

ಕಾಪು: ಕಾಪು ತಾಲೂಕು ಕಟ್ಟಿಂಗೇರಿ ಗ್ರಾಮದ ಕುದುರೆಮಲೆ ಎಂಬಲ್ಲಿ ಖಾಸಗಿ ಸ್ಥಳದಲ್ಲಿದ್ದ ಶಿಲುಬೆಯೊಂದನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆಬ್ರವರಿ 19 ರಂದು ಕಟ್ಟಿಂಗೇರಿ ಗ್ರಾಮದ ಕುದುರೆಮಲೆ ಬಿಟ್ಟದಲ್ಲಿದ್ದ ಪವಿತ್ರ ಶಿಲುಬೆಯನ್ನು ಯಾರೋ ದುಷ್ಕರ್ಮಿಗಳು ಕೆಡವಿ ಧ್ವಂಸ ಮಾಡಿರುವುದು ಗಮನಕ್ಕೆ ಬಂದಿದೆ. ಈ ಪವಿತ್ರ ಶಿಲುಬೆಯು ಕ್ರೈಸ್ತ ಸಮುದಾಯದ ಹಾಗೂ ಕುಟುಂಬದ ಪೂಜಾ ಸ್ಥಳವಾಗಿದೆ. ಈ ಕೃತ್ಯದಿಂದ ತಮಗೆ ಆಘಾತವಾಗಿದ್ದು ಕ್ರೈಸ್ತ, ಧರ್ಮಕ್ಕೆ ಅಪಮಾನವಾಗಿದೆ. ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕಟ್ಟಿಂಗೇರಿ ನಿವಾಸಿ ಪ್ಲಾಲೀವನ್ ಎಂಬವರು ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಶಿರ್ವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.