ಕೇಂದ್ರ ಮತ್ತು ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು , ಯೋಜನೆಗಳು ಫಲಾನುಭವಿಗಳಿಗೆ ದೊರಕಬೇಕು :ಕ.ರಾ.ಅ.ಅ.ನಿ. ಅಧ್ಯಕ್ಷ ಅಬ್ದುಲ್ ಅಜೀಮ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ : ಕೇಂದ್ರ ಮತ್ತು ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು , ಈ ಯೋಜನೆಗಳು ಅರ್ಹ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ದೊರಕಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಅಬ್ದುಲ್ ಅಜೀಮ್ ಅವರು ತಿಳಿಸಿದರು . ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ , ಪ್ರಧಾನ ಮಂತ್ರಿಗಳ 15 ಅಂಶಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು . ಸರ್ಕಾರವು ಯೋಜನೆಗಳಲ್ಲಿ ಶೇ . 15 ರಷ್ಟನ್ನು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮೀಸಲಿಟ್ಟಿದೆ . ಈ ಯೋಜನೆಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಪ್ರಗತಿಯಾಗಿದೆ . ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸಿ ಅಹವಾಲುಗಳನ್ನು ಸ್ವೀಕರಿಸಿ ಸಂಬಂಧಿಸಿದ ಇಲಾಖೆಗಳಿಗೆ ರವಾನಿಸಿ ಪರಿಹರಿಸಲಾಗುವುದು . ಇಂದು ಅಧಿಕಾರಿಗಳಿಂದ ಪ್ರಗತಿ ಕುರಿತ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು . ಕೋಲಾರ ಜಿಲ್ಲೆಯು ಬುದ್ಧಿವಂತರಿಂದ ಕೂಡಿದ ಜಿಲ್ಲೆಯಾಗಿದೆ . ಕೆ.ಎ.ಎಸ್ ಮತ್ತು ಐ.ಎ.ಎಸ್ ಹುದ್ದೆಗಳಿಗೆ ಜಿಲ್ಲೆಯ ಜನ ಹೆಚ್ಚಾಗಿ ಆಯ್ಕೆಯಾಗುತ್ತಿದ್ದಾರೆ . ಜಿಲ್ಲೆಗೆ ಮುಂದೆ ಉತ್ತಮವಾದ ಭವಿಷ್ಯವಿದೆ . ದೇಶದಲ್ಲಿ ನೀರಿನ ಅಭಾವ ಉಂಟಾದಾಗ ಸಮುದ್ರದ ನೀರನ್ನು ಸಂಸ್ಕರಿಸಿ ಬಳಸಬೇಕಾಗುತ್ತದೆ . ಕೋಲಾರ ಜಿಲ್ಲೆಯು ಸಮುದ್ರಕ್ಕೆ 250 ಕೀ.ಮೀ ದೂರದಲ್ಲಿದ್ದು , ಸಂಸ್ಕರಿಸಿದ ನೀರು ಮೊದಲು ಕೋಲಾರ ಜಿಲ್ಲೆಗೆ ದೊರೆಯುತ್ತದೆ . ಇದರಿಂದ ಜಿಲ್ಲೆ ಅಭಿವೃದ್ಧಿ ಹೊಂದುತ್ತದೆ . ಜಿಲ್ಲೆಯು ಕೆರೆ ಮತ್ತು ಬೆಟ್ಟಗಳಿಂದ ಕೂಡಿದ್ದು , ಬೆಟ್ಟಗಳ ಮೇಲೆ ಬಿದ್ದ ಮಳೆ ನೀರು ಕೆರೆಗೆ ಹರಿಯಲು ಸೂಕ್ತ ಅವಕಾಶವಿಲ್ಲ . ಆದ್ದರಿಂದ ಬೆಟ್ಟಗಳ ಸುತ್ತ ಟ್ರಂಚ್ ಹೊಡೆದು ನೀರು ಸರಾಗವಾಗಿ ಕೆರೆಗೆ ಹರಿಯುವಂತೆ ಮಾಡಬೇಕು . ಇದರಿಂದ ಕೆರೆಗಳು ಬೇಗ ತುಂಬುತ್ತವೆ ಎಂದು ಸಲಹೆ ನೀಡಿದರು ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ಮಾತನಾಡಿ , ಜಿಲ್ಲೆಯಲ್ಲಿ 6 ಅಲ್ಪಸಂಖ್ಯಾತರ ವಸತಿ ಶಾಲೆಗಳಿದ್ದು , ಅಲ್ಲಿಗೆ ಅಗತ್ಯವಿರುವ ವಿದ್ಯಾರ್ಥಿಗಳ ದಾಖಲಾತಿಗೆ ಜಾಗೃತಿ ಮೂಡಿಸಲಾಗಿದೆ . ಕೊವಿಡ್ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಕೊವಿಡ್ ಪರೀಕ್ಷೆಗಳನ್ನು ಮಾಡಲಾಗಿದೆ . ಜಿಲ್ಲೆಯಲ್ಲಿ ಮೌಲಾನ ಅಚಾದ್ ಮಾದರಿ ಶಾಲೆಗಳು 4 ಇದ್ದು , ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಶೇ . 100 ರಷ್ಟು ಫಲಿತಾಂಶ ಬಂದಿದೆ . ಜಿಲ್ಲೆಯಲ್ಲಿ 162 ಅಲ್ಪಸಂಖ್ಯಾತ ಅಂಗನವಾಡಿ ಕೇಂದ್ರಗಳು , 163 ಸರ್ಕಾರಿ ಉರ್ದು ಶಾಲೆಗಳು ಹಾಗೂ 5 ಅನುದಾನಿತ ಉರ್ದು ಶಾಲೆಗಳಿವೆ ಎಂದು ಮಾಹಿತಿ ನೀಡಿದರು . ಸಭೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಮೆಹಬೂಬ್ ಸಾಬ್ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ನಾಗರಾಜ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ , ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಇಲಕ್ಕಿಯಾ ಕರುಣಾಕರನ್ ಸೇರಿದಂತೆ ಅಲ್ಪಸಂಖ್ಯಾತರ ಸಮುದಾಯದ ಮುಖಂಡರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು .