದಲ್ಲಿ ಒಳ್ಳೆಯ ಹೆಸರನ್ನ ಗಳಿಸಿದ್ದು ಅಲ್ಲದೆ ಸ್ವಚ್ಚ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಇಂತಹವರು ರಾಜಕಾರಣದ ಕೊನೆಯ ದಿನಗಳಲ್ಲಿ ನೋವು ಅನುಭವಿಸಬಾರದು ಹಾಗೂ ಜೆಡಿಎಸ್ ಪಕ್ಷದ ಅಸ್ಥಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಎಲ್ಲಾ ಮುಖಂಡರು ಒಂದಾಗಿ ಕೆ.ಶ್ರೀನಿವಾಸಗೌಡರಿಗೆ ಟಿಕೆಟ್ ತಂದು ಚುನಾವಣೆಗೆ ಬೇಕಾದ ಖರ್ಚುವೆಚ್ಚಗಳನ್ನ ಭರಿಸಿ ಅವರನ್ನ ಶಾಸಕರನಾಗಿ ಆಯ್ಕೆ ಮಾಡಿ ಅವರಿಗೆ ಶಕ್ತಿ ಕೊಟ್ಟಿದ್ದೆವು. ಇದನ್ನ ಪರಿಗಣಿಸಿ ಶಾಸಕ ಕೆ.ಶ್ರೀನಿವಾಸಗೌಡರು ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿ ಕ್ಷೇತ್ರದ ಮತದಾರರ ಋಣವನ್ನು ತೀರಿಸಬಹುದಾಗಿತ್ತು. ಅಲ್ಲದೆ ಜೆಡಿಎಸ್ ವರಿಷ್ಠರ ಮನವಿಯನ್ನ ಪರಿಗಣಿಸಿಲ್ಲ. ಆದರೆ ಕಾಂಗ್ರೆಸ್ ಪಕ್ಷದ ಮುಖಂಡರುಗಳ ಮಾತುಗಳನ್ನ ನಂಬಿಕೊಂಡು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿ ಇಡೀ ಕ್ಷೇತ್ರದ ಜನರಿಗೆ ಮೋಸ ಮಾಡಿದ್ದಾರೆ. ಶಾಸಕ ಕೆ.ಶ್ರೀನಿವಾಸಗೌಡರು ರಾಜಕಾರಣದಲ್ಲಿ ನೈತಿಕತೆಯನ್ನ ಉಳಿಸಿಕೊಂಡಿದ್ದರೆ ಈ ಕೂಡಲೇ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿ. ಅದು ಬಿಟ್ಟು ಅಧಿಕಾರಕ್ಕಾಗಿಜೆಡಿಎಸ್ ಶಾಸಕ’ ಸ್ಥಾನವನ್ನು ಬಳಕೆ ಮಾಡಿಕೊಳ್ಳುತ್ತಿರುವ ಅವರ ನಡೆಯನ್ನು ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕುರ್ಕಿ ರಾಜೇಶ್ವರಿ ತೀವ್ರವಾಗಿ ಖಂಡಿಸಿದ್ದಾರೆ.